ಶನಿವಾರ, ನವೆಂಬರ್ 16, 2019
21 °C
ಪ್ರಥಮ ಪಿಯು– ನೆರೆ ಹಾವಳಿಯಿಂದ ಬೋಧನಾ ಅವಧಿ ನಷ್ಟ l ಮುಂದಕ್ಕೆ ಹಾಕಲು ಪೋಷಕರ ಒತ್ತಾಯ

ಫೆಬ್ರುವರಿಯಲ್ಲಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಆತಂಕ

Published:
Updated:

ಬೆಂಗಳೂರು: ರಾಜ್ಯದ ಹಲವೆಡೆ ನೆರೆ ಹಾವಳಿಯಿಂದ ಬೋಧನಾ ಅವಧಿ ನಷ್ಟ ವಾಗಿದ್ದರೂ, ಫೆಬ್ರುವರಿ 10 ರಿಂದಲೇ ಪ್ರಥಮ ಪಿಯು ಪರೀಕ್ಷೆಯನ್ನು ನಿಗದಿಪಡಿಸಿರುವ ಬಗ್ಗೆ ವಿರೋಧ ವ್ಯಕ್ತವಾಗಿದೆ.

ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ವಾರಗಟ್ಟಲೆ ತರಗತಿಗಳು ನಡೆದಿಲ್ಲ, ಇತರ ಕೆಲವು ಜಿಲ್ಲೆಗಳಲ್ಲಿ ಹಲವು ದಿನಗಳು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಜನವರಿ ವೇಳೆಗೆ ಪಾಠ ಪ್ರವಚನಗಳು ಕೊನೆಗೊಳ್ಳುವುದು ಕಷ್ಟ. ಹೀಗಾಗಿ ಅವಸರದಲ್ಲಿ ಪರೀಕ್ಷೆ ಮಾಡುವುದು ಏಕೆ ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಪೋಷಕರದು.

ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿರುವಂತೆ ಫೆಬ್ರುವರಿ 10ರಿಂದ 20ರವರೆಗೆ ಪ್ರಥಮ ಪಿಯು ಪರೀಕ್ಷೆಗಳು ನಡೆಯಲಿವೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಜನವರಿ ಮೊದಲ ವಾರದಿಂದಲೇ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ. ಅಂದರೆ ಡಿಸೆಂಬರ್‌ ವೇಳೆಗೇ ಬಹುತೇಕ ಪಠ್ಯವನ್ನು ಬೋಧಿಸಿ ಮುಗಿಸಬೇಕಾಗುತ್ತದೆ. ಈ ಬಾರಿ ಅದು ಬಹಳ ಕಷ್ಟ ಎಂದು ಕಾಲೇಜೊಂದರ ಪ್ರಾಂಶುಪಾಲರೊಬ್ಬರು ತಿಳಿಸಿದರು.

ಜೂನ್‌ನಲ್ಲಿ ಪಿಯು ತರಗತಿಗಳು ಆರಂಭವಾದರೂ ಪುನರಾವರ್ತಿತರಿಗೆ ಪಾಠಗಳು ಸರಿಯಾಗಿ ಆರಂಭವಾಗುವುದು ಜುಲೈನಲ್ಲೇ. ಅನಾವೃಷ್ಟಿಯಿಂದ ಸರಣಿ ರಜೆಗಳು ಬಂದರೆ ಬೋಧನೆ ಕೊನೆಗೊಳಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಪ್ರಥಮ ಪಿಯು ಪರೀಕ್ಷೆ ಬೇಗ ಮಾಡಿ ಮುಗಿಸುವುದು ಸರಿಯಲ್ಲ ಎಂದು ಕಾರವಾರದ ರಾಜೇಶ್‌ ನಾಯ್ಕ್  ಹೇಳಿದರು.

ನಂತರವೂ ಸಾಧ್ಯ: ದ್ವಿತೀಯ ಪಿಯು ಪರೀಕ್ಷೆ ಕೊನೆಗೊಂಡ ನಂತರವೂ ಪ್ರಥಮ ಪಿಯು ಪರೀಕ್ಷೆ ನಡೆಸಬಹುದಲ್ಲ ಎಂದು ಕೇಳುವ ಪೋಷಕರು, ಮಾರ್ಚ್‌ ಕೊನೆಯ ವಾರದಲ್ಲಿ ಪ್ರಥಮ ಪಿಯು ಪರೀಕ್ಷೆ ನಡೆಸುವುದು ಸೂಕ್ತ ಎಂದು ಹೇಳುತ್ತಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ  ಸಮಯದಲ್ಲಿ ನಡೆದರೂ ಯಾವುದೇ ತೊಂದರೆ ಆಗುವುದಿಲ್ಲ ಎಂದೂ ಅವರು ಹೇಳುತ್ತಾರೆ.

ನಗರ ಪ್ರದೇಶಗಳನ್ನು ನೋಡಿ ಕೊಂಡು ಪಿಯು ಪರೀಕ್ಷೆ ನಿಗದಿಪಡಿಸಿದ ಸಾಧ್ಯತೆ ಇದೆ, ಗ್ರಾಮೀಣ ಭಾಗದಲ್ಲಿ, ಕೋಚಿಂಗ್‌ ವಂಚಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಡಿ ಜನವರಿ ಪೂರ್ತಿ ಅವರಿಗೆ ಬೋಧನೆಗೆ ಸಮಯ ನೀಡಬೇಕು ಎಂಬುದು ಹಲವರ ಒತ್ತಾಯ.

ಕೋಚಿಂಗ್‌ ಕೇಂದ್ರಗಳ ಲಾಬಿ?
ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಬ್ರಿಜ್‌ ಕೋರ್ಸ್‌ ನಡೆಸುವುದು ನಗರ ಪ್ರದೇಶಗಳಲ್ಲಿ ಸಾಮಾನ್ಯ. ಅದಕ್ಕಾಗಿ ಅನೇಕ ಕೋಚಿಂಗ್‌ ಕೇಂದ್ರಗಳೂ ತಲೆ ಎತ್ತಿವೆ. ವಿದ್ಯಾರ್ಥಿಗಳಿಗೆ ರಜಾ ಅವಧಿ ಹೆಚ್ಚು ದೊರೆತಷ್ಟೂ ಕೋಚಿಂಗ್‌ ಕೇಂದ್ರಗಳು ಅಧಿಕ ಶುಲ್ಕ ವಸೂಲಿ ಮಾಡಿಕೊಂಡು ಪಾಠ ಮಾಡುವುದು ಸಾಧ್ಯವಾಗುತ್ತದೆ. ಪ್ರಥಮ ಪಿಯು ಪರೀಕ್ಷೆ ಬೇಗನೆ ಮಾಡಿ ಮುಗಿಸುವುದರ ಹಿಂದೆ ಲಾಬಿಯೂ ಕೆಲಸ ಮಾಡುತ್ತಿರುವ ಶಂಕೆ ಇದೆ ಎಂದು ಪೋಷಕರೊಬ್ಬರು ಅಭಿಪ್ರಾಯಪಟ್ಟರು.

ಅಂಕಿ ಅಂಶ
75 ಗಂಟೆ: 
2012ಕ್ಕೆ ಮೊದಲು ವಿಜ್ಞಾನದ ಪಠ್ಯ ಬೋಧನೆಗೆ ಬೇಕಿದ್ದ ಸಮಯ
125 ಗಂಟೆ: 2012ರಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಬಂದ ಬಳಿಕ ಬೇಕಾದ ಸಮಯ
36: ಪಿಯು ವ್ಯಾಸಂಗದ ಒಟ್ಟು ವಿಷಯಗಳು

**
ಭಾನುವಾರವೂ ತರಗತಿ ನಡೆಸಿರುವುದರಿಂದ ಪಠ್ಯ ಪೂರ್ಣಗೊಂಡಿದೆ. ಪರೀಕ್ಷೆ ಮುಂದೂಡಿ ಎಂದು ಪೋಷಕರು, ವಿದ್ಯಾರ್ಥಿಗಳಿಂದ ಬೇಡಿಕೆ ಬಂದಿಲ್ಲ.
-ರಾಜಶೇಖರ ಪಟ್ಟಣಶೆಟ್ಟಿ, ಬೆಳಗಾವಿ ಜಿಲ್ಲೆಯ ಪ್ರಭಾರ ಡಿಡಿಪಿಯು

**

ಒಂದು ವಾರದ ತರಗತಿ ನಷ್ಟ ಆಗಿದ್ದಕ್ಕೆ ಹಲವು ದಿನ ಎರಡೆರಡು ಗಂಟೆ ವಿಶೇಷ ತರಗತಿ ತೆಗೆದುಕೊಂಡಿದ್ದರು. ಪರೀಕ್ಷೆ ಸ್ವಲ್ಪ ಮುಂದಕ್ಕೆ ಹಾಕಿದರೆ ಉತ್ತಮ.
-ರಾಜೇಶ್ ನಾಯ್ಕ್, ಪೋಷಕರು, ಕಾರವಾರ

ಪ್ರತಿಕ್ರಿಯಿಸಿ (+)