ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿ ಹತ್ಯೆ | ₹300 ಕೋಟಿ ಆಸ್ತಿಗಾಗಿ ತಂದೆಯನ್ನೇ ಕೊಲ್ಲಿಸಿದ್ದ

ಬೈಕ್ ನೋಂದಣಿ ಸಂಖ್ಯೆಯಿಂದ ಸಿಕ್ಕಿಬಿದ್ದ ಹಂತಕರು
Last Updated 19 ಜೂನ್ 2020, 16:50 IST
ಅಕ್ಷರ ಗಾತ್ರ

ಬೆಂಗಳೂರು:ಸುಮಾರು ₹300 ಕೋಟಿ ಮೌಲ್ಯದ ಆಸ್ತಿಯಲ್ಲಿ ತನಗೆ ಪಾಲು ಕೊಡಲಿಲ್ಲ ಎಂದು ಕೋಪಗೊಂಡಿದ್ದ ಮಗನೊಬ್ಬ ತಂದೆಯನ್ನೇ ಸುಪಾರಿ ಹಂತಕರಿಂದ ಕೊಲ್ಲಿಸಿದ್ದ ಪ್ರಕರಣವನ್ನು ಭೇದಿಸಿರುವ ತಲಘಟ್ಟಪುರ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ತಲಘಟ್ಟಪುರದ ಗುಬ್ಬಲಾಳ ಮುಖ್ಯರಸ್ತೆಯ ರಾಯಲ್ ಬಡಾವಣೆಯಲ್ಲಿ ಫೆಬ್ರುವರಿ 14ರಂದು ಉದ್ಯಮಿ ಸಿಂಗನಮಲ ಮಾಧವ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳಾದ ಯಲಹಂಕದ ಶಹಬಾಜ್ (23), ಶಾಮಣ್ಣ ಗಾರ್ಡನ್ ನಿವಾಸಿ ಸಲ್ಮಾನ್ (24), ಯಶವಂತಪುರದ ಆದಿಲ್ ಖಾನ್ (28), ಗೋವಾದ ರಿಯಾಜ್ ಅಬ್ದುಲ್ ಶೇಖ್ (40) ಹಾಗೂ ಶಾರೂಕ್ ಮನ್ಸೂರ್ (24) ಎಂಬುವರನ್ನು ಬಂಧಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಫಟ್ ಹೇಳಿದರು.

’ಕೊಲೆಗೆ ಸುಪಾರಿ ನೀಡಿದ್ದ ಪುತ್ರ ಹರಿಕೃಷ್ಣ ಹಾಗೂ ಸಹಕರಿಸಿದ್ದ ಶಿವರಾಮ್ ಪ್ರಸಾದ್ (ಮೃತರ ಸಹೋದರ) ಎಂಬುವರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

₹25 ಲಕ್ಷಕ್ಕೆ ಸುಪಾರಿ; ‘ಬಳ್ಳಾರಿಯಲ್ಲಿ ‘ಸ್ಟೀಲ್ ಆ್ಯಂಡ್ ಅಲೈ’ ಕಂಪನಿ ನಡೆಸುತ್ತಿದ್ದ ಮಾಧವ, ಎರಡು ಶಾಲೆಗಳನ್ನು ತೆರೆದಿದ್ದರು. ನಷ್ಟ ಉಂಟಾಗಿದ್ದರಿಂದ ಕಂಪನಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು. ಎಂಬಿಎ ಪದವೀಧರನಾದ ಮಗ ಹರಿಕೃಷ್ಣ, ಕೆಲ ವರ್ಷ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ. ನಾಲ್ಕು ವರ್ಷಗಳ ಹಿಂದೆ ರಾಜ್ಯಕ್ಕೆ ವಾಪಸ್ ಬಂದಿದ್ದ. ತಂದೆಯ ಆಸ್ತಿ ಪಡೆಯಲು ಪ್ರಯತ್ನಿಸಿದ್ದ. ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇದ್ದಿದ್ದರಿಂದ ಆಸ್ತಿ ಹಂಚಿಕೆ ಮಾಡಲು ತಂದೆ ನಿರಾಕರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕಳೆದ ವರ್ಷ ಚೆಕ್‌ಬೌನ್ಸ್ ಪ್ರಕರಣದಲ್ಲಿ ಮಾಧವ ಹಾಗೂ ಹರಿಕೃಷ್ಣ ಇಬ್ಬರೂ ಜೈಲಿಗೆ ಹೋಗಿ ಬಂದಿದ್ದರು. ಇದಾದ ನಂತರವೂ ಅವರ ನಡುವೆ ಆಸ್ತಿ ಹಂಚಿಕೆ ಸಂಬಂಧ ವೈಮನಸ್ಸು ಇತ್ತು. ತಂದೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಹರಿಕೃಷ್ಣ, ಸ್ನೇಹಿತನ ಮೂಲಕ ಪರಿಚಯವಾದ ಆರೋಪಿಗಳಿಗೆ ₹ 25 ಲಕ್ಷಕ್ಕೆ ಸುಪಾರಿ ನೀಡಿದ್ದ. ಆಟೊ ಹಾಗೂ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು, ಮಾಧವ ಅವರ ಕತ್ತು ಕೊಯ್ದು ಕೊಂದಿದ್ದರು’ ಎಂದೂ ಪೊಲೀಸರು ವಿವರಿಸಿದರು.

ನೋಂದಣಿ ಸಂಖ್ಯೆಯಿಂದ ಸಿಕ್ಕಿಬಿದ್ದರು; ‘ಆರೋಪಿಗಳು ಕೃತ್ಯಕ್ಕೆಂದು ಓಎಲ್‌ಎಕ್ಸ್ ಜಾಲತಾಣದಲ್ಲಿ ಎರಡು ಬೈಕ್ ಖರೀದಿಸಿದ್ದರು. ಘಟನಾ ಸ್ಥಳದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಬೈಕೊಂದರ ದೃಶ್ಯ ಸೆರೆಯಾಗಿತ್ತು. ಅದರ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೇರ್ ಹಾಗೂ ಸಬ್‌ ಇನ್‌ಸ್ಪೆಕ್ಟರ್ ಕೆ.ಆರ್.ಶ್ರೀನಿವಾಸ್ ನೇತೃತ್ವದ ತಂಡ ಆರೋಪಿಗಳನ್ನು ಸೆರೆ ಹಿಡಿದಿದೆ’ ಎಂದು ಪೊಲೀಸರು ತಿಳಿಸಿದರು.

‘ಇದೊಂದು ಸುಪಾರಿ ಹತ್ಯೆಯೆಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಜೊತೆ ಮಾತನಾಡಲೆಂದೇ ಹರಿಕೃಷ್ಣ ಪ್ರತ್ಯೇಕ ಸಿಮ್ ಕಾರ್ಡ್ ಖರೀದಿಸಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT