ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸತೀಶ್‌ರೆಡ್ಡಿ ವಿರುದ್ಧ ಭೂ ಕಬಳಿಕೆ ಆರೋಪ

Last Updated 9 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಟಿಎಂ ಲೇಔಟ್‌ನಲ್ಲಿ ಬಿಡಿಎ ಜಾಗವನ್ನು ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ಮತ್ತವರ ಕುಟುಂಬ ಸದಸ್ಯರು ಹಾಗೂ ಅವರ ಬೆಂಬಲಿಗರು ಕಬಳಿಸಿದ್ದಾರೆ’ ಎಂದು ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದರು.

‘ದೇವರಚಿಕ್ಕನಹಳ್ಳಿ(ಬಿಟಿಎಂ ಲೇಔಟ್‌) ಸರ್ವೆ ನಂಬರ್ 27/1, 27/3, 29/1, 29/2, 29/3, 30, 33 ಮತ್ತು 35ರಲ್ಲಿ ಭೂಮಿ ಕಬಳಿಸಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

‘1994ರಿಂದ 1999ರ ಅವಧಿಯಲ್ಲಿ ಬಡಾವಣೆ ರಚನೆಯಾಗಿ ಬಿಡಿಎ ಭೂಸ್ವಾಧೀನ ಮಾಡಿಕೊಂಡಿತ್ತು. ರಸ್ತೆ, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕಕ್ಕೆ ₹16 ಕೋಟಿ ಖರ್ಚು ಮಾಡಿತ್ತು. ಭೂಸ್ವಾಧೀನವನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಭೂಮಾಲೀಕರು ಪ್ರಶ್ನೆ ಮಾಡಿದ್ದರು. ಎರಡು ನ್ಯಾಯಾಲಯಗಳಲ್ಲಿ ಬಿಡಿಎ ಪರವಾಗಿ ಆದೇಶಗಳು ಹೊರ ಬಂದಿದ್ದವು. ಕೆಲ ದಿನಗಳ ಬಳಿಕ ಭೂಮಾಲೀಕರು ಮತ್ತೊಮ್ಮೆ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ₹16 ಕೋಟಿ ಖರ್ಚು ಮಾಡಿರುವುದನ್ನು ನ್ಯಾಯಾಲಯಕ್ಕೆ ಬಿಡಿಎ ಮಾಹಿತಿ ನೀಡಲಿಲ್ಲ. ಆದ್ದರಿಂದ ಭೂಮಾಲೀಕರ ಪರವಾಗಿ ತೀರ್ಪು ಹೊರ ಬಂದಿದೆ ಎಂದು ಉಮಾಪತಿಗೌಡ ಆರೋಪಿಸಿದರು.

‘ಬಿಟಿಎಂ ಲೇಔಟ್ ಒಂದರಲ್ಲೇ 25 ಎಕರೆ ವಿಸ್ತೀರ್ಣದ ಅಭಿವೃದ್ಧಿ ಹೊಂದಿದ ನಿವೇಶನಗಳನ್ನು ಭೂಮಾಲೀಕರು ಹಿಂಪಡೆದಿದ್ದಾರೆ. ಕಂದಾಯ ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದಾರೆ. ಇದರಲ್ಲಿ ₹1 ಸಾವಿರ ಕೋಟಿ ಮೌಲ್ಯದ ಭೂಮಿ ಕಬಳಿಕೆಯಾಗಿದೆ. ಶಾಸಕ ಸತೀಶ್‍ರೆಡ್ಡಿ, ಪಾಲಿಕೆಯ ಮಾಜಿ ಉಪಮೇಯರ್ ರಾಮ್‌ಮೋಹನ್ ರಾಜ್ ಅವರೂ ಶಾಮೀಲಾಗಿದ್ದಾರೆ’ ಎಂದು ದೂರಿದರು.

1,200ಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಕಾಯುತ್ತಿದ್ದು, ಈ ಪ್ರಕರಣದ ತನಿಖೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸತೀಶ್‌ರೆಡ್ಡಿ, ‘ಉಮಾಪತಿ ಅವರ ಹೇಳಿಕೆಗಳು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿವೆ. ಕಾನೂನು ಹೋರಾಟದಲ್ಲಿ ಬಿಡಿಎ ಸೋತಿದೆ. ಉಮಾಪತಿ ಅವರು ರಾಜಕೀಯ ಲಾಭ ಪಡೆಯಲು ಬಯಸುತ್ತಿದ್ದಾರೆ. ಅವರ ವಿರುದ್ಧ ಭೂಕಬಳಿಕೆ ಆರೋಪ ಬಂದಿದ್ದರಿಂದ ನಮ್ಮ ವಿರುದ್ಧ ಈ ಆರೋಪ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT