ಮಂಗಳವಾರ, ಜನವರಿ 28, 2020
24 °C

ಫಾಸ್ಟ್ಯಾಗ್‌ | ದಿನ, ತಿಂಗಳ ಪಾಸ್ ರದ್ಧು ಆತಂಕ: ನಿಯಮ ಬದಲಿಗೆ ಒತ್ತಾಯ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಎಲ್ಲ ಟೋಲ್‌ಗೇಟ್‌ಗಳಲ್ಲಿ ಕಡ್ಡಾಯವಾಗುತ್ತಿರುವ ಫಾಸ್ಟ್ಯಾಗ್‌ ವ್ಯವಸ್ಥೆಯ ಕೆಲ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯನ್ನುಂಟು ಮಾಡುವ ಆತಂಕ ಎದುರಾಗಿದ್ದು, ಆ ಬಗ್ಗೆಯೇ ಇದೀಗ ಚರ್ಚೆ ನಡೆಯುತ್ತಿದೆ.

ಎರಡು ವರ್ಷಗಳ ಹಿಂದೆಯೇ ಜಾರಿಗೆ ಬಂದಿರುವ ಫಾಸ್ಟ್ಯಾಗ್‌ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಕಾರಿ ನಿಯಮಗಳು ಇವೆ. ಅವುಗಳನ್ನು ನಿವಾರಿಸಿದ ಬಳಿಕವೇ ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದು ಸೂಕ್ತವೆಂದು ಜನರು ಒತ್ತಾಯಿಸುತ್ತಿದ್ದಾರೆ.

ಪ್ರತಿಯೊಂದು ಟೋಲ್‌ಗೇಟ್‌ನಲ್ಲಿ ಟ್ರಿಪ್, ದಿನದ ಪಾಸ್‌ ಹಾಗೂ ತಿಂಗಳ ಪಾಸ್ ಲೆಕ್ಕದಲ್ಲಿ ನಗದು ರೂಪದಲ್ಲಿ ಶುಲ್ಕ ಸಂಗ್ರಹ ವ್ಯವಸ್ಥೆ ಇದೆ. ಬಹುತೇಕ ಟೋಲ್‌ಗೇಟ್‌ಗಳಲ್ಲಿ ಪಾಸ್ಟ್ಯಾಗ್ ಸಹ ಜಾರಿಯಲ್ಲಿದೆ. ಅದರ ಸ್ಟಿಕ್ಕರ್‌ ಪಡೆದವರಿಂದ ಟ್ರಿಪ್ ಲೆಕ್ಕದಲ್ಲಿ ಮಾತ್ರ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಅವರಿಗೆ ದಿನದ ಹಾಗೂ ತಿಂಗಳ ಪಾಸ್‌ಗಳ ಸೌಲಭ್ಯ ಸಿಗುತ್ತಿಲ್ಲ.

ಇದುವರೆಗೂ ಒಂದು ಕಡೆಯಿಂದ ಮಾತ್ರವಲ್ಲದೇ ದಿನದ ಪಾಸ್ ತೆಗೆದುಕೊಂಡು ರಾತ್ರಿ 12ರವರೆಗೂ ಅನಿಯಮಿತವಾಗಿ ಸಂಚರಿಸುತ್ತಿದ್ದ ವಾಹನಗಳ ಮಾಲೀಕರು, ಇನ್ನು ಮುಂದೆ ಹೆಚ್ಚಿನ ಹಣ‌ ಪಾವತಿಸಬೇಕಾಗಬಹುದು. ಇಂಥ ನಿಯಮದಿಂದ ಬೇಸತ್ತಿರುವ ಕೆಲ ಮಾಲೀಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಫಾಸ್ಟ್ಯಾಗ್‌ ವ್ಯವಸ್ಥೆಯ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಿ ಪಾಸ್‌ ಸೌಲಭ್ಯ ನೀಡುವಂತೆಯೂ ಕೋರಿದ್ದಾರೆ.

‘ಟೋಲ್‌ಗೇಟ್‌ನಲ್ಲಿ ಒಂದು ಬಾರಿ ಸಂಚರಿಸಲು ₹ 20 ಪಾವತಿ ಮಾಡುತ್ತೇನೆ. ಹೆಚ್ಚು ಬಾರಿ ಸಂಚರಿಸಬೇಕಾದರೆ ₹ 35 ಕೊಟ್ಟು ದಿನದ ಪಾಸ್ ತೆಗೆದುಕೊಳ್ಳುತ್ತೇನೆ. ಇದೀಗ ಫಾಸ್ಟ್ಯಾಗ್‌ ಪಡೆದಿದ್ದು, ಒಂದು ಟ್ರಿಪ್‌ಗೆ ₹ 20 ಕಡಿತವಾಗುತ್ತಿದೆ. ದಿನದ ಪಾಸ್‌ ಸೌಲಭ್ಯವಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ಕಾರು ಮಾಲೀಕ ಗೋವಿಂದರಾಜ್ ಹೇಳಿದರು.

‘ಬೆಂಗಳೂರಿನಿಂದ ತುಮಕೂರಿಗೆ ಹೋಗಿಬರಲು ಈ ಹಿಂದೆ ದಿನಕ್ಕೆ ₹ 35 ಕಟ್ಟುತ್ತಿದ್ದೆ. ಆದರೀಗ ಟ್ರಿಪ್‌ಗೆ  ₹ 20 ಫಾಸ್ಟ್ಯಾಗ್‌ ಮೂಲಕ ಬ್ಯಾಂಕ್‌ ಖಾತೆಯಿಂದಲೇ ಕಡಿತವಾಗುತ್ತಿದೆ’ ಎಂದು ಅವರು ತಿಳಿಸಿದರು.

ಟ್ರಿಪ್‌ ಓಡಾಡುವವರಿಗೆ ಅನುಕೂಲ: ‘ಖಾಸಗಿ ಬಸ್‌, ಗೂಡ್ಸ್ ವಾಹನ ಹಾಗೂ ದೂರದ ಪ್ರಯಾಣ ಮಾಡುವರು ಒಂದೇ ಬಾರಿ ಟೋಲ್‌ಗೇಟ್‌ನಲ್ಲಿ ಹಾದು ಹೋಗುತ್ತಾರೆ. ಅವರಿಗೆ ದಿನದ ಪಾಸ್ ಅಗತ್ಯವಿರುವುದಿಲ್ಲ’ ಎಂದು ಖಾಸಗಿ ಬಸ್ ಚಾಲಕ ವೆಂಕಟೇಶ್‌ ಹೇಳಿದರು

‘ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಓಡಾಡುವವರು ಪ್ರತಿ ಟ್ರಿಪ್‌ಗೆ ಹಣ ಪಾವತಿ ಮಾಡಬೇಕು. ಫಾಸ್ಟ್ಯಾಗ್‌ನಿಂದ ಅವರಿಗೆಲ್ಲ ಆರ್ಥಿಕ ಹೊರೆ ಆಗಲಿದೆ. ಸ್ಥಳೀಯ ಕಾರು ಮಾಲೀಕರಿಗೆ ಅದರ ಬಿಸಿ ತಟ್ಟಲಿದೆ’ ಎಂದರು.

ಓಲಾ, ಟ್ಯಾಕ್ಸಿ ಫಾರ್ ಶ್ಯೂರ್, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ, ‘ದಿನದ ಪಾಸ್‌ ಹಾಗೂ ತಿಂಗಳ ಪಾಸ್‌ಗಳನ್ನು ರದ್ದುಪಡಿಸುವ ಮೂಲಕ ವಾಹನಗಳ ಮಾಲೀಕರಿಗೆ ಅನ್ಯಾಯ ಮಾಡಲಾಗಿದೆ. ತಿಂಗಳ ಪಾಸ್‌ ನೀಡುವುದಾಗಿ ಹೇಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಂಥ ಯಾವುದೇ ಸೌಲಭ್ಯವನ್ನು ಇದುವರೆಗೂ ಕಲ್ಪಿಸಿಲ್ಲ’ ಎಂದು ದೂರಿದರು.

‘ಫಾಸ್ಟ್ಯಾಗ್‌ ವ್ಯವಸ್ಥೆಯೇ ಅವೈಜ್ಞಾನಿಕವಾಗಿದೆ. ದಿನದ ದುಡಿಮೆ ನಂಬಿಕೊಂಡು ಜೀವನ ನಡೆಸುವ ಚಾಲಕರು ಹೆಚ್ಚುವರಿಯಾಗಿ ಶುಲ್ಕ ಪಾವತಿಸುವಂತಾಗಿದೆ. ಒಂದೇ ರಸ್ತೆಯಲ್ಲೇ ಹಲವು ಬಾರಿ ಓಡಾಡುವ ಚಾಲಕರಿಗೆ ವಿನಾಯಿತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. 

 

ನವಯುಗ ಟೋಲ್‌ಗೇಟ್‌ನ ಸದ್ಯದ ಶುಲ್ಕ

ವಾಹನಗಳ ಮಾದರಿ; ಒಂದು ಕಡೆ ಸಂಚಾರ; ದಿನದ ಪಾಸ್;ತಿಂಗಳ ಪಾಸ್

ಕಾರು, ಜೀಪು, ವ್ಯಾನ್, ಲಘು ವಾಹನ; 20;35;670

 ಮಿನಿ ಬಸ್, ಎಲ್‌ಸಿವಿ, ಎಲ್‌ಜಿವಿ;35;55;1,115

ಬಸ್‌, ಟ್ರಕ್;75;115;2,290

‌ಎಚ್‌ಸಿಎಂ, ಇಎಂಇ, ಎಂಎವಿ (3–6 ಎಕ್ಸೆಲ್);125;185;3,685 

 

ಗೊಂದಲ ನಿವಾರಣೆಗೆ ಕ್ರಮ

‘ಫಾಸ್ಟ್ಯಾಗ್‌ನಲ್ಲಿ ಟ್ರಿಪ್ ಜೊತೆಗೆ ಪಾಸ್‌ ಸೌಲಭ್ಯ ಸಿಗುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸಾಫ್ಟ್‌ವೇರ್‌ನಲ್ಲೂ ಕೆಲ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ’ ಎಂದು ನೆಲಮಂಗಲ
ದಲ್ಲಿರುವ ನವಯುಗ ಟೋಲ್‌ಗೇಟ್‌ ವ್ಯವಸ್ಥಾಪಕ
ಲಕ್ಷ್ಮಣ ಹೇಳಿದರು. 

‘ಫಾಸ್ಟ್ಯಾಗ್ ಸ್ಟಿಕರ್ ಅಂಟಿಸಿಕೊಂಡು ಬರುವ ವಾಹನದ ಮೊದಲ ಟ್ರಿಪ್‌ಗೆ ₹ 20 ಕಡಿತವಾಗಲಿದೆ. ಆ ನಂತರ, ಅದೇ ವಾಹನ ವಾಪಸು ಟೋಲ್‌ಗೇಟ್‌ನಲ್ಲಿ ಹಾದು ಹೋದರೆ ಎರಡನೇ ಬಾರಿ ₹ 15 ಕಡಿತವಾಗಲಿದೆ. ಬಳಿಕ, ರಾತ್ರಿ 12ರವರೆಗೆ ಎಷ್ಟು ಬಾರಿ ಬೇಕಾದರೂ ವಾಹನ ಓಡಾಡಬಹುದು. ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಈ ನಿಯಮದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಲವು ಸಭೆಯಲ್ಲಿ ಚರ್ಚಿಸಿದ್ದಾರೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು