ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಗಳಿಂದ ರೈತರ ಮೂಲೆ ಗುಂಪು: ನಾಗೇಶ ಹೆಗಡೆ

ವಿಚಾರಸಂಕಿರಣದಲ್ಲಿ ನಾಗೇಶ ಹೆಗಡೆ ಅಭಿಮತ
Published : 10 ಸೆಪ್ಟೆಂಬರ್ 2024, 15:25 IST
Last Updated : 10 ಸೆಪ್ಟೆಂಬರ್ 2024, 15:25 IST
ಫಾಲೋ ಮಾಡಿ
Comments

ಬೆಂಗಳೂರು: ‘ಸರ್ಕಾರಗಳು ರೈತರನ್ನು ಮರೆತು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೋದ್ಯಮಿಗಳಿಗೆ ಇತ್ತೀಚೆಗೆ ಹೆಚ್ಚು ಬೆಂಬಲ ನೀಡಿ, ರೈತರನ್ನು ಮೂಲೆ ಗುಂಪು ಮಾಡುತ್ತಿವೆ’ ಎಂದು ಪರಿಸರ ವಿಜ್ಞಾನಿ ನಾಗೇಶ ಹೆಗಡೆ ತಿಳಿಸಿದರು.

ಸಂಯುಕ್ತ ಹೋರಾಟ– ಕರ್ನಾಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ನೀರಿನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಕೃಷಿ ಮೇಲಿನ ಪರಿಣಾಮಗಳು, ನೀರು, ಭೂಮಿ, ಖನಿಜ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸರಕೀಕರಣ’ ವಿಷಯದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಭೂಮಿ, ಪ್ರಕೃತಿಯನ್ನು ಎಂಟು ಸಾವಿರ ವರ್ಷಗಳಿಂದ ಕಾಪಾಡಿಕೊಂಡು ಬಂದ ರೈತರನ್ನು ಮೂಲೆ ಗುಂಪು ಮಾಡುತ್ತಿರುವುದೇ ಪ್ರಕೃತಿ ವಿಕೋಪಕ್ಕೆ ಪ್ರಮುಖ ಕಾರಣ. ಪ್ರಕೃತಿಯನ್ನು ಮಲಿನಗೊಳಿಸುತ್ತಿರುವ ಖಾಸಗಿ ಕಂಪನಿಗಳಿಗೆ, ಕೃಷಿ ಭೂಮಿ ಸೇರಿದಂತೆ ನೈಸರ್ಗಿಕ ಸಂಪತ್ತನ್ನು ಇನ್ನೂ ಹೆಚ್ಚು ಹೆಚ್ಚು ನೀಡಲಾಗುತ್ತಿದೆ. ಬೃಹತ್‌ ನಿರ್ಮಾಣಗಳಿಗೆ ದೊಡ್ಡ ಯಂತ್ರಗಳನ್ನು ಬಳಕೆ ಮಾಡುತ್ತಿರುವುದರಿಂದ ಭಾರಿ ಪ್ರಮಾಣದ ಇಂಗಾಲ ಪರಿಸರ ಸೇರುತ್ತಿದೆ’ ಎಂದರು.

‘15 ವರ್ಷಗಳಿಂದೀಚೆಗೆ ವಿಶ್ವದಾದ್ಯಂತ ಅನೇಕ ನದಿ, ಸರೋವರಗಳು ಬತ್ತಿಹೋಗುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ ಏಕಾಏಕಿ ಸಂಭವಿಸುತ್ತಿವೆ. ಕಾಡ್ಗಿಚ್ಚು, ಹಿಮಪಾತ, ಸಮುದ್ರ ಮಟ್ಟ ಏರುವ ಜೊತೆಗೆ ಹವಾಮಾನ ಏರುಪೇರಾಗುತ್ತಿದೆ. ಇವೆಲ್ಲಕ್ಕೂ ಮನುಷ್ಯನೇ ಕಾರಣ’ ಎಂದು ಹೇಳಿದರು. 

‘ಜಾಗತಿಕ ತಾಪಮಾನ ಹೆಚ್ಚಳದಿಂದ ಕೃಷಿ ಮೇಲಾಗುತ್ತಿರುವ ಪರಿಣಾಮ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು. ಈ ಪರಿಣಾಮದ ತಡೆಗೆ ವಿಶೇಷ ಯೋಜನೆ ರೂಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ವಿಚಾರಸಂಕಿರಣದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ, ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಜನಾಂದೋಲನ ಮಹಾಮೈತ್ರಿಯ ಸಂಚಾಲಕ ಎಸ್‌.ಆರ್‌. ಹಿರೇಮಠ ಉಪಸ್ಥಿತರಿದ್ದರು.

ಕೃಷಿ ಫಲವತ್ತತೆ ಶೇ 36ರಷ್ಟು ಇಳಿಕೆ: ಪ್ರಕಾಶ್ ಕಮ್ಮರಡಿ

‘ರಾಜ್ಯದಲ್ಲಿ ಕೃಷಿ ಭೂಮಿ ಫಲವತ್ತತೆ ಶೇ 36ರಷ್ಟು ಇಳಿಕೆಯಾಗಿದೆ. ಕೃಷಿ ಹಿಡುವಳಿಗಳು ಸಣ್ಣದಾಗುತ್ತಿವೆ. ಕೃಷಿಗೆ ಆದ್ಯತೆ ಕಡಿಮೆಯಾಗುತ್ತಿದ್ದು ಖಾಸಗಿ ಕಂಪನಿಗಳ ತಾಳಕ್ಕೆ ಸರ್ಕಾರಗಳು ಕುಣಿಯುತ್ತಿವೆ’ ಎಂದು ಕೃಷಿ ಅರ್ಥಶಾಸ್ತ್ರಜ್ಞ ಪ್ರಕಾಶ್‌ ಕಮ್ಮರಡಿ ಅಭಿಪ್ರಾಯಪಟ್ಟರು. ‘ನೈಸರ್ಗಿಕ ಸಂಪನ್ಮೂಲವನ್ನು ತೆಗೆದು ರಫ್ತು ಮಾಡಿದರೆ ದೇಶದ ಜಿಡಿಪಿ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಆದರೆ ಇದರಿಂದ ಜಿಡಿಪಿ ನಷ್ಟವಾಗುತ್ತದೆ ಎಂದು ತೋರಿಸುವಂತಾಗಬೇಕು. ದೇಶಕ್ಕೆ ಹೊಸ ಜಿಡಿಪಿ ಪರಿಕಲ್ಪನೆ ಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT