ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ–ಬಂಗಾರಪೇಟೆ ಹಳಿ ದ್ವಿಪಥಕ್ಕಾಗಿ ಕಾರ್ಯ ಸಾಧ್ಯತಾ ಸಮೀಕ್ಷೆ

ಮೊದಲ ಹಂತದಲ್ಲಿ ದೇವನಹಳ್ಳಿವರೆಗೆ, ಎರಡನೇ ಹಂತದಲ್ಲಿ ದೇವನಹಳ್ಳಿಯಿಂದ ಮುಂದಕ್ಕೆ ಸಮೀಕ್ಷೆ
Published 17 ಜನವರಿ 2024, 22:14 IST
Last Updated 17 ಜನವರಿ 2024, 22:14 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ–ಬಂಗಾರಪೇಟೆ ಮಧ್ಯೆ ರೈಲ್ವೆಹಳಿಯನ್ನು ದ್ವಿಪಥಗೊಳಿಸುವ ಯೋಜನೆಗೆ ಕಾರ್ಯ ಸಾಧ್ಯತಾ ಸಮೀಕ್ಷೆಯ ಮೊದಲ ಹಂತವನ್ನು ನೈರುತ್ಯ ರೈಲ್ವೆ ಆರಂಭಿಸಿದೆ.

ಯಲಹಂಕ–ದೇವನಹಳ್ಳಿ ನಡುವಿನ 23 ಕಿಲೋಮೀಟರ್‌ ಸಮೀಕ್ಷೆಗೆ ₹ 8 ಕೋಟಿ ಬಿಡುಗಡೆಯಾಗಿದ್ದು, ಸಮೀಕ್ಷೆ ಆರಂಭಗೊಂಡಿದೆ. ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿ ಕಾಮಗಾರಿಗೆ ಅನುಮೋದನೆ ದೊರೆತರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕದ ಈ ಮಾರ್ಗ ದ್ವಿಪಥಗೊಳ್ಳುವುದರ ಜೊತೆಗೆ ಸಂಪೂರ್ಣ ವಿದ್ಯುದ್ದೀಕರಣಗೊಳ್ಳಲಿದೆ. 

ದೇವನಹಳ್ಳಿಯಿಂದ ಕೋಲಾರ ಮೂಲಕ ಬಂಗಾರಪೇಟೆ ರೈಲು ನಿಲ್ದಾಣದವರೆಗೆ 125 ಕಿ.ಮೀ. ಸಮೀಕ್ಷೆ ಎರಡನೇ ಹಂತದಲ್ಲಿ ನಡೆಯಲಿದೆ. ಈ ಸಮೀಕ್ಷೆಗೆ ₹ 2.5 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಸಮೀಕ್ಷೆ ಕಾರ್ಯ ಆರಂಭಗೊಳ್ಳಬೇಕಿದೆ.

ಏಕಪಥ ಹಳಿಯನ್ನು ಮೇಲ್ದರ್ಜೇಗೇರಿಸಿ ದ್ವಿಪಥಗೊಳಿಸುವ ಯೋಜನೆ ಅನುಷ್ಠಾನಗೊಂಡರೆ ಎಲೆಕ್ಟ್ರಿಕ್ ಮೆಮು ರೈಲುಗಳ ಸಂಖ್ಯೆ ಏರಿಕೆಯಾಗಲಿದೆ. ನಿತ್ಯ ಸಂಚರಿಸುವ ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. 

ಬೆಂಗಳೂರು-ಕೋಲಾರ ಮಾರ್ಗದಲ್ಲಿ ಬೆಳಿಗ್ಗೆ ಒಂದು, ಸಂಜೆಯೊಂದು ರೈಲು ಸಂಚರಿಸುತ್ತಿವೆ. ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ರೈಲುಗಳ ಓಡಾಟ ಕಡಿಮೆ ಇರುವುದರಿಂದ ಹೆಚ್ಚಿನವರು ಬಸ್, ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದಾರೆ. ಹಳಿ ದ್ವಿಪಥಗೊಂಡು ರೈಲುಗಳ ಸಂಖ್ಯೆ ಹೆಚ್ಚಳವಾದರೆ, ಪ್ರಯಾಣಿಕರು ರೈಲನ್ನು ನೆಚ್ಚಿಕೊಳ್ಳಲಿದ್ದಾರೆ ಎಂಬುದು ಸ್ಥಳೀಯರ ಅಭಿಪ್ರಾಯ.

‘ಈಗ ಯಲಹಂಕದಿಂದ ದೇವನಹಳ್ಳಿ ಕಡೆಗೆ ರೈಲು ಹೊರಟರೆ, ಆ ಕಡೆಯಿಂದ ಯಾವ ರೈಲು ಬರುವಂತಿಲ್ಲ. ದೇವನಹಳ್ಳಿ ತಲುಪಿದ ಮೇಲೆಯೇ ಬೇರೆ ರೈಲು ಯಲಹಂಕ ಕಡೆಗೆ ಬರಬೇಕು. ಈ ಕಾಯುವಿಕೆಯಿಂದಾಗಿಯೇ ಜನರು ಈ ಮಾರ್ಗದಲ್ಲಿ ರೈಲಿನ ಬದಲು ಬಸ್‌ಗಳನ್ನು ಅವಲಂಬಿಸಿದ್ದಾರೆ. ದ್ವಿಪಥಗೊಂಡರೆ ಈ ಸಮಸ್ಯೆ ತಪ್ಪಲಿದೆ’ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಎನ್‌. ಕೃಷ್ಣಪ್ರಸಾದ್‌
ಕೆ.ಎನ್‌. ಕೃಷ್ಣಪ್ರಸಾದ್‌

ಆಟೊಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಯಲಹಂಕ-ದೇವನಹಳ್ಳಿ ಹಾಗೂ ದೇವನಹಳ್ಳಿ- ಕೋಲಾರ ಮಾರ್ಗದಲ್ಲಿ ರೈಲು ಹಳಿ ದ್ವಿಪಥಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ ಕಾರ್ಯ ಸಾಧ್ಯತಾ ಸಮೀಕ್ಷೆಗೆ ಅನುದಾನ ಮಂಜೂರಾಗಿದೆ.‌ ಸಮೀಕ್ಷೆ ಪೂರ್ಣಗೊಳಿಸಿ ಸಲ್ಲಿಸುವ ವರದಿ ಸ್ವೀಕಾರಗೊಂಡು ಸರ್ಕಾರ ಅನುಮೋದನೆ ನೀಡಿದರೆ ಹಳಿ ದ್ವಿಪಥಗೊಳಿಸುವುದರ ಜೊತೆಗೆ ಆಟೊಮ್ಯಾಟಿಕ್‌ ಸಿಗ್ನಲಿಂಗ್ ಕೂಡಾ ಅನುಷ್ಠಾನಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ದ್ವಿಪಥಗೊಂಡಾಗ ರೈಲುಗಳ ಸಂಖ್ಯೆ ಹೆಚ್ಚಲಿದೆ. ಕೋಲಾರ ಸುತ್ತಮುತ್ತಲಿನ ರೈತರು ತಾವು ಬೆಳೆದ ಬೆಳೆಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುವುದಕ್ಕೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಶೀಘ್ರವೇ ಕಾರ್ಯಗತವಾಗಲಿ

ರಾಜ್ಯದಲ್ಲಿ ಬಹುತೇಕ ರೈಲು ಮಾರ್ಗಗಳು ದ್ವಿಪಥಗೊಂಡಿವೆ. ಯಲಹಂಕ–ಬಂಗಾರಪೇಟೆ ಬಾಕಿ ಉಳಿದಿತ್ತು. ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಅಲ್ಲಿಂದ ಬರುವವರಿಗೆ ಸರಿಯಾದ ಸಮಯಕ್ಕೆ ರೈಲುಗಳು ಸಿಗುವಂತಾಗಬೇಕು. ರೈಲುಗಳ ಸಂಖ್ಯೆ ಹೆಚ್ಚಿಸಬೇಕು. ರೈಲುಗಳ ಬಗ್ಗೆ ಪ್ರಯಾಣಿಕರಿಗೆ ವಿಶ್ವಾಸ ಮೂಡಿದರೆ ರೈಲನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ದೇವನಹಳ್ಳಿಗೆ ಮೆಟ್ರೊ ಸಂಪರ್ಕ ಕೂಡ ಆಗುತ್ತಿದೆ. ಆದರೆ ಅದರ ಟಿಕೆಟ್‌ ದರ ದುಬಾರಿ ಇರುವುದರಿಂದ ಕಡಿಮೆ ಟಿಕೆಟ್ ದರ ಹೊಂದಿರುವ ರೈಲನ್ನೇ ಜನರು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆದಷ್ಟು ಬೇಗ ದ್ವಿಪಥಗೊಳಿಸುವ ಯೋಜನೆ ಕಾರ್ಯಗತವಾಗಲಿ ಕೆ.ಎನ್‌. ಕೃಷ್ಣಪ್ರಸಾದ್‌ ರೈಲ್ವೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT