ಎಫ್‌ಕೆಸಿಸಿಐನಿಂದ ಎನ್‌ಆರ್‌ಐ ವೇದಿಕೆ ರಚನೆ

4

ಎಫ್‌ಕೆಸಿಸಿಐನಿಂದ ಎನ್‌ಆರ್‌ಐ ವೇದಿಕೆ ರಚನೆ

Published:
Updated:

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ನಿಯೋಗವು ಇತ್ತೀಚೆಗೆ ಆರು ದೇಶಗಳಲ್ಲಿ ಪ್ರವಾಸ ಮಾಡಿ ಅನಿವಾಸಿ ಕನ್ನಡಿಗರ ಸಭೆಯನ್ನು ಅಲ್ಲಲ್ಲಿ ನಡೆಸಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಲು ಅವರ ಮನವೊಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಹೇಳಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕ, ಶಾರ್ಜಾ, ದುಬೈ, ಅಬುಧಾಬಿ, ಉಗಾಂಡಾ ಮತ್ತು ರುವಾಂಡಾ ದೇಶಗಳಿಗೆ ನಮ್ಮ ಸಂಸ್ಥೆಯ 35 ಸದಸ್ಯರನ್ನೊಳಗೊಂಡ ನಿಯೋಗ ಭೇಟಿ ಕೊಟ್ಟಿದೆ. ಸಂಸ್ಥೆಯೇ ಅಲ್ಲಿ ಸಭೆಗಳನ್ನು ಆಯೋಜಿಸಿದೆ. ಅನಿವಾಸಿ ಭಾರತೀಯರ ವೇದಿಕೆಗಳನ್ನು ರಚಿಸಿದೆ. ಇಂಥ ವೇದಿಕೆಗಳನ್ನು ವಿಶ್ವದ 50 ದೇಶಗಳಲ್ಲಿ ಸ್ಥಾಪಿಸಿ ರಾಜ್ಯಕ್ಕೆ ಉದ್ದಿಮೆಗಳು ಬರುವಂತೆ ಮಾಡುವ ಉದ್ದೇಶ ನಮ್ಮದು’ ಎಂದರು. 

‘ಉದ್ದಿಮೆಗಳ ಸ್ಥಾಪನೆಗೆ ಬಂಡವಾಳ ಹರಿದುಬರುವಂತೆ ಮಾಡುವುದು, ರೋಗಗ್ರಸ್ತ ಉದ್ದಿಮೆಗಳ ಪುನಶ್ಚೇತನಕ್ಕಾಗಿ ಹಣಕಾಸು ಪಾಲುದಾರರನ್ನು ಭಾಗೀದಾರರನ್ನಾಗಿ ಮಾಡುವುದು, ಅವರ ಸಹಕಾರದಿಂದ ಜಂಟಿ ಯೋಜನೆಗಳನ್ನು ಆರಂಭಿಸುವ ಬಗ್ಗೆ ಈ ವೇದಿಕೆಗಳಲ್ಲಿ ಚರ್ಚೆ ನಡೆದಿದೆ’ ಎಂದರು.

‘ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿಯೂ ರಾಜ್ಯದಲ್ಲಿರುವ ಉದ್ದಿಮೆ ಅವಕಾಶಗಳ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿಯೂ ಸಾಕಷ್ಟು ಸಭೆಗಳು ನಡೆದಿವೆ’ ಎಂದರು.  

ಅನಿವಾಸೀಯರ ಆತಂಕ: ‘ಭಾರತದಲ್ಲಿ ಹೂಡಿಕೆ ಮಾಡಲು ಎನ್‌ಆರ್‌ಐಗಳಿಗೆ ಹಲವು ಆತಂಕಗಳಿವೆ. ಪರವಾನಗಿ, ಸರ್ಕಾರಿ ವ್ಯವಸ್ಥೆಯ ವಿಳಂಬ ನೀತಿ, ಭೂಮಿ ಹಂಚಿಕೆ, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಇಂತಹ ಆತಂಕಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಂಗ್‌ ಹೊರತುಪಡಿಸಿ ಉಳಿದೆಲ್ಲ ಪ್ರಕ್ರಿಯೆಗಳಿಗೆ ಸಂಸ್ಥೆ ಸಹಕರಿಸುವುದಾಗಿ ಭರವಸೆ ನೀಡಿದೆ’ ಎಂದು ಹೇಳಿದರು. 

‘ಮುಂದೆ ಸಂಸ್ಥೆಯ ವತಿಯಿಂದ ಏಷ್ಯನ್‌ ಛೇಂಬರ್‌ ಆಫ್‌ ಕಾಮರ್ಸ್‌ನ ಸಭೆ ಕರೆಯಲಾಗುತ್ತದೆ. ಅದರಲ್ಲಿ 26 ದೇಶಗಳ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಲಿದ್ದೇವೆ’ ಎಂದರು.

ವಿಶ್ವೇಶ್ವರಯ್ಯ ಪ್ರಶಸ್ತಿ: ಸೆ. 15ರಂದು ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ನಡೆಯಲಿದೆ. ಈ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌.ಶೆಟ್ಟಿ ಅವರಿಗೆ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !