ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್‌ ಅಗೆತ | ಸಂಗೊಳ್ಳಿ ರಾಯಣ್ಣ ವೃತ್ತ ಹೆಜ್ಜೆ ಹೆಜ್ಜೆಗೂ ಆತಂಕ

ರಸ್ತೆ ಕಾಮಗಾರಿ
Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಕೆಂಪೇಗೌಡ ಬಸ್‌ನಿಲ್ದಾಣದಿಂದ ಅನತಿ ದೂರದಲ್ಲಿರುವಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಸ್ತೆ ಕಾಮಗಾರಿ ಸಲುವಾಗಿ ಪಾದಚಾರಿ ಮಾರ್ಗವನ್ನು ಅಗೆಯಲಾಗಿದೆ. ನಿತ್ಯ ಸಾವಿರಾರು ಜನರು ಓಡಾಡುವ ಇಲ್ಲಿ ಪಾದಚಾರಿಗಳು ಪ್ರತಿ ಹೆಜ್ಜೆಯನ್ನೂ ಆತಂಕದಿಂದಲೇ ಇಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಫುಟ್‌ಪಾತ್‌ ಅಗೆದು ತಿಂಗಳುಗಳೇ ಉರುಳಿದರೂ ಪಾದಚಾರಿಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಕೆಂಪೇಗೌಡ ಬಸ್‌ನಿಲ್ದಾಣ ಪ್ರದೇಶದಲ್ಲಿ ದಿನವಿಡೀ ವಾಹನ ದಟ್ಟಣೆ ಇರುತ್ತದೆ. ರಸ್ತೆ ಕಾಮಗಾರಿಯಿಂದಾಗಿ ದಟ್ಟಣೆ ಮತ್ತಷ್ಟು ಹೆಚ್ಚಿದೆ. ಫುಟ್‌ಪಾತ್‌ ಇಲ್ಲದ ಕಾರಣ ಬಸ್‌ಗಳು ಸಂಚರಿಸುವ ರಸ್ತೆಯಂಚಿನಲ್ಲಿ ಸಾಗುವ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕಾದ ಸ್ಥಿತಿ ಇದೆ.

ಅಗೆದಿರುವ ಕಲ್ಲು, ಮಣ್ಣು, ಮರದ ಕೊಂಬೆಗಳು ಮತ್ತು ಸಿಮೆಂಟ್ ಕೊಳವೆಗಳನ್ನು ರಸ್ತೆ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ಈ ಕಸದ ರಾಶಿ ದಾಟಿಕೊಂಡು ಹೋಗುವಾಗ ಜನ ಹೈರಾಣಾಗುತ್ತಿದ್ದಾರೆ. ಒಡೆದ ಕಾಂಕ್ರೀಟ್‌ ಕೊಳವೆಗಳಿಂದ ಹೊರಚಾಚಿರುವ ಕಬ್ಬಿಣದ ಸರಳುಗಳು ತಾಗಿ ಪಾದಚಾರಿಗಳು ಗಾಯಗೊಳ್ಳುವ ಮತ್ತು ಎಡವಿ ಬೀಳುವಂತಹ ಅಪಾಯಗಳೂ ಇವೆ.ಇಲ್ಲಿ ನಿತ್ಯ ಓಡಾಡುವ ಸಾವಿರಾರು ಪಾದಚಾರಿಗಳು ಈ ಅಡೆತಡೆಗಳ ನಡುವೆ ನಡೆಯಲೂ ಆಗದೇ, ತಪ್ಪಿಸಿಕೊಳ್ಳಲೂ ಆಗದೇ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸದಾ ವಾಹನಗಳಿಂದ ಗಿಜಿಗುಡುವ ಈ ಪ್ರದೇಶದಲ್ಲಿ ವಾಯುಮಾಲಿನ್ಯ ಮೊದಲೇ ಹೆಚ್ಚಿದೆ. ಜತೆಗೆ ಈ ಪ್ರದೇಶದ ರಸ್ತೆಯೂ ಹದಗೆಟ್ಟಿವೆ. ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆಗಳು ಧೂಳುಮಯವಾಗಿವೆ. ವಾಹನಗಳು ಓಡಾಡುವಾಗ ಪಾದಚಾರಿಗಳ ಮೈಮೇಲೆ ಧೂಳಿನ ಮಳೆ ಸುರಿಯುತ್ತದೆ. ಧೂಳಿನ ಕಣಗಳು ಕಣ್ಣಿಗೆ ರಾಚುತ್ತವೆ.

* ನಿತ್ಯ ಇದೇ ದಾರಿಯಲ್ಲಿ ಸಂಚರಿಸುತ್ತೇನೆ. ಸಂಜೆ ಕೆಲಸದಿಂದ ಹಿಂತಿರುಗುವಾಗ ದಾರಿ ಪಕ್ಕದಲ್ಲಿ ಹಾಕಿರುವ ಕಟ್ಟಿಗೆ ಮತ್ತು ಕಬ್ಬಿಣದ ಸರಳುಗಳಿಂದ ಕೆಲವೊಮ್ಮೆ ಎಡವಿ ಬಿದ್ದಿದ್ದೇನೆ

ಪುಷ್ಪಾ,ಪಾದಚಾರಿ

*ವಾಹನ ದಟ್ಟಣೆ ಇರುವ ಜಾಗಗಳಲ್ಲಿ ನಡೆಯುವ ಕಾಮಗಾರಿ ಇಷ್ಟೊಂದು ವಿಳಂಬವಾಗಬಾರದು. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿನ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು

ರಮೇಶ,ಪಾದಚಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT