ಗುರುವಾರ , ಜುಲೈ 29, 2021
21 °C

ಶಾಮನೂರು ವಿರುದ್ಧ ಅವಹೇಳನಕಾರಿ ವಿಡಿಯೊ; ಎಫ್‌ಐಆರ್‌ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಕೆಲ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾದ ವಿಡಿಯೊ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದಡಿ ಅವಿನಾಶ್ ಭೋಸ್ಕರ್ ಎಂಬಾತನ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಮಹಾರಾಷ್ಟ್ರ ಸೊಲ್ಲಾಪುರದ ಆರೋಪಿ, ಸಂದರ್ಶನ ರೀತಿಯಲ್ಲಿ ವಿಡಿಯೊ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ವೀರಶೈವ ಲಿಂಗಾಯತ ಭವನದ ನಟರಾಜ ಸಗರನಹಳ್ಳಿ ಎಂಬುವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಇರುವ ಸೌಹಾರ್ದ ಮತ್ತು ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿ ಈ ವಿಡಿಯೊ ಮಾಡಿದ್ದಾನೆ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಹಾಗೂ ಪ್ರಚೋದಿಸಲು ಆರೋಪಿ ಯತ್ನಿಸಿರುವುದಾಗಿ ದೂರುದಾರ ನಟರಾಜ್ ತಿಳಿಸಿದ್ದಾರೆ.’

‘ಆರೋಪಿ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ವಿಡಿಯೊ ವಿವರ: ‘ವೈದಿಕ ಮತ್ತು ವೀರಶೈವರಿಗೆ ಕೊನೆ ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ನಾಟಕ ಅತಿಯಾಯಿತು. ಶಾಮನೂರು ಶಿವಶಂಕರಪ್ಪ ಅವರೇ ನೀವು ಮಹಾರಾಷ್ಟ್ರಕ್ಕೆ ಬಂದು ಆ ರೀತಿ ಮಾತಾಡಿ ನೋಡೋಣ. ಮಹಾರಾಷ್ಟ್ರದ ಲಿಂಗಾಯತ ಮತ್ತು ಮರಾಠಿ ಲಿಂಗಾಯತ ಸಮುದಾಯ ನಿಮಗೆ ಸರಿಯಾದ ಉತ್ತರ ನೀಡುತ್ತದೆ. ಲಿಂಗಾಯತರು ಎಂದರೆ ಏನು? ಬಸವಣ್ಣನ ಭಕ್ತರು ಎಂದರೆ ಏನು ? ಎಂದು ತೋರಿಸುತ್ತಾರೆ. ಕರ್ನಾಟಕದ ಲಿಂಗಾಯತ ಸಹೋದರರೇ ನೀವೆಲ್ಲಾ ಇನ್ನೂ ಬಾಯಿ ಮುಚ್ಚಿಕೊಂಡಿದ್ದರೆ ನಿಮಗೆ ಲಿಂಗಾಯತರು ಎಂದು ಕರೆಸಿಕೊಳ್ಳುವ ಯೋಗ್ಯತೆಯೇ ಇರುವುದಿಲ್ಲ’ ಎಂದು ಆರೋಪಿ ವಿಡಿಯೊದಲ್ಲಿ ಹೇಳಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು