ಶನಿವಾರ, ಡಿಸೆಂಬರ್ 5, 2020
25 °C

ಬೆಂಗಳೂರು: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿನಗರ 1ನೇ ಮುಖ್ಯರಸ್ತೆಯಲ್ಲಿರುವ ರೇಖಾ ರಾಸಾಯನಿಕ ಕಾರ್ಖಾನೆ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ಗೋದಾಮು ಸುಟ್ಟು ಹೋಗಿದೆ. ಅಕ್ಕ–ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕಾರ್ಖಾನೆ ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಕ್ರಮೇಣ ಹೆಚ್ಚಾಗಿ ಇಡೀ ಗೋದಾಮು ಆವರಿಸಿತ್ತು. ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು, ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಒಬ್ಬಾತನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಬೆಂಕಿ ಅವಘಡದ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದರು. ಅಗ್ನಿಶಾಮಕ ದಳದ 10 ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದವು.

‘ಬೊಮ್ಮಸಂದ್ರದಲ್ಲಿ ರೇಖಾ ಕೆಮಿಕಲ್ಸ್ ಆ್ಯಂಡ್ ಕಾರ್ಪೋರೇಷನ್ ಕಾರ್ಖಾನೆ ಇದೆ. ಅಲ್ಲಿ ಸ್ಯಾನಿಟೈಸರ್‌ ಹಾಗೂ ಟಿನ್ನರ್‌ಗಳನ್ನು ತಯಾರಿಸಲಾಗುತ್ತಿದೆ. ಕಾರ್ಖಾನೆಗೆ ಬೇಕಾಗುವ ರಾಸಾಯನಿಕ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಲು ಈ ಗೋದಾಮು ಮಾಡಲಾಗಿತ್ತು. ಅಪಾರ ಪ್ರಮಾಣದ ರಾಸಾಯನಿಕವನ್ನು ತರಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಯಾವುದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅದೇ ರಾಸಾಯನಿಕಗಳ ಡಬ್ಬಿಗಳು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪಶ್ಚಿಮ ವಿಭಾಗದ ಪೊಲೀಸರು ಹೇಳಿದರು.

‘ಕಾರ್ಖಾನೆ ಗೋದಾಮಿನಲ್ಲಿ ಎಂದಿನಂತೆ ಕಾರ್ಮಿಕರು ಕೆಲಸ ಆರಂಭಿಸಿದ್ದರು. ರಾಸಾಯನಿಕ ತುಂಬಿದ್ದ ಡಬ್ಬಿಗಳನ್ನು ಇಳಿಸಲು ಟಿಪ್ಪರ್ ವಾಹನ ಬಂದಿತ್ತು. ಅದೇ ವೇಳೆಯೇ ಬೆಂಕಿ ಕಾಣಿಸಿಕೊಂಡಿತ್ತು. ಕಾರ್ಮಿಕರೆಲ್ಲರೂ ಹೊರಗೆ ಓಡಿ ಬಂದಿದ್ದರು. ನಂತರ, ಬೆಂಕಿ ಕೆನ್ನಾಲಗೆ ಹೆಚ್ಚಾಗಿತ್ತು. ಅಕ್ಕ–ಪಕ್ಕದ ಕಟ್ಟಡಗಳಲ್ಲಿದ್ದ ಜನರಿಗೂ ಆತಂಕ ಉಂಟಾಗಿತ್ತು. ಗೋದಾಮು ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿದ್ದ ಕಟ್ಟಡಗಳ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು’ ಎಂದೂ ತಿಳಿಸಿದರು.

‘ಅವಘಡ ಸಂಭವಿಸುತ್ತಿದ್ದಂತೆ ಕಾರ್ಖಾನೆ ಮಾಲೀಕರು ನಾಪತ್ತೆಯಾಗಿದ್ದಾರೆ. ಅವರ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ. ಈ ಬಗ್ಗೆ ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಕಪ್ಪು ಹೊಗೆ ಕಂಡು ಭಯ: ‘ಬೆಂಕಿಗಿಂತಲೂ ಕಪ್ಪು ಹೊಗೆಯೇ ಹೆಚ್ಚಾಗಿತ್ತು. ಮುಂದೆ ಏನಾಗುತ್ತದೆ ಎಂಬ ಭಯ ಜಾಸ್ತಿ ಇತ್ತು. ಹೀಗಾಗಿ, ಕಟ್ಟಡ ಬಿಟ್ಟು ದೂರ ಬಂದು ನಿಂತೆವು’ ಎಂದು ಸ್ಥಳೀಯ ನಿವಾಸಿ ರಾಧಮ್ಮ ಹೇಳಿದರು.

‘ಬೆಂಕಿ ಧಗ ಧಗ ಉರಿಯಿತು. ಇಷ್ಟು ಪ್ರಮಾಣದ ಬೆಂಕಿಯನ್ನು ಎಂದಿಗೂ ನೋಡಿರಲಿಲ್ಲ. ಬೆಂಕಿ ಕಾವು 200 ಮೀಟರ್‌ಗಿಂತ ದೂರ ತಾಗುತ್ತಿತ್ತು’ ಎಂದು ತಮಗಾದ ಅನುಭವ ಬಿಚ್ಚಿಟ್ಟರು.

ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ಅವಘಢದಿಂದ ಗೋದಾಮಿನ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿ ಇದೆ.

ಚಾಲಕ ವಶಕ್ಕೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಅಮರ್‌ ಕುಮಾರ್ ಪಾಂಡೆ, ‘ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ. ರಾಸಾಯನಿಕ ಡಬ್ಬಿಗಳನ್ನು ತಂದಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಖಾನೆ ಮಾಲೀಕರಾದ ಕಮಲಾ ಹಾಗೂ ಅವರ ಪತಿ ಸಜ್ಜನ್‌ ರಾವ್ ತಲೆಮರೆಸಿಕೊಂಡಿದ್ದಾರೆ’ ಎಂದರು.

ಗೋದಾಮಿನ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿ, ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ತಾಗಿದೆ. ಕಾರು, ಬೈಕ್, ಟಿಪ್ಪರ್ ಸೇರಿದಂತೆ 8 ವಾಹನಗಳು ಸುಟ್ಟಿವೆ.

ವಸತಿ ಪ್ರದೇಶದಲ್ಲಿದ್ದ ಗೋದಾಮು: ಸ್ಥಳೀಯರ ಆಕ್ರೋಶ

‘ಮಹದೇವ ಶಾಲೆ ಹಾಗೂ ಹಲವು ಮನೆಗಳಿರುವ ವಸತಿ ಪ್ರದೇಶಕ್ಕೆ ಹೊಂದಿಕೊಂಡೇ ಈ ಕಾರ್ಖಾನೆ ಗೋದಾಮು ಇತ್ತು. ಇಂಥ ರಾಸಾಯನಿಕ ಸಂಗ್ರಹದ ಗೋದಾಮಿಗೆ ಅನುಮತಿ ಕೊಟ್ಟವರು ಯಾರು? ಇದೊಂದು ಅಕ್ರಮ ಗೋದಾಮು’ ಎಂದು ಸ್ಥಳೀಯರು ದೂರಿದರು.

‘ಸ್ಫೋಟಗೊಳ್ಳುವ ರಾಸಾಯನಿಕವನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದೇ ಅವಘಡಕ್ಕೆ ಕಾರಣ. ಈ‌ ಅವಘಢದಿಂದ ಸಾವು ಸಂಭವಿಸಿದ್ದರೆ ಯಾರು ಹೊಣೆಯಾಗುತ್ತಿದ್ದರು’ ಎಂದು ಸ್ಥಳಿಯರು ಪ್ರಶ್ನಿಸಿದರು.

‘ಗೋದಾಮು ಮಾತ್ರವಲ್ಲದೇ, ಅಕ್ಕ–ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ಕಟ್ಟಡದಲ್ಲಿದ್ದ ವಸ್ತುಗಳು ಸುಟ್ಟಿವೆ’ ಎಂದೂ ದೂರಿದರು.

ಪೀಠೋಪಕರಣ ವ್ಯಾಪಾರಿ ಮಣಿ, ‘ಗೋದಾಮು ಪಕ್ಕದ ಕಟ್ಟಡದಲ್ಲಿ ಪೀಠೋಪಕರಣ ಸಂಗ್ರಹಿಸಿಟ್ಟಿದ್ದೆ. ಗೋದಾಮಿನ ಬೆಂಕಿ ನಮ್ಮ ಕಟ್ಟಡಕ್ಕೂ ತಗುಲಿದೆ. ವಿವಿಧ ಬಗೆಯ 300 ಪೀಠೋಪಕರಣಗಳು ಸುಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದರು.

ಆರು ಗಂಟೆ ಕಾರ್ಯಾಚರಣೆ: ಮೂವರು ಅಸ್ವಸ್ಥ

ಬೆಂಕಿ ಆರಂಭದಲ್ಲಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ, ಎಷ್ಟೇ ನೀರು ಸುರಿದರೂ ಬೆಂಕಿ ನಂದಿರಲಿಲ್ಲ. ಬೆಂಕಿ ನಂದಿಸಲು ಹೋಗಿ ಅಗ್ನಿಶಾಮಕ ದಳದ ಮೂವರು ಸಿಬ್ಬಂದಿ ಅಸ್ವಸ್ಥಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹೆಚ್ಚುವರಿಯಾಗಿ ಸ್ಥಳಕ್ಕೆ ಬಂದ ದಳದ ಸಿಬ್ಬಂದಿ, ಕಾರ್ಯಾಚರಣೆ ಮುಂದುವರಿಸಿದರು. ಆರು ಗಂಟೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

‘ಗೋದಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕವಿತ್ತು. ನೀರು ಹಾಕಿದಷ್ಟು ಬೆಂಕಿ ಹೆಚ್ಚಾಗುತ್ತಿತ್ತು. ಇದೇ ಕಾರಣಕ್ಕೆ ಬೆಂಕಿ ಆರುವುದು ತಡವಾಯಿತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

‘ಯಾರೋ ಕಿಡಿಗೇಡಿಗಳು, ಸಿಗರೇಟ್ ಸೇದಿ ಬಿಸಾಡಿದ್ದರಿಂದ ರಾಸಾಯನಿಕಕ್ಕೆ ಬೆಂಕಿ ತಗುಲಿರುವ ಅನುಮಾನವಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದಾರೆ. ಅವರ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ’ ಎಂದೂ ತಿಳಿಸಿದರು.

‘ಪರವಾನಗಿ ಇರಲಿಲ್ಲ’

ಬೊಮ್ಮಸಂದ್ರದಲ್ಲಿ ಕಾರ್ಖಾನೆ ಹೊಂದಲು ಮಾತ್ರ ಕಮಲಾ ಅವರಿಗೆ ಪರವಾನಗಿ ಇದೆ. ಬಾಪೂಜಿನಗರದಲ್ಲಿ ಗೋದಾಮು ತೆರೆಯಲು ಪರವಾನಗಿ ಇರಲಿಲ್ಲ. ಹೀಗಾಗಿ, ಕಮಲಾ ಹಾಗೂ ಅವರ ಪತಿ ಸಜ್ಜನ್‌ ರಾವ್ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು