ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಡಿದ ಕಸ, ಗುಂಡಿ ರಸ್ತೆಗಳ ‘ಸಹವಾಸ’

ಮೂಲಸೌಕರ್ಯ ಕಾಣದ ಕೆ.ಆರ್‌. ಪುರ ವಿಧಾನಸಭೆ ಕ್ಷೇತ್ರದ ಹಳ್ಳಿಗಳ ಸ್ಥಿತಿ
ಶಿವರಾಜ್ ಮೌರ್ಯ
Published 5 ಫೆಬ್ರುವರಿ 2024, 19:41 IST
Last Updated 5 ಫೆಬ್ರುವರಿ 2024, 19:41 IST
ಅಕ್ಷರ ಗಾತ್ರ

ಕೆ.ಆರ್.ಪುರ: ಎಲ್ಲೆಂದರಲ್ಲಿ ಬಿದ್ದಿರುವ ಕಸ, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು, ಹಳ್ಳ–ದಿಣ್ಣೆಗಳಿಂದ ಕೂಡಿರುವ ರಸ್ತೆ, ದೂಳುಮಯ ರಸ್ತೆಗಳು...

ಈ ಎಲ್ಲ ಸಮಸ್ಯೆಗಳು ಕಾಣಸಿಗುವುದು ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದಲ್ಲಿರುವ ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳಲ್ಲಿ.

2007ರಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಮೇಲೆ ಈ ಹಳ್ಳಿಗಳು ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿವೆ  ಎಂದು ಇಲ್ಲಿನ ನಾಗರಿಕರು ಕನಸು ಕಂಡಿದ್ದರು. ಆದರೆ, ಇಂದಿನವರೆಗೂ ಅದು ನನಸಾಗಿಲ್ಲ.

ರಸ್ತೆ, ಒಳಚರಂಡಿ, ಶಾಲೆಗಳ ಉನ್ನತೀಕರಣ ಮುಂತಾದ ಕೆಲಸಗಳಿಗೆ ಆದ್ಯತೆ ಕೊಡಬೇಕಾದ ಬಿಬಿಎಂಪಿ ಅನುದಾನದ ಕೊರತೆ ಇನ್ನಿತರ ಕಾರಣಗಳಿಗಾಗಿ ಮೂಲ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಕೆ.ಆರ್.ಪುರ ಭಾಗದ ಯೋಜನೆ ಅನುಷ್ಠಾನಗೊಳ್ಳಬೇಕಾದ ಹಳ್ಳಿಗಳಲ್ಲಿ, ಅಲ್ಲಿಲ್ಲಿ ಚರಂಡಿ, ರಸ್ತೆ ನಿರ್ಮಾಣಕ್ಕಾಗಿ ಅಗೆದು ಹಾಗೆಯೇ ಬಿಡಲಾಗಿದೆ. 

ಬಂಜಾರ ಬಡಾವಣೆ, ಕನಕನಗರ, ಕಲ್ಕೆರೆ ಗ್ರಾಮಗಳ ರಸ್ತೆಗಳು ದೂಳುಮಯವಾಗಿವೆ. ರಸ್ತೆ ನಿರ್ಮಾಣ ಕಾಮಗಾರಿ ನಿರಂತರವಾಗಿ ಸಾಗುತ್ತಿದೆ ಎಂದು ನಂಬಿಸಲೆಂಬಂತೆ ಆಗಾಗ್ಗೆ ಒಂದಷ್ಟು ಮಣ್ಣು ತೆಗೆದು ಹಾಕಲಾಗುತ್ತದೆ. ಅಭಿವೃದ್ಧಿ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಅನುದಾನದ ಕೊರತೆ ಇದೆ, ನಾವು ಏನು ಮಾಡಲು ಸಾಧ್ಯ?’ ಎನ್ನುವ ಹಾರಿಕೆಯ ಉತ್ತರ ನೀಡುತ್ತಾರೆ.

‘ವರ್ಷಗಳಿಂದ ಅಭಿವೃದ್ಧಿ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ. ಈ ಭಾಗದಲ್ಲಿ ಅಪಾರ್ಟ್‌ಮೆಂಟ್, ಶಾಲೆಗಳು, ಬಡಾವಣೆಗಳು ಹೆಚ್ಚಿವೆ. ಹಾಳಾಗಿರುವ ರಸ್ತೆಗಳಿಗೆ ತೇಪೆ ಹಾಕುತ್ತಾರೆ. ಇಂಥ ರಸ್ತೆಗಳು ಮೂರ್ನಾಲ್ಕು ತಿಂಗಳು ಮಾತ್ರ ಚೆನ್ನಾಗಿರುತ್ತವೆ, ಅಷ್ಟೇ’ ಎಂದು ಬಂಜಾರ ಬಡಾವಣೆ ನಿವಾಸಿ ನಾಗೇಶ್ ದೂರಿದರು.

‘ಹೊರಮಾವು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ. ಹೊರಮಾವಿನ ಕೆಲ ಭಾಗಗಳಲ್ಲಿ ರಸ್ತೆ, ಚರಂಡಿಯ ಕಾಮಗಾರಿಗಳೇ ಆರಂಭವಾಗಿಲ್ಲ’ ಎಂದು ಹೊರಮಾವು ನಿವಾಸಿ ಜ್ಯೋತಿ ಹೇಳಿದರು.

ಕನಕನಗರದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿರುವುದು
ಕನಕನಗರದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿರುವುದು

11 ಹಳ್ಳಿಗಳು ಕೆ.ಆರ್.ಪುರ

ಕ್ಷೇತ್ರದ ಅಮಾನಿ ಬೈರತಿ ಖಾನೆ ಚಳ್ಳಕೆರೆ ಗೆದ್ದಲಹಳ್ಳಿ ಹೊರಮಾವು ಅಗರ ಕೊತ್ತನೂರು ನಾರಾಯಣಪುರ ಕ್ಯಾಲಸನಹಳ್ಳಿ ನಗರೇಶ್ವರ ನಾಗೇನಹಳ್ಳಿ ಕೆ.ಚನ್ನಸಂದ್ರ ಕಲ್ಕೆರೆ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾದ ಗ್ರಾಮಗಳು. ಈ ಗ್ರಾಮಗಳಲ್ಲಿ ಮುಖ್ಯ ರಸ್ತೆಗಳೂ ಸೇರಿ ಉಪ ರಸ್ತೆಗಳು ಅಲ್ಲಲ್ಲಿ ತಗ್ಗು–ದಿಣ್ಣೆಗಳಿಂದ ಕೂಡಿದ್ದು ದೂಳು ಆವರಿಸಿಕೊಂಡಿದೆ. ಈ 11 ಹಳ್ಳಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಬಿಬಿಎಂಪಿ ಈಗಾಗಲೇ ₹400 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ. ಆದರೆ ಹಳ್ಳಿಗಳಲ್ಲಿ ಈ ಮಟ್ಟಿಗೆ ‌ಕಾಮಗಾರಿಗಳಾಗಿರುವ ಕುರುಹು ಕಾಣುತ್ತಿಲ್ಲ.

₹404.57 ಕೋಟಿ ಕೆ.ಆರ್‌. ಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2015ರಿಂದ 2023ರವರೆಗೆ ರಸ್ತೆ ಚರಂಡಿ ನಿರ್ಮಾಣಕ್ಕೆ ಆಗಿರುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT