ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ಕೊಟ್ಟವರ ವಿರುದ್ಧವೂ ಪ್ರಕರಣ!

Last Updated 30 ಜೂನ್ 2018, 19:12 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್ ಉಪವಿಭಾಗದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ಮಾರತ್ತಹಳ್ಳಿ ಮೇಲ್ಸೇತುವೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದರು.

ಜಾಹೀರಾತು ಫಲಕ ಹಾಕಿದ್ದ ಸಂಸ್ಥೆಗಳ ವಿರುದ್ಧ ಮಾತ್ರವಲ್ಲದೆ, ಜಾಹೀರಾತು ನೀಡಿದ್ದ ಕಂಪನಿಗಳ ವಿರುದ್ಧವೂ ಪ್ರಕರಣ ದಾಖಲಿಸುವ ಮೂಲಕ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ರವಾನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ‘ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಕಾರ್ಯಾಚರಣೆ ನಡೆಯಿತು. ನಗರದ ಸೌಂದರ್ಯಕ್ಕೆ ಧಕ್ಕೆ ತರುವಂತಿದ್ದ ಫಲಕಗಳನ್ನು ತೆರವುಗೊಳಿಸಿ, ಸಂಬಂಧಪಟ್ಟ ಠಾಣೆಗಳಲ್ಲಿ 17 ಪ್ರಕರಣಗಳನ್ನು ದಾಖಲಿಸಿದ್ದೇವೆ. ಬಿಬಿಎಂಪಿ ವತಿಯಿಂದಲೂ ಮಾಲೀಕರಿಗೆ ನೋಟಿಸ್ ರವಾನೆಯಾಗಿದೆ’ ಎಂದು ಹೇಳಿದರು.

‘ಭೀಮಾ ಜ್ಯುವೆಲರ್ಸ್, ಅತಿಥಿ ರೆಸಿಡೆನ್ಸಿ, ಶ್ರೀ ಸಾಯಿ ದರ್ಶಿನಿ, ಟೆಸ್ಟಿಂಗ್ ಟೂಲ್ಸ್, ಅನ್ನೀ ಮ್ಯೂಸಿಕ್ ಶಾಪ್, ‌ಲ್ಯಾಂಕೋಸ್, ಫ್ರೂಟ್ ಫಿಟ್‌ನೆಸ್ ಜಿಮ್, ಎಲೆಕಾ ಶಾಪ್, ಎನಿಮೆಂಟ್ ಐಟಿ ಇನ್ಫೋ, ರಾಜಾ ರೈ ಹೋಟೆಲ್, ಮೈಂಡ್ ಆ್ಯಂಡ್ ಸಿಸ್ಟಮ್ ಕಂಪನಿ, ಬ್ಯಾಕ್ ಟು ಕ್ಯಾಂಪಸ್ ಹೋಟೆಲ್ ಹಾಗೂ ಜಂಬ್ರೋಸ್ ಸೀನಿಯರ್ ಕಂಪನಿಗಳಿಗೆ ಸಂಬಂಧಿಸಿದ ಫಲಕಗಳನ್ನು ತೆಗೆಸಲಾಯಿತು’ ಎಂದು ಮಾಹಿತಿ ನೀಡಿದರು.

‘ಕೆಲ ಹೋಟೆಲ್‌ಗಳ ಮಾಲೀಕರು, ಪಾದಚಾರಿ ಮಾರ್ಗವನ್ನೂ ಒತ್ತುವರಿ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದರು ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದೇವೆ’ ಎಂದು ಹೇಳಿದರು. ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರಾದ ವಾಸಂತಿ ಅಮರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT