ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ವಿರುದ್ಧದ ಸಾಕ್ಷ್ಯ ಹಾಜರುಪಡಿಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ

ಪೊಲೀಸರು ವಶಪಡಿಸಿಕೊಂಡಿದ್ದ ಸ್ವತ್ತುಗಳು
Last Updated 9 ನವೆಂಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮತದಾರರ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆಸಚಿವ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ಹೈಕೋರ್ಟ್‌ ಮುಂದೆ ಹಾಜರುಪಡಿಸಲು ನಿರ್ದೇಶಿಸಬೇಕು’ ಎಂದು ಕೋರಲಾದ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ವಿರುದ್ಧ ಪರಾಜಯ ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಈಗ ವಿಧಾನಪರಿಷತ್‌ ಸದಸ್ಯರೂ ಆದ ತುಳಸಿ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನುನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಮುನಿರಾಜುಗೌಡ ಪರ ವಕೀಲರಾದ ಎಂ.ಶಿವ ಪ್ರಕಾಶ್‌, ‘ತನಿಖೆ ವೇಳೆ ವಶಪಡಿಸಿಕೊಂಡಿರುವ ಸ್ವತ್ತುಗಳು ಕ್ರಿಮಿನಲ್ ಪ್ರಕರಣದಲ್ಲಿ ಸ್ವತ್ತು ಪಟ್ಟಿಗಳು ಎಂದೇ ಪರಿಗಣಿತವಾಗುತ್ತವೆ. ಈ ಸ್ವತ್ತುಗಳು ಮುನಿರತ್ನ ವಿರುದ್ಧದ ಆರೋಪಗಳನ್ನು ಸಾಬೀತಪಡಿಸಲು ಅತ್ಯಂತ ಅವಶ್ಯಕ ಸಾಕ್ಷ್ಯಗಳಾಗಿವೆ. ಆದ್ದರಿಂದ, ಅವುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಬೇಕು.ಈ ಕುರಿತಂತೆ ಸಲ್ಲಿಸಲಾಗಿರುವ ಮಧ್ಯಂತರ ಮನವಿಯನ್ನು ಪುರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ,‘ಇದೊಂದು ಅರೆ ಕ್ರಿಮಿನಲ್ ನ್ಯಾಯಿಕ ಪ್ರಕ್ರಿಯೆ ಆಗಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸ್ವತ್ತುಗಳನ್ನು ವಿಚಾರಣೆಯಲ್ಲಿ ಹಾಜರುಪಡಿಸಲು ಮತ್ತು ನ್ಯಾಯದ ಇತ್ಯರ್ಥಕ್ಕೆ ಒಳಪಡಿಸಲು ಈ ನ್ಯಾಯಾಲಯಕ್ಕೆ ವಿಪುಲವಾದ ಅಧಿಕಾರವಿದೆ’ ಎಂಬ ಅಭಿಪ್ರಾಯಪಟ್ಟಿತು.

‘ಮುನಿರಾಜುಗೌಡ ಪರ ವಕೀಲರು ಸಂಬಂಧಿಸಿದಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರಾಗಿ ಸ್ವತ್ತುಗಳನ್ನುಪರಿಶೀಲಿಸಿ, ಯಾವ ಯಾವ ಸ್ವತ್ತುಗಳ ಅವಶ್ಯಕತೆ ಇದೆ ಎಂಬುದನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟು, ನಂತರ ಅಗತ್ಯ ಸ್ವತ್ತುಗಳ ಪಟ್ಟಿ ನೀಡಿ ಪಡೆಯಬೇಕು’ ಎಂದು ಆದೇಶಿಸಿತು.ಸ್ವತ್ತುಗಳನ್ನು ನ್ಯಾಯಾಲಯಕ್ಕೆ ತರಿಸಲು ಮುನಿರತ್ನ ಪರ ವಕೀಲರು ಬಲವಾದ ಆಕ್ಷೇಪ ವ್ಯಕ್ತಪಡಿಸಿ ತಕರಾರು ಸಲ್ಲಿಸಿದ್ದರು.

ಪ್ರಕರಣವೇನು?: 2018ರ ವಿಧಾನಸಭಾ ಚುನಾ ವಣೆಯ ಸಂದರ್ಭದಲ್ಲಿ ಮುನಿರತ್ನ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಸ್ವತ್ತುಗಳ ಪಟ್ಟಿಯಲ್ಲಿ ಸಿಸಿಟಿವಿ ಫೂಟೇಜು ಗಳು, ಕುಕ್ಕರ್‌ಗಳು, ನಕಲಿ ವೋಟರ್ ಐಡಿಗಳು, ಸ್ಕ್ಯಾನರ್‌ಗಳು, ಜೆರಾಕ್ಸ್ ಯಂತ್ರಗಳು, ಫಾರಂ ನಂಬರ್‌–6 ಸೇರಿದಂತೆ ಇತರೆ ವಸ್ತುಗಳು ಸೇರಿವೆ ಎನ್ನಲಾಗಿದೆ.

‘ಮುನಿರತ್ನ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು’ ಎಂದು ಕೋರಿ, ಮುನಿರಾಜು ಗೌಡ ಈ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT