ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್‌ಗಳಲ್ಲಿ ಭಯದ ಬದುಕು: ಕೊರೊನಾ ಸೋಂಕಿನ ಭೀತಿ

ಒಂದೇ ಸೂರಿನಡಿ ಸಾವಿರಾರು ಮಂದಿ ಕೆಲಸ
Last Updated 20 ಮಾರ್ಚ್ 2020, 22:54 IST
ಅಕ್ಷರ ಗಾತ್ರ

ಬೆಂಗಳೂರು: ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ಕಾರ್ಖಾನೆಗಳ ಕಾರ್ಮಿಕರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೂ, ನೂರಾರು ಕಾರ್ಮಿಕರು ಒಂದೇ ಸೂರಿನಡಿ ಭಯದ ನಡುವೆ ಕೆಲಸ ಮಾಡುತ್ತಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶ, ತುಮಕೂರು ರಸ್ತೆಯ ಆಜುಬಾಜಿನಲ್ಲಿ ಯಶವಂತಪುರದಿಂದ ನೆಲಮಂಗಲ ತನಕ, ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸುತ್ತಮುತ್ತ, ಮೈಸೂರು ರಸ್ತೆಯ ಚಾಮರಾಜಪೇಟೆಯಿಂದ ಬಿಡದಿ ತನಕ ಅಲ್ಲಿ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಿವೆ. ಬೆಂಗಳೂರಿನಲ್ಲೇ 850ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, 2.50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಯಲ್ಲೂ ಗಾರ್ಮೆಂಟ್ ಕಾರ್ಖಾನೆಗಳಿವೆ. ರಾಜ್ಯದಲ್ಲಿ ವ್ಯಾಪಿಸುತ್ತಿರುವ ಕೊರೊನಾ ಸೋಂಕು ಈ ನೌಕರರನ್ನು ಭಯದಲ್ಲಿ ಮುಳುಗಿಸಿದೆ. ಕನಿಷ್ಠ 500ರಿಂದ 4 ಸಾವಿರ ಜನರು ಒಂದೊಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೂ ಜನ ಅಕ್ಕಪಕ್ಕದಲ್ಲೇ ನಿಂತು ಕೆಲಸ ಮಾಡಬೇಕಾಗಿರುವುದು ಇಲ್ಲಿ ಅನಿವಾರ್ಯ.

ಹಲವು ಕಾರ್ಖಾನೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಿ, ಕೈಗಳಿಗೆ ಸ್ಯಾನಿಟೈಸರ್ ಹನಿ ನೀಡಿಯೇ ಒಳಕ್ಕೆ ಬಿಡಲಾಗುತ್ತಿದೆ. ಮಾಸ್ಕ್‌ಗಳನ್ನೂ ನೀಡಲಾಗಿದೆ. ಕೆಲ ಕಾರ್ಖಾನೆಗಳಲ್ಲಿ ಥರ್ಮಲ್ ಸ್ಕ್ಯಾನರ್‌ಗಳ ಮೂಲಕ ತಪಾಸಣೆ ನಡೆಸುತ್ತಿಲ್ಲ.

ಬಟ್ಟೆ ಕಟ್ಟಿಂಗ್ ಮಾಡುವುದರಿಂದ ಹೊಲೆದು ಪ್ಯಾಕಿಂಗ್‌ ಆಗುವಷ್ಟರಲ್ಲಿ ಒಂದು ಉಡುಪು ಸಾಕಷ್ಟು ಮಂದಿಯನ್ನು ದಾಟಿಕೊಂಡೇ ಹೋಗಬೇಕು. ಸೋಂಕಿರುವ ಒಬ್ಬ ವ್ಯಕ್ತಿ ಆ ಉಡುಪನ್ನು ಮುಟ್ಟಿದರೆ ಇಡೀ ಕಾರ್ಖಾನೆಯ ಉದ್ಯೋಗಿಗಳಿಗೆಲ್ಲಾ ಆವರಿಸಿಕೊಳ್ಳುವ ಆತಂಕ ಇದೆ ಎನ್ನುತ್ತಾರೆ ನೌಕರರು.

‘ರಜೆ ಹಾಕಿ ಮನೆಯಲ್ಲಿ ಉಳಿದರೆ ಮನೆ ಬಾಡಿಗೆ ಮತ್ತು ಊಟಕ್ಕೆ ಏನು ಮಾಡಬೇಕು? ಕೆಲಸಕ್ಕೆ ಬರಲು ಮತ್ತೆ ಅವಕಾಶ ಸಿಗದಿದ್ದರೆ ಗತಿ ಏನು? ಈ ಕಾರಣಗಳಿಂದ ಕೊರೊನಾ ಸೋಂಕಿನ ಭಯ ಇದ್ದರೂ ಕೆಲಸಕ್ಕೆ ಬಂದಿದ್ದೇವೆ’ ಎಂದು ಪೀಣ್ಯ ಕೈಗಾರಿಕಾ ಪ್ರದೇಶದ ಗಾರ್ಮೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಹೇಮಾಕ್ಷಿ ಹೇಳಿದರು.

‘ಊರಿನಲ್ಲಿ ಮೂರೊತ್ತಿನ ಊಟಕ್ಕೂ ಕಷ್ಟವಾದ ಕಾರಣಕ್ಕೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದೇವೆ. ಬಾಡಿಗೆ ಮನೆ ಹಿಡಿದು ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಹೇಗೋ ಉಪಜೀವನ ನಡೆಸುತ್ತಿದ್ದೇವೆ. ಕೊರೊನಾ ಸೋಂಕು ಈಗ ಈ ಬದುಕನ್ನೂ ನಮ್ಮಿಂದ ಕಿತ್ತುಕೊಳ್ಳುತ್ತಿದೆಯೇನೋ ಎಂಬ ಭಯ ಕಾಡುತ್ತಿದೆ’ ಎಂದ ಅವರು ಕಣ್ಣಾಲಿಗಳನ್ನು ತುಂಬಿಕೊಂಡರು.

‘ಶಾಲೆಗೆ ರಜೆ ಇರುವ ಕಾರಣ ಮಕ್ಕಳು ಮನೆಯಲ್ಲಿದ್ದಾರೆ. ಅವರನ್ನು ನೋಡಿಕೊಳ್ಳುವವರಿಲ್ಲ. ಕಾರ್ಖಾನೆಯಲ್ಲಿರುವ ಮಕ್ಕಳ ಪಾಲನಾ ಕೇಂದ್ರಕ್ಕೆ ಅವರನ್ನು ಕರೆ ತರದಂತೆ ತಿಳಿಸಿದ್ದಾರೆ. ಏನು ಮಾಡಬೇಕೋ ತಿಳಿಯುತ್ತಿಲ್ಲ’ ಎಂದರು.

ಉದ್ಯಮದ ಮೇಲೂ ಕಾರ್ಮೋಡ

ಸಿದ್ಧ ಉಡುಪು ತಯಾರಿಕಾ ಉದ್ಯಮದ ಮೇಲೆ ಕೋವಿಡ್-19 ಕಾರ್ಮೋಡವನ್ನು ಕವಿಯುವಂತೆ ಮಾಡಿದೆ.

ರಾಜ್ಯದ ಗಾರ್ಮೆಂಟ್‌ಗಳಲ್ಲಿ ತಯಾರಾಗುವ ಸಿದ್ಧ ಉಡುಪುಗಳು ಸ್ಪೈನ್, ಅಮೆರಿಕ, ಇಂಗ್ಲೆಂಡ್ ಹಾಗೂ ಯೂರೋಪಿಯನ್ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತವೆ. ಸದ್ಯ ಆ ದೇಶಗಳಲ್ಲಿ ಕೋವಿಡ್ –19 ಭೀಕರವಾಗಿ ಹರಡಿದೆ.

‘ಉಡುಪುಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ಆ ದೇಶಗಳು ಇಲ್ಲ. ಈ ಹಿಂದೆ ನೀಡಿದ್ದ ಆರ್ಡರ್‌(ಬೇಡಿಕೆ ಪಟ್ಟಿ) ಬಿಟ್ಟರೆ ಹೊಸದಾಗಿ ಬೇಡಿಕೆ ಇಲ್ಲ. ಮುಂದಿನ ದಿನಗಳಲ್ಲಿ ಬೇಡಿಕೆ ಬಾರದಿದ್ದರೆ ಕಾರ್ಖಾನೆಗಳನ್ನು ಏನು ಮಾಡಬೇಕೋ ಗೊತ್ತಿಲ್ಲ’ ಎಂದು ಕಾರ್ಖಾನೆಯ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಸಾವಿರಾರು ಕಾರ್ಮಿಕರನ್ನು ಕೂಡಿ ಹಾಕಿ ಕೆಲಸ ಮಾಡಿಸಿದರೆ ಅಪಾಯ ಗ್ಯಾರಂಟಿ. ಎಲ್ಲಾ ನೌಕರರಿಗೆ ವೇತನ ಸಹಿತ ರಜೆ ನೀಡಬೇಕು ಎಂದುಗಾರ್ಮೆಂಟ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಸಲಹೆಗಾರಕೆ.ಆರ್‌.ಜಯರಾಂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT