ಗುರುವಾರ , ಮಾರ್ಚ್ 30, 2023
24 °C
ಗೇಲ್‌ ಗ್ಯಾಸ್‌ ಸಂಸ್ಥೆಗೆ ಕೊಳವೆ ಅಳವಡಿಕೆ ಶುಲ್ಕ ಕಡಿತಗೊಳಿಸಿದ ಉನ್ನತ ಮಟ್ಟದ ಸಮಿತಿ

ಶುಲ್ಕ ರಿಯಾಯಿತಿ: ಬಿಬಿಎಂಪಿಗೆ ₹ 384 ಕೋಟಿ ವರಮಾನ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆಲದಡಿ ಕೇಬಲ್‌ ಅಥವಾ ಕೊಳವೆ ಅಳವಡಿಸಲು ರಸ್ತೆ ಕತ್ತರಿಸುವ ಶುಲ್ಕದ ವಿಚಾರದಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿ ತೆಗೆದುಕೊಂಡ ನಿರ್ಣಯದಿಂದಾಗಿ ಬಿಬಿಎಂಪಿ ಬರೋಬ್ಬರಿ ₹ 384 ಕೋಟಿ ವರಮಾನ ನಷ್ಟ ಅನುಭವಿಸಬೇಕಾಗಿ ಬಂದಿದೆ. 

ಗ್ಯಾಸ್ ಅಥಾರಿಟಿ ಆಫ್‌ ಇಂಡಿಯಾ (ಗೇಲ್‌) ನಗರದಲ್ಲಿ ಮನೆ ಮನೆಗೆ ನೈಸರ್ಗಿಕ ಅನಿಲ ಪೂರೈಸಲು ಕೊಳವೆಗಳನ್ನು ಅಳವಡಿಸುತ್ತಿದೆ. 2015ರ ಮೇ ತಿಂಗಳಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆದಿತ್ತು. ಗೇಲ್‌ ಸಂಸ್ಥೆಯು ನೆಲದಡಿ ಕೊಳವೆ ಅಳವಡಿಸುವ ಕಾಮಗಾರಿಗೆ ರಸ್ತೆ ಕತ್ತರಿಸಲು ಮೇಲ್ವಿಚಾರಣೆ ಶುಲ್ಕ ಸೇರಿ ಪ್ರತಿ ಮೀಟರ್‌ಗೆ ₹1,200 ನಿಗದಿಗೊಳಿಸಲಾಗಿತ್ತು. ಕತ್ತರಿಸಿದ ರಸ್ತೆಯನ್ನು ಈ ಸಂಸ್ಥೆಯೇ ದುರಸ್ತಿ ಮಾಡಬೇಕಿತ್ತು. 

2018ರ ಡಿಸೆಂಬರ್‌ನಲ್ಲಿ ಬಿಬಿಎಂಪಿಯು ರಸ್ತೆ ಕತ್ತರಿಸುವ ಶುಲ್ಕವನ್ನು ಪರಿಷ್ಕರಿಸಿತ್ತು. ಅದರ ಪ್ರಕಾರ, ನೆಲದಡಿ ಕೇಬಲ್‌ ಅಥವಾ ಕೊಳವೆ ಅಳವಡಿಸಲು ರಸ್ತೆ ಕತ್ತರಿಸುವ ಸಂಸ್ಥೆಯು ಬಿಬಿಎಂಪಿಗೆ ಪ್ರತಿ ಮೀಟರಿಗೆ ₹ 1,857 ಅಳವಡಿಕೆ ಶುಲ್ಕ ಪಾವತಿಸಬೇಕಿದೆ. ಪ್ರತಿ ಮೀಟರ್‌ಗೆ ₹100ರಂತೆ  ಮೇಲುಸ್ತುವಾರಿ ಶುಲ್ಕ ಪಾವತಿಸಬೇಕಿದೆ. ಜೊತೆಗೆ ಅಳವಡಿಕೆ ಶುಲ್ಕದ ಶೇ 25ರಷ್ಟು ಮೊತ್ತವನ್ನು ಭದ್ರತಾ ಠೇವಣಿ ಇಡಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಇದೇ ದರ ಅನ್ವಯವಾಗುತ್ತಿತ್ತು. ಕತ್ತರಿಸಿದ ರಸ್ತೆಯ ದುರಸ್ತಿ ಕಾರ್ಯವನ್ನೂ ಆಯಾ ಸ೦ಸ್ಥೆಯೇ ಮಾಡಬೇಕಿದೆ.

ಬಿಬಿಎಂಪಿಯ ಈ ನಿರ್ಣಯವನ್ನು ಪ್ರಶ್ನಿಸಿ ಗೇಲ್‌ ಸಂಸ್ಥೆಯು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿತು. ಈಗಿನ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ದರವನ್ನು ಪರಿಷ್ಕರಿಸಲಾಗಿದೆ. ಅದರ ಪ್ರಕಾರ, ನೆಲವನ್ನು ಅಗೆದು (ಟ್ರೆಂಚ್‌ ಮಾದರಿ) ಅಳವಡಿಸುವ ಕೊಳವೆಗೆ ಪ್ರತಿ ಮೀಟರ್‌ಗೆ ₹ 1,857  ಹಾಗೂ ನೆಲವನ್ನು ಅಡ್ಡವಾಗಿ ಕೊರೆದು (ಎಚ್‌ಡಿಡಿ ಮಾದರಿ) ಅಳವಡಿಸುವ ಕೊಳವೆಗೆ ₹ 700 ದರವನ್ನು ನಿಗದಿಪಡಿಸಿದೆ.

ನೂತನವಾಗಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಕತ್ತರಿಸಲು ಬಿಬಿಎಂಪಿ ಮೂರು ವರ್ಷಗಳ ಕಾಲ ನಿಷೇಧ ಹೇರಿತ್ತು. ಈ ನಿಷೇಧದ ಅವಧಿಯನ್ನು ಗೇಲ್‌ ಸಂಸ್ಥೆಯ ಸಲುವಾಗಿ ಒಂದು ವರ್ಷಕ್ಕೆ ಸೀಮಿತಗೊಳಿಸಿದೆ.

ನಗರದಲ್ಲಿ ಒಟ್ಟು 3 ಸಾವಿರ ಕಿ.ಮೀ ಉದ್ದದ ಕೊಳವೆ ಅಳವಡಿಸಲು ಗೇಲ್‌ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಇದಕ್ಕೆ ಈ ಹಿಂದೆ ನಿಗದಿಪಡಿಸಿದ ಮೊತ್ತದ ಪ್ರಕಾರ ಇದರಲ್ಲಿ ಶೇ 80ರಷ್ಟು ಕೊಳವೆಯನ್ನು ನೆಲವನ್ನು ಕೊರೆದು ಅಳವಡಿಸಲಾಗುತ್ತದೆ. ಶೇ 20ರಷ್ಟು ಕೊಳವೆಯನ್ನು ಮಾತ್ರ ಟ್ರೆಂಚ್‌ ಮಾದರಿಯಲ್ಲಿ ಅಳವಡಿಸಲಾಗುತ್ತದೆ.

ಈ ಹಿಂದೆ ನಿಗದಿಪಡಿಸಿದಂತೆ ಪ್ರತಿ ಮೀಟರ್‌ಗೆ ₹ 1,200 ದರವನ್ನು ಪಾವತಿಸಲು ಗೇಲ್ ಗ್ಯಾಸ್‌ ಸಂಸ್ಥೆ 2015ರಲ್ಲಿ ಒಪ್ಪಿತ್ತು. ಅದರ ಪ್ರಕಾರ ಸಂಸ್ಥೆ 3 ಸಾವಿರ ಕಿ.ಮೀ ಉದ್ದದ ಕೊಳವೆಗೆ ₹ 360 ಕೋಟಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕಿತ್ತು. 2018ರ ಡಿಸೆಂಬರ್‌ನಲ್ಲಿ ಪರಿಷ್ಕರಿಸಲಾದ ದರದ ಪ್ರಕಾರ ಸಂಸ್ಥೆಯು ₹ 587 ಕೋಟಿ ಶುಲ್ಕ ಪಾವತಿಸಬೇಕಿತ್ತು. ಈಗ ನಿಗದಿಪಡಿಸಿದಂತೆ ಎಚ್‌ಡಿಡಿ ಮಾದರಿಯಲ್ಲಿ ಅಳವಡಿಸುವ ಕೊಳವೆ ಶುಲ್ಕವನ್ನು ಪ್ರತಿ ಮೀಟರ್‌ಗೆ ₹ 700ಕ್ಕೆ ಇಳಿಸಿದರೆ, ಸಂಸ್ಥೆಯು ₹ 203 ಕೋಟಿ ಶುಲ್ಕವನ್ನಷ್ಟೇ ಪಾವತಿಸಿದರೆ ಸಾಕು.

2015ರಲ್ಲಿ ನಿಗದಿಪಡಿಸಿದ ದರವನ್ನು ಪರಿಗಣಿಸಿದರೆ ಬಿಬಿಎಂಪಿಗೆ ಸುಮಾರು ₹ 160 ಕೋಟಿ ಮತ್ತು 2018ರ ಡಿಸೆಂಬರ್‌ನಲ್ಲಿ ನಿಗದಿಪಡಿಸಿದ ದರವನ್ನು ಪರಿಗಣಿಸಿದರೆ ಸುಮಾರು ₹ 384 ಕೋಟಿ ನಷ್ಟ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು