ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ₹40 ಲಕ್ಷ ಭೋಗ್ಯದ ಹಣ ಪಡೆದು ವಂಚನೆ

ಆಸ್ತಿ ಜಪ್ತಿಗೆ ಬ್ಯಾಂಕ್ ನೋಟಿಸ್: ಠಾಣೆಗೆ ದೂರು ನೀಡಿದ ಭೋಗ್ಯದಾರ
Published 28 ಏಪ್ರಿಲ್ 2024, 16:39 IST
Last Updated 28 ಏಪ್ರಿಲ್ 2024, 16:39 IST
ಅಕ್ಷರ ಗಾತ್ರ

ಬೆಂಗಳೂರು: ಫ್ಲ್ಯಾಟ್‌ ಮೇಲಿನ ಲಕ್ಷಾಂತರ ರೂಪಾಯಿ ಸಾಲ ಮರುಪಾವತಿ ಮಾಡದ ಮಾಲೀಕ, ಅದೇ ಫ್ಲ್ಯಾಟ್‌ ಅನ್ನು ಮತ್ತೊಬ್ಬರಿಗೆ ₹40 ಲಕ್ಷ ಬೆಲೆಗೆ ಭೋಗ್ಯಕ್ಕೆ ನೀಡಿ ವಂಚಿಸಿರುವ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಲ್ಯಾಂಗ್‌ಫೋರ್ಡ್ ರಸ್ತೆಯ ರೋಹನ್ ಎಂಬುವವರು ವಂಚನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯ ನೀಡಿರುವ ನಿರ್ದೇಶನದಂತೆ, ಫ್ಲ್ಯಾಟ್‌ ಮಾಲೀಕನಾಗಿರುವ ಆರೋಪಿ ಮೊಹಮ್ಮದ್ ಅಲೀಮುದ್ದೀನ್ (32) ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೈದರಾಬಾದ್‌ನ ಉದ್ಯಮಿ ಅಲೀಮುದ್ದೀನ್, ಲ್ಯಾಂಗ್‌ಫೋರ್ಡ್‌ ರಸ್ತೆಯ ಬೈಡ್‌ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್‌ ಖರೀದಿಸಿದ್ದರು. ಅದೇ ಫ್ಲ್ಯಾಟ್ ಅಡವಿಟ್ಟು ಎಸ್‌ಬಿಐನಲ್ಲಿ (ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ) ಸಾಲ ಪಡೆದಿದ್ದರು. ನಿಗದಿತ ಸಮಯದಲ್ಲಿ ಕಂತು ಪಾವತಿ ಮಾಡುತ್ತಿರಲಿಲ್ಲ. ಇದರ ನಡುವೆಯೇ ಅದೇ ಫ್ಲ್ಯಾಟ್‌ ಅನ್ನು ದೂರುದಾರ ರೋಹನ್ ಹಾಗೂ ಅವರ ಪತ್ನಿ ಹೆಸರಿಗೆ ಭೋಗ್ಯಕ್ಕೆ ನೀಡಿದ್ದರು. ಅವರಿಂದ ಹಂತ ಹಂತವಾಗಿ ₹40 ಲಕ್ಷ ಪಡೆದುಕೊಂಡಿದ್ದರು’ ಎಂದು ತಿಳಿಸಿವೆ.

‘ಭೋಗ್ಯದ ಹಣ ಪಡೆದಿರುವ ಅಲೀಮುದ್ದೀನ್, ನಗರದಿಂದ ಪರಾರಿಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆಯೇ ಎಸ್‌ಬಿಐ ಅಧಿಕಾರಿಗಳು, ಫ್ಲ್ಯಾಟ್‌ ಜಪ್ತಿ ಮಾಡಲು ಹಲವು ಬಾರಿ ನೋಟಿಸ್‌ ನೀಡಿದ್ದರು. ಅದಕ್ಕೆ ಅಲೀಮುದ್ದೀನ್ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ, ಆಸ್ತಿ ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ’ ಎಂದು ಹೇಳಿವೆ.

‘ಆಸ್ತಿ ಜಪ್ತಿ ಮಾಡಲೆಂದು ಬ್ಯಾಂಕ್ ಅಧಿಕಾರಿಗಳು ಫ್ಯಾಟ್‌ ಬಳಿ ಬಂದಿದ್ದಾಗಲೇ ದೂರುದಾರರಿಗೆ ವಿಷಯ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದರೂ ಅಲೀಮುದ್ದೀನ್ ಲಭ್ಯವಾಗಿಲ್ಲ. ಲಕ್ಷಾಂತರ ರೂಪಾಯಿ ಸಾಲ ಬಾಕಿ ಇರುವ ಮಾಹಿತಿಯನ್ನು ಮುಚ್ಚಿಟ್ಟಿದ್ದ ಅಲೀಮುದ್ದೀನ್, ಭೋಗ್ಯದ ಹೆಸರಿನಲ್ಲಿ  ವಂಚಿಸಿರುವುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT