ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಲಹಳ್ಳಿ ಕೆರೆ: ಮೀನುಗಳ ಸಾವು

Published 21 ಜೂನ್ 2023, 20:50 IST
Last Updated 21 ಜೂನ್ 2023, 20:50 IST
ಅಕ್ಷರ ಗಾತ್ರ

ಬೆಂಗಳೂರು: ಚರಂಡಿ ನೀರು ಕೆರೆಗಳಿಗೆ ಸೇರುತ್ತಿದ್ದಂತೆ ಮೀನುಗಳು ಸಾಯತೊಡಗಿವೆ. ಮಂಗಳವಾರ ಭಟ್ರಹಳ್ಳಿ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿದ್ದರೆ, ಬುಧವಾರ ಕುಂದಲಹಳ್ಳಿ ಕೆರೆಯಲ್ಲಿ ಮೀನು ಸತ್ತು ತೇಲುತ್ತಿವೆ.

ನಗರದ ಚರಂಡಿ ನೀರು ಮಾತ್ರವಲ್ಲ, ಒಳಚರಂಡಿಯ ನೀರು ಕೂಡ ಸೇರಿರುವುದರಿಂದ ನೀರು ಕಲುಷಿತಗೊಂಡು ಮೀನುಗಳು ಸಾಯುತ್ತಿವೆ. ಕುಂದಲಹಳ್ಳಿ ಕೆರೆಯಲ್ಲಿ ಒಂದು ತಿಂಗಳ ಹಿಂದೆ ಇದೇ ರೀತಿ ಮೀನುಗಳು ಸತ್ತಿದ್ದವು. 

‘ಕುಂದಲಹಳ್ಳಿ ಕೆರೆಗೆ ವಾಯು ವಿಹಾರಕ್ಕೆ ಹೋಗಿದ್ದೆ. ಆಗ ಮೀನು ಸತ್ತು ತೇಲುತ್ತಿರುವುದನ್ನು ಕಂಡೆ. ಕಾರಣ ಗೊತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನೀರು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಸುದರ್ಶನ್‌ ಹೇಳಿದರು.

‘ಭಟ್ರಹಳ್ಳಿ ಕೆರೆಯಲ್ಲಿ ಮಂಗಳವಾರ ಮೀನುಗಳು ಸತ್ತುಬಿದ್ದಿದ್ದವು. ಇವತ್ತು ಅಧಿಕಾರಿಗಳು ಬಂದು ಮೀನುಗಳನ್ನು ತೆಗೆದು ಸ್ವಚ್ಛ ಮಾಡಿಸಿದ್ದಾರೆ. ಮೀನು ಸಾಯಬೇಕಿದ್ದರೆ ನೀರು ವಿಷ ಆಗಿರಬೇಕು. ಇದೇ ನೀರನ್ನು ಜನ ಬಳಸಿದರೆ ಮೀನಿಗೆ ಬಂದ ಸ್ಥಿತಿಯೇ ಮನುಷ್ಯರಿಗೂ ಬರಬಹುದು’ ಎಂದು ಭಟ್ರಹಳ್ಳಿ ಕೆರೆ ಸಮೀಪದ ವೀಣಣ್ಣ ಗೌಡ ಆತಂಕ ವ್ಯಕ್ತಪಡಿಸಿದರು.

ಕೆರೆಗಳಲ್ಲಿ ಮೀನು ಸಾಯುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೆರೆ ಕಲುಷಿತಗೊಳ್ಳುತ್ತಿರುವುದೇ ಇದಕ್ಕೆ ಕಾರಣ. ಹೀಗಾಗದಂತೆ ಶಾಶ್ವತ ಪರಿಹಾರವನ್ನು ಅಧಿಕಾರಿಗಳು ಕಂಡುಕೊಳ್ಳಬೇಕು ಎಂದು ಆಕ್ಷನ್‌ ಏಡ್‌ ಸಂಸ್ಥೆಯ
ರಾಘವೇಂದ್ರ ಬಿ. ಪಚ್ಚಾಪುರ ಆಗ್ರಹಿಸಿದರು.

ಆಮ್ಲಜನಕದ ಕೊರತೆ : ಈ ಪ್ರದೇಶದಲ್ಲಿ ಕೈಗಾರಿಕೆಗಳಿಲ್ಲ. ಹೊಸತಾಗಿ 110 ಹಳ್ಳಿಗಳು ಸೇರಿರುವುದರಿಂದ ಚರಂಡಿ ನೀರು ಕೆರೆಗೆ ಸೇರಿ ಸಮಸ್ಯೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಮಹದೇವಪುರ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಮಹೇಂದ್ರ ಮಾಹಿತಿ ನೀಡಿದರು.

‘ಮಳೆ ಬಂದಾಗ ಚರಂಡಿ ನೀರು ಕೆರೆಗೆ ಸೇರಿರುತ್ತದೆ. ಜತೆಗೆ ಒಳಚರಂಡಿಯ ನೀರೂ ಸೇರಿರುವ ಸಾಧ್ಯತೆಗಳಿವೆ. ನೀರಿನಲ್ಲಿ ಆಮ್ಲಜನಕದ ಪ್ರಮಾಣ ಒಮ್ಮೆಲೇ ಬದಲಾದಾಗ ಮೀನುಗಳು ಸತ್ತಿವೆ. ಮಳೆ ಬರುವ ಮೊದಲೇ ಚರಂಡಿಗಳನ್ನು ಸ್ವಚ್ಛಗೊಳಿಸಿದರೆ, ಒಳಚರಂಡಿ ನೀರು ಸೇರದಂತೆ ಕ್ರಮ ಕೈಗೊಂಡರೆ ಈ ರೀತಿ ಆಗುವುದಿಲ್ಲ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’ ಎಂದರು.

10 ಬಾರಿ ಮೀನು ಸಾವು

ಬಿಬಿಎಂಪಿ ವ್ಯಾಪ್ತಿಯಲ್ಲಿ 2022ರಲ್ಲಿ 23 ಕೆರೆಗಳಲ್ಲಿ 16 ಬಾರಿ ಮೀನುಗಳು ಸತ್ತಿದ್ದವು. ಈ ವರ್ಷ ಇಲ್ಲಿವರೆಗೆ 8 ಕೆರೆಗಳಲ್ಲಿ 10 ಬಾರಿ ಸಾವು ಕಂಡಿವೆ. 

2023ರ ಫೆ.8 ಮತ್ತು ಏಪ್ರಿಲ್‌ 2ರಂದು ಕೊತ್ತನೂರು ಕೆರೆ, ಮಾರ್ಚ್‌ 30ರಂದು ಇಬ್ಲೂರು ಕೆರೆ, ಮೇ 5ರಂದು ಚೆಳೆಕೆರೆ, ಮೇ 25ರಂದು ಮಡಿವಾಳ ಕೆರೆ, ಜೂನ್ 18ರಂದು ದೊಡ್ಡಕಲ್ಲಸಂದ್ರ ಕೆರೆ, ಜೂನ್ 20ರಂದು ಭಟ್ರಹಳ್ಳಿ ಕೆರೆ, ಜೂನ್‌ 1 ಮತ್ತು 21ರಂದು ಕುಂದಲಹಳ್ಳಿ ಕೆರೆಯಲ್ಲಿ ಮೀನುಗಳು ಸತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT