ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಒಸಿ: ತಪ‍್ಪಿತಸ್ಥರ ಮೇಲೆ ಕಾನೂನು ಕ್ರಮ

ಬೆನ್ನಿಗಾನಹಳ್ಳಿಯಲ್ಲಿ ಕಟ್ಟಡಕ್ಕೆ ಸುಳ್ಳು ಪ್ರಮಾಣಪತ್ರ; ಪೊಲೀಸರಿಗೆ ದೂರು
Last Updated 30 ಜನವರಿ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯಿಂದ ನಿವೃತ್ತರಾದವರು ನಕಲಿ ಸ್ವಾಧೀನ ಪ್ರಮಾಣಪತ್ರ (ಒಸಿ) ನೀಡಿರುವುದು ಆಂತರಿಕ ತನಿಖೆಯಿಂದ ಗೊತ್ತಾಗಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಒಂದೆರಡು ಪ್ರಕರಣಗಳಲ್ಲಿ ನಕಲಿ ಒಸಿ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರಿಂದ ಆಂತರಿಕ ತನಿಖೆ ನಡೆಸಲಾಯಿತು. ನಿವೃತ್ತರಾದ ಸಿಬ್ಬಂದಿ ಇಂತಹ ನಕಲಿ ಒಸಿ ತಯಾರು ಮಾಡಿರುವುದು ಕಂಡುಬಂದಿದೆ. ಇದೇ ರೀತಿಯ ಪ್ರಕರಣಗಳು ಕೆಲವೆಡೆ ನಡೆದಿರಬಹುದು. ಹೀಗಾಗಿ ಎಲ್ಲವನ್ನೂ ತನಿಖೆ ಮಾಡಲು ಸೂಚಿಸಲಾಗಿದೆ ಎಂದರು.

‘ಕೆಲವು ನಾಗರಿಕರು ಕೂಡ ನಕಲಿ ಒಸಿ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಸಿಬ್ಬಂದಿಯೂ ಗಮನಕ್ಕೆ ತಂದಿದ್ದರು. ಎಲ್ಲ ತಪ್ಪಿಸ್ಥರಿಗೂ ಶಿಕ್ಷೆಯಾಗುತ್ತದೆ’ ಎಂದರು.

‘ಇದೀಗ ಒಸಿ ನೀಡುವ ಪ್ರಕ್ರಿಯೆ ಮ್ಯಾನ್ಯುಯಲ್‌ ಆಗಿದ್ದು, ನಂತರ ಅದನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲೇ ನಕ್ಷೆಯಿಂದ ಹಿಡಿದು ಎಲ್ಲ ಪ್ರಕ್ರಿಯೆ ನಡೆದು, ಅಲ್ಲೇ ಒಸಿ ವಿತರಿಸುವ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಅದಾದರೆ ಎಲ್ಲವೂ ನಮ್ಮ ವೆಬ್‌ಸೈಟ್‌ನಲ್ಲೇ ಲಭ್ಯವಾಗುತ್ತದೆ’ ಎಂದರು.

‘ಶೋಭಾ ಡೆವಲಪರ್ಸ್‌ ಅವರಿಗೆ ಒಸಿ ನೀಡಲ್ಲ ಎಂದು ನಾವು ‌ಹೇಳಿಲ್ಲ. ಆದರೆ ಅವರು ಹಿಂದೆ ನಕಲಿ ಪ್ರಮಾಣಪತ್ರ ನೀಡಿದ್ದರಿಂದ ರದ್ದು ಮಾಡಲಾಗಿತ್ತು. ಇದೀಗ ಅಗ್ನಿಶಾಮಕ ದಳದಿಂದ ಪ್ರಮಾಣಪತ್ರ ಬಂದಿದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ’ ಎಂದರು.

ಕಾನೂನು ಕ್ರಮಕ್ಕೆ ಮನವಿ

ಬಿಬಿಎಂಪಿ ವಾರ್ಡ್‌ ನಂ. 50 ಬೆನ್ನಿಗಾನಹಳ್ಳಿಯಲ್ಲಿ ಆಸ್ತಿ ಮಾಲೀಕರಾದ ಕೆ. ಯತಿರಾಜುಲು ನಾಯ್ಡು ಮತ್ತು ಎಂ. ಆಂಜನಪ್ಪ ಹೆಸರಿನಲ್ಲಿ ನೀಡಲಾಗಿರುವ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸುಳ್ಳು ದಾಖಲೆಯಾಗಿದ್ದು, ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರ ಯೋಜನೆ ವಿಭಾಗದ ಪೂರ್ವ ವಲಯದ ಸಹಾಯಕ ನಿರ್ದೇಶಕರು ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬೆನ್ನಿಗಾನಹಳ್ಳಿ 3ನೇ ಸಿ ಅಡ್ಡರಸ್ತೆ, ಪಾಪಯ್ಯ ಲೇಔಟ್‌ನಲ್ಲಿರುವ ಸ್ವತ್ತಿಗೆ (ಪಿಐಡಿ ಸಂಖ್ಯೆ: 84–97–132–9) ಮಾಲೀಕರು ಖಾತೆಗಳನ್ನು ಪಡೆಯಲು ಒಸಿ ದಾಖಲೆಗಳನ್ನು ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದಾಗ, ಪ್ರಮಾಣಪತ್ರ ಸುಳ್ಳು ದಾಖಲೆಯಂತೆ ಸೃಷ್ಟಿಸಿರುವುದು ಕಂಡುಬಂದಿದೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕು ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿಯಲ್ಲಿ ಪರಿಶೀಲಿಸಿಕೊಳ್ಳಿ...

ನಗರದಲ್ಲಿ 2018ರಿಂದ ಕಟ್ಟಡಗಳಿಗೆ ನಕ್ಷೆ ಅನುಮೋದನೆಯಾಗಿರುವ ಎಲ್ಲ ಮಾಹಿತಿಯನ್ನೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಸ್ವಾಧೀನಾನುಭವ ಪ್ರಮಾಣಪತ್ರವನ್ನೂ (ಒಸಿ) ಅಪ್‌ಲೋಡ್‌ ಮಾಡಲಾಗಿದೆ. ಹೀಗಾಗಿ, ನಾಗರಿಕರು ತಮಗೆ ಅಗತ್ಯವಾಗಿರುವ ನಕ್ಷೆ ಹಾಗೂ ಒಸಿಯನ್ನು ಪರಿಶೀಲಿಸಿಕೊಳ್ಳಬೇಕು. ವಲಯವಾರು ನಕ್ಷೆ, ಒಸಿಯನ್ನೂ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆನ್‌ಲೈನ್‌ನಲ್ಲೇ ಕಟ್ಟಡ ನಕ್ಷೆ ಅನುಮೋದನೆಯಾಗಿರುವುದಕ್ಕೆ ಅಲ್ಲೇ ಒಸಿಯೂ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಕಟ್ಟಡಗಳ ನಕ್ಷೆ, ಒಸಿ ಮಾಹಿತಿ ಎಲ್ಲವೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಬಿಬಿಎಂಪಿ ಕಚೇರಿಯಲ್ಲೂ ಮಾಹಿತಿ ಪಡೆದು ಪರಿಶೀಲಿಸಿಕೊಳ್ಳಬಹುದು. ಈ ಮೂಲಕ ವಂಚನೆಯಾಗುವುದು ತಪ್ಪಿದಂತಾಗುತ್ತದೆ ಎಂದು ಬಿಬಿಎಂಪಿ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಗಿರೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT