ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ರೈತರಿಂದ ‘ಬಾರುಕೋಲು’ ಎಚ್ಚರಿಕೆ

ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಕೈಬಿಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ
Last Updated 9 ಡಿಸೆಂಬರ್ 2020, 21:47 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಾವಿರಾರು ರೈತರು ಕೈಯಲ್ಲಿ ‘ಬಾರುಕೋಲು’ ಬೀಸುವ ಮೂಲಕ, ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಕಾಯ್ದೆಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಬುಧವಾರ ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿದ್ದ 'ಬಾರುಕೋಲು ಚಳವಳಿ'ಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ರೈತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಅನ್ನದಾತರ ಪ್ರತಿರೋಧ ಘೋಷಣೆಗಳು ಮಾರ್ದನಿಸಿದವು.

ಬಾರುಕೋಲು ಹಿಡಿದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಮಾರ್ಗಮಧ್ಯೆ ತಡೆದರು. ಇದರಿಂದ ಶೇಷಾದ್ರಿ ರಸ್ತೆಯಲ್ಲಿ ಸಂಜೆವರೆಗೆ ಕೂತು, ರೈತರು ಧರಣಿ ನಡೆಸಿದರು. ಪ್ರತಿಭಟನೆಗಳು ತೀವ್ರಗೊಳ್ಳುವ ಸೂಚನೆ ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸೌಧ ಹಾಗೂ ರಾಜಭವನದ ಸುತ್ತಮುತ್ತ ಬಿಗಿಭದ್ರತೆ ಒದಗಿಸಲಾಗಿತ್ತು.

ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಎಸ್.ಸುರೇಶ್ ಕುಮಾರ್ ಅವರು ರೈತರ ಅಹವಾಲುಗಳನ್ನು ಆಲಿಸಿದರು. ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರೈತರ ಮನವಿಯನ್ನು ತಲುಪಿಸುತ್ತೇನೆ. ಪ್ರತಿಭಟನೆ ನಿಲ್ಲಿಸಿ’ ಎಂದು ರೈತರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ರೈತರು ಬಾರುಕೋಲು ಚಳವಳಿ ಕೈಬಿಟ್ಟರು.

ಬಳಿಕ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ‘ಸರ್ಕಾರ ತಪ್ಪು ದಾರಿಯಲ್ಲಿ ಸಾಗುತ್ತಿರುವುದನ್ನು ತಿದ್ದಿ, ಸರಿ ದಾರಿಗೆ ತರುವ ಸಂಕೇತವಾಗಿ ಬಾರುಕೋಲು ಚಳವಳಿ ನಡೆಸುತ್ತಿದ್ದೇವೆ. ರೈತರಿಗೆ ಮರಣ ಶಾಸನಗಳನ್ನು ಜಾರಿಗೊಳಿಸಲು ಹೊರಟ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡಿದ್ದೇವೆ’ ಎಂದರು.

‘ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಹಿತಗಳನ್ನು ಕುರ್ಚಿ ಆಸೆಗಾಗಿ ಬಲಿ ನೀಡಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಿಶ್ಚಿತ.ರೈತರು ಬಾರುಕೋಲಿನ ‘ಚಡಿ ಏಟು’ ನೀಡಲಿದ್ದಾರೆ’ ಎಂದು ಎಚ್ಚರಿಸಿದರು.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದ ಬಳಿ ರೈತರು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು – ಪ್ರಜಾವಾಣಿ ಚಿತ್ರಗಳು

ರಾಜಭವನಕ್ಕೆ ಕರವೇ ಮುತ್ತಿಗೆ ಯತ್ನ: ರೈತರ ಚಳವಳಿಗೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕಾರ್ಪೊರೇಷನ್ ವೃತ್ತದಿಂದ ರಾಜಭವನದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತು. ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿಯ ಬಳಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಾಥಾ ಆರಂಭಿಸಿದರು. ಕೈಯಲ್ಲಿ ಕನ್ನಡ ಬಾವುಟಗಳನ್ನು ಹಿಡಿದು, ರಾಜಭನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಪರ ಕಾರ್ಯಕರ್ತರನ್ನು ಮೈಸೂರು ಬ್ಯಾಂಕ್ ವೃತ್ತದಲ್ಲೇ ಪೊಲೀಸರು ತಡೆದರು.

ಐಕ್ಯ ಹೋರಾಟ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರತಿ ದಹನ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ರೈತ, ದಲಿತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ವತಿಯಿಂದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಭಾಗವಾಗಿ ಭೂಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲಾಯಿತು. ‘ಭೂಸುಧಾರಣೆ ಕಾಯ್ದೆಗೆ ಜೆಡಿಎಸ್ ಬೆಂಬಲ ಸೂಚಿಸಿರುವುದನ್ನು ವಿರೋಧಿಸಿ, ಪ್ರತಿಭಟನಾ ನಿರತರು ಜೆಡಿಎಸ್ ಕಚೇರಿಗೆ ತೆರಳಿ ಛೀಮಾರಿ ಹಾಕಿದರು. ಪ್ರತಿಭಟನೆಯ ಮುಂದುವರಿದ ಭಾಗವಾಗಿ ಗುರುವಾರ ರಾಜಭವನ ಮುತ್ತಿಗೆ ಹಮ್ಮಿಕೊಂಡಿದೆ. ಬೆಳಿಗ್ಗೆ 10.30ಕ್ಕೆ ಸಂಗೊಳ್ಳಿರಾಯಣ್ಣ ಪ್ರತಿಮೆಯಿಂದ ಪ್ರತಿಭಟನೆ ಆರಂಭಗೊಳ್ಳಲಿದೆ’ ಎಂದು ಸಮಿತಿ ತಿಳಿಸಿದೆ.

ರೈತರೇ ಮಾತುಕತೆಗೆ ಬನ್ನಿ: ಮುಖ್ಯಮಂತ್ರಿ ಬಿಎಸ್‌ವೈ ಮನವಿ

ಬೆಂಗಳೂರು: ‘ಪದೇ ಪದೇ ಬಂದ್, ಪ್ರತಿಭಟನೆ, ಪಾದಯಾತ್ರೆ ಮಾಡಿ ಜನರಿಗೆ ತೊಂದರೆ ಕೊಡುವುದು ಬೇಡ. ಸಮಸ್ಯೆಗಳಿದ್ದರೆ ಮಾತುಕತೆಗೆ ಬನ್ನಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕಷ್ಟ ಪಡುತ್ತಿದ್ದಾರೆ. ರೈತರ ಬಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅತ್ಯಂತ ಕಾಳಜಿ ತೋರುತ್ತಿವೆ. ಮತ್ತೆ ಮತ್ತೆ ಹೋರಾಟ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಹೋರಾಟದಿಂದಲೇ ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ. ನಾನೂ ಕೂಡ ರೈತನ ಮಗನಾಗಿದ್ದು, ರೈತರ ಸಂಕಷ್ಟ ತಿಳಿದಿದೆ. ಸದಾಕಾಲ ರೈತ ಪರವಾಗಿಯೇ ಇರುತ್ತೇನೆ. ನಮ್ಮ ಅನ್ನದಾತರಾದ ರೈತರಿಗೆ ಅನ್ಯಾಯವಾಗಲು ನಾನು ಅವಕಾಶ ನೀಡುವುದಿಲ್ಲ. ರೈತರ ಸಂಶಯಗಳನ್ನು ಸರ್ಕಾರ ಪರಿಹರಿಸಲಿದೆ. ನನ್ನ ವಿನಂತಿ ಇಷ್ಟೇ; ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬೇಡಿ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT