ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಯಲ್ಲಿ ಹಾರಿದ ಗುಂಡು: ಹೆಡ್‌ ಕಾನ್‌ಸ್ಟೆಬಲ್‌ಗೆ ಗಾಯ

Published 22 ಮಾರ್ಚ್ 2024, 15:44 IST
Last Updated 22 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರವಾನಗಿದಾರರಿಂದ ಶಸ್ತ್ರಾಸ್ತ್ರ ಠೇವಣಿ ಇರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿದ್ದು, ಹೆಡ್‌ ಕಾನ್‌ಸ್ಟೆಬಲ್‌ವೊಬ್ಬರು ಗಾಯಗೊಂಡಿದ್ದಾರೆ.

‘ಬೇಗೂರು ಠಾಣೆಯಲ್ಲಿ ಶುಕ್ರವಾರ ಈ ಅವಘಡ ಸಂಭವಿಸಿದೆ. ಪಿಸ್ತೂಲ್ ಪರವಾನಗಿದಾರ ಮುಕುಂದ್‌ ರೆಡ್ಡಿ ಹಾಗೂ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪರವಾನಗಿ ಶಸ್ತ್ರಾಸ್ತ್ರ ಹೊಂದಲು ಅವಕಾಶವಿಲ್ಲ. ಹೀಗಾಗಿ, ಠಾಣೆಗೆ ಠೇವಣಿ ಇರಿಸುವಂತೆ ಆದೇಶ ಹೊರಡಿಸಲಾಗಿದೆ. ಇದೇ ಕಾರಣಕ್ಕೆ ಪರವಾನಗಿದಾರ ಮುಕುಂದ್ ರೆಡ್ಡಿ ಅವರು ಪಿಸ್ತೂಲ್‌ ಠೇವಣಿ ಇರಿಸಲು ಬೇಗೂರು ಠಾಣೆಗೆ ಬಂದಿದ್ದರು.’

‘ಪಿಸ್ತೂಲ್‌ನಲ್ಲಿ ಒಂದು ಗುಂಡು ಇತ್ತು. ಆದರೆ, ಪರವಾನಗಿದಾರ ಯಾವುದೇ ಗುಂಡು ಇಲ್ಲವೆಂದು ತಿಳಿಸಿದ್ದರು. ಅದನ್ನೇ ನಿಜವೆಂದು ನಂಬಿದ್ದ ಕಾನ್‌ಸ್ಟೆಬಲ್ ವೆಂಕಣ್ಣ, ಪಿಸ್ತೂಲ್‌ ಕೈಗೆತ್ತಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿತ್ತು. ಸಮೀಪದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್ ಅನ್ಬುದಾಸ್ ಅವರ ಕಾಲಿಗೆ ಗುಂಡು ತಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗುಂಡೇಟಿನಿಂದ ಗಾಯಗೊಂಡ ಅಂಬುದಾಸ್‌ ಅವರನ್ನು ಸಿಬ್ಬಂದಿಯೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ’ ಎಂದು ತಿಳಿಸಿವೆ.

ಕಾರಣ ನಿಗೂಢ: ‘ಪಿಸ್ತೂಲ್‌ನಿಂದ ಗುಂಡು ಹಾರಿದ್ದು ಆಕಸ್ಮಿಕವೋ ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 338 (ಮನುಷ್ಯನ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರವಾನಗಿದಾರ ಹಾಗೂ ಕಾನ್‌ಸ್ಟೆಬಲ್‌ ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆದ ನಂತರವೇ ನಿಖರ ಕಾರಣ ತಿಳಿಯಲಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT