ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಟ್ಟಾಗಿ ಸಾಗುವ ಪರಿಸರ ನಿರ್ಮಿಸಬೇಕು: ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಅಭಿಮತ

‘ಉತ್ತರ ಪರ್ವ’ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಅಭಿಮತ
Published 4 ಆಗಸ್ಟ್ 2024, 15:39 IST
Last Updated 4 ಆಗಸ್ಟ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕವೆಂದು ಪ್ರತ್ಯೇಕವಾಗಿ ಕಾಣದೆ, ಎಲ್ಲ ಭಾಗದ ಜನರು ಒಟ್ಟಾಗಿ ಸಾಗುವ ಪರಿಸರವನ್ನು ನಿರ್ಮಾಣ ಮಾಡಬೇಕು’ ಎಂದು ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ತಿಳಿಸಿದರು. 

ವೀರಲೋಕ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಉತ್ತರ ಪರ್ವ’ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಲೇಖಕರ ಹತ್ತು ಕೃತಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ಕರ್ನಾಟಕದ ಎಲ್ಲ ಭಾಗದ ಜನರು ಒಟ್ಟಾಗಿ ಸಾಗಬೇಕಾದದ್ದು ಈ ಸಂದರ್ಭದ ಅಗತ್ಯವೂ ಹೌದು. ಇದಕ್ಕೆ ಪೂರಕವಾಗಿ ಈ ಭಾಗದ ಲೇಖಕರ ಪುಸ್ತಕಗಳು ಉತ್ತರ ಕರ್ನಾಟಕದಲ್ಲಿ, ಅಲ್ಲಿನ ಲೇಖಕರ ಪುಸ್ತಕಗಳು ದಕ್ಷಿಣ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು. ಇಂದರಿಂದ ಬಾಂಧವ್ಯ ಗಟ್ಟಿಗೊಳ್ಳಲಿದೆ. ಕರ್ನಾಟಕದ ಏಕೀಕರಣದ ಬೀಜ ಬಿತ್ತಿದವರೇ ಉತ್ತರ ಕರ್ನಾಟಕದವರು. ಪಾಟೀಲ ಪುಟ್ಟಪ್ಪ, ಹುಯಿಲಗೋಳ ನಾರಾಯಣರಾವ್ ಮೊದಲಾದವರು ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು’ ಎಂದು ಹೇಳಿದರು. 

ಕತೆಗಾರ ಕರ್ಕಿ ಕೃಷ್ಣಮೂರ್ತಿ, ‘ಸಮಾಜದ ಸ್ವಾಸ್ತ್ಯ ಕಾಪಾಡುವ ಪುಸ್ತಕಗಳ ಅಗತ್ಯವಿದೆ. ಪ್ರಕಟಣೆಗೆ ಸಂಬಂಧಿಸಿದಂತೆ ಸಂಖ್ಯೆಗೆ ಆದ್ಯತೆ ನೀಡದೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು. 

ಬಿಡುಗಡೆಯಾದ ಪುಸ್ತಕಗಳು: ಕಾರ್ಯಕ್ರಮದಲ್ಲಿ ಶೆಕ್ಷಾವಲಿ ಮಣೆಗಾರ್ ಅವರ ‘ಆ ವದನ’, ಮುರ್ತುಜಾಬೇಗಂ ಕೊಡಗಲಿ ಅವರ ‘ಪರಸ್ಪರ ಮತ್ತಿತರ ಕತೆಗಳು’, ಸದಾಶಿವ ದೊಡ್ಡಮನಿ ಅವರ ‘ಇರುಳ ಬಾಗಿಲಿಗೆ ಕಣ್ಣದೀಪ’, ರವೀಂದ್ರ ಮುದ್ದಿ ಅವರ ‘ವರದಾ ತೀರದ ಕಥೆಗಳು’, ಸಿ.ವಿ. ವಿರುಪಾಕ್ಷ ಅವರ ‘ಖದೀಜಾ’, ಶ್ರೀಧರ ಗಸ್ತಿ ಅವರ ‘ಚಂದ್ರಾ ಲೇಔಟ್’, ಪ್ರಕಾಶ ಗಿರಿಮಲ್ಲನವರ ಅವರ ‘ಜನನಾಯಕ’, ಬಿ.ಜೆ. ಪಾವರ್ತಿ ವಿ. ಸೋನಾರೆ ಅವರ ‘ಓಡಿ ಹೋದಾಕಿ’ ಕವಿತಾ ಹೆಗಡೆ ಅಭಯಂ ಅವರ ‘ಇತ್ತ ಹಾಯಲಿ ಚಿತ್ತ’ ಹಾಗೂ ಸವ್ಯ ಆರ್. ಕತ್ತಿ ಅವರ ‘ಮಾಯಾಗುಹೆ’ ಪುಸ್ತಕಗಳು ಬಿಡುಗಡೆಯಾದವು. 

ವೀರಲೋಕ ಸಂಸ್ಥೆಯ ಪ್ರಕಾಶಕ ವೀರಕಪುತ್ರ ಶ್ರೀನಿವಾಸ, ‘ಉತ್ತರ ಪರ್ವ’ದ ಸಂಪಾದಕ ರಾಜಶೇಖರ ಮಠಪತಿ (ರಾಗಂ), ಕತೆಗಾರ ಮಧು ವೈ.ಎನ್. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT