ಶನಿವಾರ, ಜನವರಿ 22, 2022
16 °C
‘ಡ್ರೀಮ್ ಎಜ್ಯುಕೇಷನ್ ಸರ್ವೀಸಸ್’ ಕಚೇರಿಗೆ ತೆರೆದಿದ್ದ ಆರೋಪಿಗಳು

ನಕಲಿ ಅಂಕಪಟ್ಟಿ ಜಾಲ ಪತ್ತೆ: ಇಬ್ಬರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕಲಿ ಅಂಕಪಟ್ಟಿ

ಬೆಂಗಳೂರು: ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಅಮೃತಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

‘ಡ್ರೀಮ್ ಎಜ್ಯುಕೇಷನ್ ಸರ್ವೀಸಸ್’ ಹೆಸರಿನಲ್ಲಿ ನಗರದ ಹೆಬ್ಬಾಳ ಕೆಂಪಾಪುರದಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು, ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದರು. ಈ ಜಾಲದ ಬಗ್ಗೆ ಎಚ್‌.ಎಸ್‌. ಮೋಹನ್‌ಕುಮಾರ್ ಎಂಬುವರು ವಿಡಿಯೊ ಸಮೇತ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಿಮಾಚಲ ಪ್ರದೇಶದ ಅರ್ನಿ ವಿಶ್ವವಿದ್ಯಾಲಯ, ಐಇಸಿ ವಿಶ್ವವಿದ್ಯಾಲಯ ಹಾಗೂ ರಾಯ್‌ಪುರದ ಕಳಿಂಗ ವಿಶ್ವವಿದ್ಯಾಲಯ ಹೆಸರಿನಲ್ಲಿ ತಯಾರಿಸಿದ್ದ ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಪ್ರಮುಖ ಆರೋಪಿಗಳು ಎನ್ನಲಾದ ರಾಕೇಶ್ ಹಾಗೂ ಕೃಷ್ಣ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿವೆ.

‘ಉನ್ನತ ವ್ಯಾಸಂಗ ಪೂರ್ಣ ಗೊಳಿಸಲು ನೆರವು ನೀಡುವುದಾಗಿ ಹೇಳಿ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಅದನ್ನು ಗಮನಿಸುತ್ತಿದ್ದ ಯುವಜನತೆ, ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಾಲೇಜಿಗೆ ಪ್ರವೇಶ ಪಡೆದ ನಂತರ, ತರಗತಿಗಳಿಗೆ ಹಾಜರಾಗಬೇಕು. ನಂತರ, ಪರೀಕ್ಷೆಯನ್ನೂ ಬರೆಯಬೇಕು. ಬಳಿಕವೇ ಅಂಕಪಟ್ಟಿ ಸಿಗುತ್ತದೆ. ಇದರ ಬದಲು ಹಣ ಕೊಟ್ಟರೆ, ಪರೀಕ್ಷೆ ಇಲ್ಲದೇ ಕೆಲವೇ ದಿನಗಳಲ್ಲಿ ಅಂಕಪಟ್ಟಿ ಕೊಡುತ್ತೇವೆ’ ಎಂದು ಆರೋಪಿಗಳು ಹೇಳುತ್ತಿದ್ದರು. ಅದನ್ನು ನಂಬಿ ಹಲವರು ಹಣ ಕೊಟ್ಟು ಅಂಕಪಟ್ಟಿಯನ್ನೂ ಪಡೆದಿದ್ದಾರೆ. ಅವರಲ್ಲಿ ಬಹುಪಾಲು ಮಂದಿ, ಖಾಸಗಿ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ’ ಎಂದೂ ಮೂಲಗಳು ವಿವರಿಸಿವೆ.

‘₹ 47 ಸಾವಿರಕ್ಕೆ ಬಿ.ಕಾಂ ಅಂಕಪಟ್ಟಿ’

‘ದೂರುದಾರರ ಪರಿಚಯಸ್ಥರೊಬ್ಬರು, ಬಿ.ಕಾಂ ಪದವಿ ಅಂಕಪಟ್ಟಿ ಬೇಕೆಂದು ಹೇಳಿಕೊಂಡು ಆರೋಪಿಗಳ ಬಳಿ ಹೋಗಿದ್ದರು. ₹ 47 ಸಾವಿರ ಕೊಟ್ಟರೆ ಅಂಕಪಟ್ಟಿ ನೀಡುವುದಾಗಿ ಆರೋಪಿಗಳು ಹೇಳಿದ್ದರು. ಜೊತೆಗೆ, ಕೆಲ ಅಂಕಪಟ್ಟಿಗಳನ್ನು ತೋರಿಸಿದ್ದರು. ಆದರೆ, ಅವೆಲ್ಲ ನಕಲಿ ಅಂಕಪಟ್ಟಿಗಳಾಗಿದ್ದವು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು