ಕಸ ಆಯುವವರನ್ನೇ ಕಡೆಗಣಿಸಿದರು!

7
ಹೊಸ ಕರಡು ನಿಯಮಾವಳಿಗೆ ತ್ಯಾಜ್ಯ ಸಂಗ್ರಹಕಾರರ ಆಕ್ಷೇಪ

ಕಸ ಆಯುವವರನ್ನೇ ಕಡೆಗಣಿಸಿದರು!

Published:
Updated:
Deccan Herald

ಬೆಂಗಳೂರು: ಪೌರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಿಂದ ತಮ್ಮನ್ನು ಹೊರಗಿಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಕಸ ಆಯುವವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಗರ ಪ್ರದೇಶದ ಘನತ್ಯಾಜ್ಯ ನಿರ್ವಹಣೆಗಾಗಿ ಕಳೆದ ತಿಂಗಳು ಪೌರಾಡಳಿತ ಇಲಾಖೆಯು ಹೊಸ ನಿಯಮಾವಳಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದೆ. ಆಕ್ಷೇಪ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿದೆ. ಈ ನಿಯಮಾವಳಿಯಲ್ಲಿ ತ್ಯಾಜ್ಯ ವಿಲೇವಾರಿ ಜಾಲವನ್ನು ನಿರ್ಧರಿಸುವಾಗ ಬೀದಿ, ಬೀದಿಯಲ್ಲಿ ಅಲೆದು ಕಸ ಆಯುವವರನ್ನು ಮಾತ್ರವಲ್ಲದೆ ಅಸಂಘಟಿತ ಒಣತ್ಯಾಜ್ಯ ಸಂಗ್ರಹಕಾರರನ್ನೂ ಕಡೆಗಣಿಸಲಾಗಿದೆ.

ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ತ್ಯಾಜ್ಯದ ಭಾರವನ್ನು ‘ಹಗುರ’ ಮಾಡಲು ಕಸ ಆಯುವವರ ಪಾತ್ರ ಪ್ರಮುಖವಾಗಿದ್ದು, ಅವರನ್ನು ಕಡೆಗಣಿಸಿದ್ದು ಹೇಗೆ ಎಂಬ ಪ್ರಶ್ನೆಯನ್ನು ಹಸಿರು ದಳ ಸಂಘಟನೆ ಎತ್ತಿದೆ. 

ಘನತ್ಯಾಜ್ಯ ನಿರ್ವಹಣೆಯಲ್ಲಿ ಕಸ ಆಯುವವರನ್ನೂ ಭಾಗೀದಾರರನ್ನಾಗಿ ಮಾಡಿಕೊಂಡು ಅವರಿಗೆ ಗುರುತಿನ ಚೀಟಿ ನೀಡಬೇಕು. ಒಣತ್ಯಾಜ್ಯ ಕೇಂದ್ರಗಳು ಹಾಗೂ ಗೊಬ್ಬರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ಮೂಲಕ ಕಸ ವಿಲೇವಾರಿಯನ್ನು ವಿಕೇಂದ್ರೀಕರಣ ಮಾಡಬೇಕು. ಪೌರಕಾರ್ಮಿಕರ ಸೇವೆ ಅಲಭ್ಯವಿರುವ ಪ್ರದೇಶಗಳಲ್ಲಿ ತಮ್ಮನ್ನೇ ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆಗೆ ಬಳಸಿಕೊಳ್ಳಬೇಕು ಎಂಬುದು ಕಸ ಆಯುವವರ ಮುಖ್ಯ ಬೇಡಿಕೆಗಳಾಗಿವೆ.

‘ಕರಡು ನಿಯಮಾವಳಿ ಪರಿಪೂರ್ಣವಾಗಿಲ್ಲ. ಅದರಲ್ಲಿ ನಮ್ಮಂತಹ ಸ್ವಚ್ಛತಾ ಕಾರ್ಯಕರ್ತರಿಗೆ ಅವಕಾಶವೇ ಇಲ್ಲವಾಗಿದೆ. ಈ ದೋಷವನ್ನು ಪೌರಾಡಳಿತ ಇಲಾಖೆ ಸರಿಪಡಿಸಿಕೊಳ್ಳಬೇಕು. ಹಸಿರು ದಳ ಸಂಘಟನೆ ನೆರವಿನಿಂದ ನಾವು ಈಗಾಗಲೇ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳುತ್ತಾರೆ ಕಸ ಸಂಗ್ರಹದ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕೃಷ್ಣವೇಣಿ.

‘ಪೊಲೀಸರಿಂದ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಕಸ ಆಯುವ ಹಕ್ಕನ್ನು ಕಾನೂನುಬದ್ಧ ಮಾಡಬೇಕು. ಸುರಕ್ಷಾ ಸಾಧನಗಳನ್ನು ಕಸ ಆಯುವವರಿಗೂ ಕೊಡಬೇಕು. ನಗರದ ಸ್ವಚ್ಛತೆಗೆ ಕೊಡುಗೆ ನೀಡುತ್ತಲೇ ಸಾವಿರಾರು ಮಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿರುವ ಈ ವ್ಯವಸ್ಥೆಯನ್ನು ಇನ್ನಷ್ಟು ಸುಸ್ಥಿರಗೊಳಿಸಬೇಕು’ ಎಂದು ಆಗ್ರಹಿಸುತ್ತಾರೆ ಮಹದೇವಮ್ಮ.

ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲದೆ ದಿಯು–ದಮನ್‌ ಕೇಂದ್ರಾಡಳಿತ ಪ್ರದೇಶದಲ್ಲಿ ರೂಪಿಸಲಾದ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿಯಲ್ಲಿ ಕಸ ಆಯುವವರಿಗೆ ಅಗ್ರ ಪ್ರಾಶಸ್ತ್ಯ ನೀಡಲಾಗಿದೆ. ‘ರಾಜ್ಯದ ನಿಯಮಾವಳಿ ಈಗಿನ ಸ್ವರೂಪದಲ್ಲೇ ಅನುಷ್ಠಾನಕ್ಕೆ ಬಂದರೆ ಸ್ವಚ್ಛತಾ ಕಾರ್ಯಕರ್ತರಿಗೆ ದ್ರೋಹ ಬಗೆದಂತಾಗುತ್ತದೆ’ ಎಂದು ಹಸಿರು ದಳ ಸಂಘಟನೆಯ ಮುಖ್ಯಸ್ಥೆ ನಳಿನಿ ಶೇಖರ್‌ ಹೇಳುತ್ತಾರೆ.

ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿದ ‘ನಗರ ಪ್ರದೇಶದ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ’ಯಲ್ಲಿ ಕಸ ಆಯುವವರ ಪಾತ್ರದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರನ್ನು ವ್ಯವಸ್ಥೆಯ ಭಾಗವಾಗಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಕೇಂದ್ರದ ಆದೇಶದ ಪ್ರಕಾರ ಸ್ಥಳೀಯ ಮಟ್ಟದಲ್ಲಿ ‘ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ’ಯನ್ನು ರೂಪಿಸುವುದು ಕಡ್ಡಾಯವಾಗಿದ್ದು, ತ್ಯಾಜ್ಯ ವಿಲೇವಾರಿಗೆ ಕ್ರಿಯಾ ಯೋಜನೆ ಕುರಿತು ಅದರಲ್ಲಿ ವಿವರಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !