ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀ ಕೋಚಿಂಗ್ ವಿದ್ಯಾ: ಬಡ ಮಕ್ಕಳಿಗೆ ಆಸರೆ, ಹಿರಿಯ ದಂಪತಿಯ ವಿಶಿಷ್ಟ ಕಾರ್ಯ

18 ಸಾವಿರ ಮಕ್ಕಳಿಗೆ ಉಚಿತ ಬೋಧನೆ
Last Updated 3 ಸೆಪ್ಟೆಂಬರ್ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್ ಸಮಯದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸದಾಶಯದಿಂದ ಹಿರಿಯ ದಂಪತಿ ಆರಂಭಿಸಿದ ‘ಫ್ರೀ ಕೋಚಿಂಗ್‌ ವಿದ್ಯಾ’ ಇವತ್ತು 18 ಸಾವಿರ ಮಕ್ಕಳಿಗೆ ನೆರವಾಗುತ್ತಿದೆ.

ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಮೂಲಕ ಆರಂಭವಾದ ಈ ಯೋಜನೆ ಈಗ ದೇಶದಾದ್ಯಂತ ವಿಸ್ತರಿಸಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ನಿವೃತ್ತ ಎಂಜಿನಿಯರ್‌84 ವರ್ಷದ ಬದರೀನಾಥ ವಿಠ್ಠಲ ಮತ್ತು ಅವರ ಪತ್ನಿ 78 ವರ್ಷದ ಇಂದಿರಾ ವಿಠ್ಠಲ ಅವರು, ಕೋವಿಡ್‌ ಸಂದರ್ಭದಲ್ಲಿ ಆರಂಭಿಸಿದ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಕಾರ್ಯಕ್ಕೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಇವರ ಕಾರ್ಯಕ್ಕೆಸ್ವಯಂ ಸೇವಕರ ದಂಡು ಕೈಜೋಡಿಸಿತು. ಕೋವಿಡ್‌ ಕಡಿಮೆಯಾದ ನಂತರವೂ ಈ ಕಾಯಕವನ್ನು ದಂಪತಿ ಮುಂದುವರಿಸಿದ್ದಾರೆ.

‘ಫ್ರೀ ಕೋಚಿಂಗ್‌ ವಿದ್ಯಾ’ ಸ್ಥಾಪಕರಾದ ಬದರೀನಾಥ್‌ ಅವರು ಬಾಂಬೆ ಐಐಟಿಯಲ್ಲಿ ಎಂ.ಟೆಕ್‌ ಪದವಿ ಪಡೆದು, ದೇಶದ ಹಲವೆಡೆ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇಂದಿರಾ ಅವರು ನಿವೃತ್ತ ಶಿಕ್ಷಕಿ ಮತ್ತು ಹೊಸಪೇಟೆಯಲ್ಲಿರುವ ಏಳು ಶಾಲೆಗಳ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

ನಾಲ್ಕನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳವರೆಗೆ ಬದರೀನಾಥ ವಿಠ್ಠಲ ಅವರ ನೇತೃತ್ವದ ತಂಡ ತರಬೇತಿ ನೀಡುತ್ತಿದೆ. ನೀಟ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೂ ತರಬೇತಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ.

ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳ 80ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ 200ಕ್ಕೂ ಹೆಚ್ಚು ಸ್ವಯಂಸೇವಕರು ಇವರ ವಿದ್ಯಾದಾನದ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇವರಲ್ಲಿ ಹಲವರು ಸಾಫ್ಟ್‌ವೇರ್‌
ಎಂಜಿನಿಯರ್‌ಗಳು, ಲೆಕ್ಕಪರಿಶೋಧಕರು ಸೇರಿದ್ದಾರೆ.

ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ಗಳು, ಪ್ರೊಜೆಕ್ಟರ್‌ಗಳು ಮತ್ತು ಸ್ಪೀಕರ್‌ಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ತರಗತಿಗಳನ್ನು ಪ್ರೊಜೆಕ್ಟರ್‌ಗಳ ಮೂಲಕ ನಡೆಸಲಾಗುತ್ತಿದೆ.

‘ನಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಯ ಇಬ್ಬರು ಮಕ್ಕಳಿಗೆ ಪಾಠ ಮಾಡುವ ಮೂಲಕ ಇದನ್ನು ಆರಂಭಿಸಿದ್ದೆವು. ಕೋವಿಡ್‌ ಕಾಣಿಸಿಕೊಂಡ ನಂತರ ಆನ್‌ಲೈನ್‌ ಕೋಚಿಂಗ್ ನೀಡುವುದನ್ನು ಆರಂಭಿಸಲಾಯಿತು. ಹಲವಾರು ಪರೋಪಕಾರಿಗಳು ಕೈಜೋಡಿಸಿದರು. ಉಚಿತವಾಗಿ ಬೋಧನೆ ಮಾಡುವುದಾಗಿ ಸ್ವಯಂ ಪ್ರೇರಿತರಾಗಿ ಹಲವರು ಮುಂದೆ ಬಂದರು. ಇವರುಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಬದರಿನಾಥ ವಿಠ್ಠಲ ದಂಪತಿ ವಿವರಿಸುತ್ತಾರೆ.

‘ಬೋಧನೆಯಲ್ಲೂ ವಿನೂತನ ವಿಧಾನಗಳನ್ನು ಅಳವಡಿಸಿಕೊಳ್ಳಲು ಯತ್ನಿಸುವ ಜತೆಗೆ, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೋಚಿಂಗ್‌ ನೀಡಲು ಮುಂದಾದೆವು. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಆರು ತಿಂಗಳಲ್ಲೇ ಆರು ಸಾವಿರಕ್ಕೆ ಏರಿಕೆಯಾಯಿತು. ಈಗ 18 ಸಾವಿರ ದಾಟಿದೆ. ಒಟ್ಟಾರೆಯಾಗಿ ಈ ಬೆಳವಣಿಗೆ ಯನ್ನು 22 ತಿಂಗಳಲ್ಲಿ ಸಾಧಿಸಲಾಯಿತು’ ಎಂದು ಹೇಳುತ್ತಾರೆ.

‘ಕಳೆದ ಒಂದು ತಿಂಗಳಲ್ಲಿ ಸಿದ್ದಗಂಗಾ ಸೊಸೈಟಿ ನಿರ್ವಹಿಸುತ್ತಿರುವ 57ಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳು ಮತ್ತು ಕಾಲೇಜುಗಳು ‘ಫ್ರೀ ಕೋಚಿಂಗ್‌ ವಿದ್ಯಾ’ ಯೋಜನೆ ಅಡಿಯಲ್ಲಿ ಸೇರ್ಪಡೆಯಾಗಿವೆ. ನಮಗೆ ಕಲಿಯುವ ಉತ್ಸಾಹ ಇರುವ ಬಡ ಮಕ್ಕಳು ಮತ್ತು ಉತ್ತಮ ಶಿಕ್ಷಣ ನೀಡುವ ಸ್ವಯಂ ಸೇವಕರು ಹಾಗೂ ಅಗತ್ಯ ಇರುವವರಿಗೆ ಮೊಬೈಲ್‌ ನೀಡುವ ದಾನಿಗಳು ಬೇಕು‍’ ಎಂದು ಅವರು ಹೇಳುತ್ತಾರೆ.

ಬದರೀನಾಥ ಅವರ ಸಂಪರ್ಕ: 9901841508, 99004 08760, 080–41501976.

*

‘ಪಿಯು ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ತರಗತಿಗಳನ್ನು ಕಳೆದ ಒಂದೂವರೆ ವರ್ಷದಿಂದ ತೆಗೆದುಕೊಳ್ಳುತ್ತಿದ್ದೇನೆ. ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಿಸಿದ್ದು, ಉತ್ತಮ ಫಲಿತಾಂಶ ದೊರೆಯುತ್ತಿದೆ. ಬದರಿನಾಥ ಅವರ ಕಾರ್ಯ ಶ್ಲಾಘನೀಯ’
-ಸತೀಶ್‌, ಸಾಫ್ಟ್‌ವೇರ್ ಎಂಜಿನಿಯರ್‌, ವಿಪ್ರೊ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT