ಬುಧವಾರ, ಮೇ 25, 2022
22 °C
18 ತಿಂಗಳ ಬಳಿಕ ಶೇ 100 ಆಸನ ಭರ್ತಿಗೆ ಅವಕಾಶ

ಚಿತ್ರಮಂದಿರ ಭರ್ತಿ; ದರ ಏರಿಕೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 18 ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಶೇ 100ರ ಆಸನ ಭರ್ತಿಗೆ ಅವಕಾಶವೇನೋ ಸಿಕ್ಕಿತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬುತ್ತಿರುವುದನ್ನು ಗಮನಿಸಿದ ನಿರ್ಮಾಪಕರು, ವಿತರಕರು ತಮ್ಮ ಚಿತ್ರ ಪ್ರದರ್ಶನದ ಟಿಕೆಟ್‌ ದರವನ್ನೇ ಏರಿಸಿದ್ದಾರೆ. 

‘ಸಾಮಾನ್ಯ ಏಕತೆರೆಯ (ಸಿಂಗಲ್‌ ಸ್ಕ್ರೀನ್‌) ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್‌ ದರವೇ ಗರಿಷ್ಠ ₹ 100ರಿಂದ 150ರವರೆಗೆ ಇದೆ. ಈಗ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯಾದ ಮೊದಲ ಒಂದೆರಡು ದಿನ ದುಪ್ಪಟ್ಟು ದರ, ಆ ಬಳಿಕ ಕೊಂಚ ಕಡಿಮೆ ದರ ನಿಗದಿಪಡಿಸಲಾಗುತ್ತಿದೆ. ಇದರಿಂದ ಗೆಳೆಯರು, ಕುಟುಂಬದವರ ಜೊತೆ ಕೂಡಿ ಸಿನಿಮಾ ನೋಡಬೇಕಾದರೆ ನಮಗೆ ದುಬಾರಿಯೆನಿಸಿಬಿಟ್ಟಿದೆ’ ಎಂದು ನಾಗಸಂದ್ರದ ನಿವಾಸಿ ಕೇಶವ ಅಸಹಾಯಕತೆ ವ್ಯಕ್ತಪಡಿಸಿದರು. 

‘ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದಲ್ಲಿ ಬಾಲ್ಕನಿ ಟಿಕೆಟ್ ದರವೇ ₹ 110 ಇದೆ. ಈಗ ಅದನ್ನು 200ಕ್ಕೆ ಏರಿಸಿದ್ದಾರೆ. ಏಕೆ ಹೀಗೆ ಎಂದು ಕೇಳಿದರೆ ನಿರ್ಮಾಪಕರು ಮತ್ತು ವಿತರಕರೇ ದರ ನಿರ್ಧರಿಸಿದ್ದಾರೆ. ಚಿತ್ರಮಂದಿರಕ್ಕೂ ದರಕ್ಕೂ ಸಂಬಂಧವಿಲ್ಲ. ನಾವು ಚಿತ್ರಮಂದಿರವನ್ನು ಬಾಡಿಗೆ ಆಧಾರದಲ್ಲಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ’ ಎಂದರು ಹೊಸಳ್ಳಿಯ ಸಿನಿಪ್ರೇಕ್ಷಕ ರಾಜೇಶ್‌.  

‘ಪ್ರೇಕ್ಷಕರೇನೊ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಅವರನ್ನು ಉಳಿಸಿಕೊಳ್ಳುವುದು ಸಿನಿಮಾ ಉದ್ಯಮದವರ ಜವಾಬ್ದಾರಿ. ಕೋವಿಡ್‌ ಕಾರಣದಿಂದ ಜನರಲ್ಲಿ ಆರ್ಥಿಕ ಶಕ್ತಿ ಕುಸಿದಿದೆ ಎಂಬುದನ್ನೂ ಗಮನಿಸಬೇಕು. ಹಾಗಾಗಿ ವಿತರಕರು ನಿಗದಿಗಿಂತ ಹೆಚ್ಚು ದರ ವಿಧಿಸುವುದನ್ನು ನಾವೂ ಒಪ್ಪುವುದಿಲ್ಲ’ ಎಂದು ಬೆಂಗಳೂರಿನ ಚಿತ್ರಮಂದಿರದ ಮಾಲೀಕರೊಬ್ಬರು ಹೇಳಿದರು. 

‘ಇದಕ್ಕೆ ನಿಯಂತ್ರಣ ವ್ಯವಸ್ಥೆ ಬರಬೇಕು. ತಮಿಳುನಾಡಿನ ಮಾದರಿಯಲ್ಲಿ ಸರ್ಕಾರವೇ ಪ್ರದರ್ಶನ ದರ ನಿಗದಿಪಡಿಸುವಂತೆ ಮಾಡಿದರೆ ಈ ರೀತಿ ದರ ವ್ಯತ್ಯಾಸ ಮಾಡುವುದನ್ನು ತಪ್ಪಿಸಬಹುದು’ ಎಂದರು.

ಕನ್ನಡದ ಬಿಗ್‌ ಬಜೆಟ್‌ ಚಿತ್ರಗಳು ಬಿಡುಗಡೆಯಾದ ಬಳಿಕ ಕಳೆದ ನಾಲ್ಕು ದಿನಗಳಿಂದ  ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ‘ಕೋಟಿಗೊಬ್ಬ–3’, ‘ಸಲಗ’ ಉತ್ತಮ ಕಲೆಕ್ಷನ್‌ ತಂದುಕೊಟ್ಟಿದೆ. ಮೊದಲ ಕೆಲವು ದಿನ ಉತ್ತಮ ಪ್ರದರ್ಶನ ಕಂಡಿದ್ದ ‘ನಿನ್ನ ಸನಿಹಕೆ’ ಮತ್ತು ‘ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಂ ಚಿತ್ರ ಎರಡು ದಿನಗಳಿಂದ ಸರಾಸರಿ ಗಳಿಕೆ ಮಾಡುತ್ತಿವೆ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ಹೇಳಿದರು. 

‘ಸದ್ಯಕ್ಕಂತೂ ಬೇರೆ ಭಾಷೆಗಳ ಚಿತ್ರಗಳು ಪ್ರದರ್ಶನ ಕಂಡಿಲ್ಲ. ಅಲ್ಲಿಂದ ಹೊಸ ಚಿತ್ರಗಳೂ ಬರುತ್ತಿಲ್ಲ. ಇರುವ ಪರಭಾಷಾ ಚಿತ್ರಗಳಿಗೆ ಪ್ರೇಕ್ಷಕರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ’ ಎಂದರು ಚಂದ್ರಶೇಖರ್‌.

‘ಕೋವಿಡ್‌ ಮಾರ್ಗಸೂಚಿಗಳನ್ನು ಗರಿಷ್ಠ ಪಾಲನೆ ಮಾಡುತ್ತೇವೆ. ಟಿಕೆಟ್‌ ಬುಕ್ಕಿಂಗ್‌ ಆನ್‌ಲೈನ್‌ನಲ್ಲಿ ಆಗುವುದರಿಂದ ಸರದಿಯಲ್ಲಿ ನಿಲ್ಲುವವರ ಪ್ರಮಾಣ ಕಡಿಮೆ. ಪ್ರವೇಶ ಮತ್ತು, ನಿರ್ಗಮನದ ವೇಳೆ ಎಲ್ಲರೂ ಮಾಸ್ಕ್‌ ಧರಿಸಿರುವಂತೆ ನೋಡಿಕೊಳ್ಳಲು ಕಣ್ಗಾವಲು ಇಡಬೇಕಾಗುತ್ತದೆ. ಪ್ರೇಕ್ಷಕರೂ ಸ್ಪಂದಿಸುತ್ತಿದ್ದಾರೆ. ಆಗಾಗ ಕೋವಿಡ್‌ ಮಾರ್ಗಸೂಚಿ ಪಾಲನೆ ಸಂಬಂಧಿಸಿ ಸೂಚನೆಗಳನ್ನು ತೆರೆಯ ಮೇಲೆ ಪ್ರದರ್ಶಿಸುತ್ತೇವೆ’ ಎಂದರು ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು