ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧೆ ಹೆಸರಿನಲ್ಲಿ ₹ 3 ಕೋಟಿ ಸಾಲ: ಐವರು ಆರೋಪಿಗಳ ಬಂಧನ

Published 22 ಡಿಸೆಂಬರ್ 2023, 16:18 IST
Last Updated 22 ಡಿಸೆಂಬರ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ವೃದ್ಧೆಯೊಬ್ಬರ ಆಸ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ವೊಂದರಲ್ಲಿ ₹ 3 ಕೋಟಿ ಸಾಲ ಪಡೆದು ವಂಚಿಸಿರುವ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಜೆ.ಪಿ.ನಗರದ ನಿವಾಸಿಯಾಗಿರುವ ವೃದ್ಧೆ, ವಂಚನೆಗೆ ಸಂಬಂಧಪಟ್ಟಂತೆ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅದರನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಲಾಗಿತ್ತು. ಆರೋಪಿಗಳಾದ ಭಾಸ್ಕರ್, ಅಭಿಷೇಕ್ ಗೌಡ, ಮಹೇಶ್, ಅರುಣ್ ಹಾಗೂ ಶಿವಕುಮಾರ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೆನರಾ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರಾಗಿದ್ದ ವೃದ್ಧೆಗೆ ಸೇರಿದ್ದ 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದೆ. ಅದೇ ಮನೆಯಲ್ಲಿ ವೃದ್ಧೆ ವಾಸವಿದ್ದಾರೆ. ಇವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ವಿದೇಶಕ್ಕೆ ಹೋಗಿ ಮಕ್ಕಳ ಜೊತೆ ಇರಲು ತೀರ್ಮಾನಿಸಿದ್ದ ವೃದ್ಧೆ, ಮನೆ ಮಾರಾಟ ಮಾಡಲು ತೀರ್ಮಾನಿಸಿದ್ದರು.’

‘ಪಕ್ಕದ ಮನೆಯ ನಿವಾಸಿ ಮೂಲಕ ರಿಯಲ್ ಎಸ್ಟೇಟ್ ಏಜೆಂಟರನ್ನು ಸಂಪರ್ಕಿಸಿದ್ದ ವೃದ್ಧೆ, ಮನೆಯ ದಾಖಲೆಗಳನ್ನು ನೀಡಿದ್ದರು. ಅದೇ ದಾಖಲೆಗಳನ್ನು ಬಳಸಿಕೊಂಡು ಆರೋಪಿಗಳು, ನಕಲಿ ದಾಖಲೆ ಸೃಷ್ಟಿಸಿದ್ದರು. ಪ್ರತ್ಯೇಕವಾಗಿ ಮೂರು ಬ್ಯಾಂಕ್‌ಗಳಿಗೆ ದಾಖಲೆಗಳನ್ನು ನೀಡಿ ವೃದ್ಧೆ ಹೆಸರಿನಲ್ಲಿ ₹ 3 ಕೋಟಿ ಸಾಲ ಪಡೆದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಬ್ಯಾಂಕ್ ವ್ಯವಸ್ಥಾಪಕಿಗೆ ನೋಟಿಸ್: ‘ಐವರು ಆರೋಪಿಗಳನ್ನು ಬಂಧಿಸಿ, ಅವರ ಬ್ಯಾಂಕ್ ಖಾತೆಗಳ ವಹಿವಾಟು ನಿಷ್ಕ್ರಿಯಗೊಳಿಸಲಾಗಿದೆ. ಸಾಲ ಪಡೆಯಲು ನೆರವಾಗಿದ್ದ ಬ್ಯಾಂಕ್‌ವೊಂದರ ವ್ಯವಸ್ಥಾಪಕಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT