ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಗಾತ್ರ ಕಂಡು ದಂಗಾದ ಮಂದಿ

Last Updated 24 ಅಕ್ಟೋಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚೂ ಕಡಿಮೆ ಅರ್ಧ ಟನ್‌ ತೂಗುವ ಹಂದಿಗಳವು. ದಪ್ಪಚರ್ಮದ ಹಂದಿಗಳನ್ನು ಟೆಂಪೊ ದಿಂದ ಇಳಿಸಿ ಪ್ರದರ್ಶನ ಮಳಿಗೆವರೆಗೆ ಕರೆದೊಯ್ದ ಪರಿ ಕೃಷಿಮೇಳದೊಳಗೊಂದು ಉಪಜಾತ್ರೆಯನ್ನೇ ಸೃಷ್ಟಿಸಿತು.

ಟೆಂಪೊದಿಂದ ಕೆಳಗಿಳಿಯಲು ಒಪ್ಪದ ಹಂದಿಗಳನ್ನು ಪ್ರದರ್ಶನ ಮಳಿಗೆಗಳ ಬಳಿ ತರಲು ಅದರ ಮಾಲೀಕರು ಹರಸಾಹಸಪಡಬೇಕಾಯಿತು. ಎಫ್‌–1 ತಳಿಯ ಹಂದಿಯನ್ನು ಮಾಲೀಕ ನಾಗೇಶ್‌ ಹೇಗೋ ಟೆಂಪೊದಿಂದ ಇಳಿಸುವಲ್ಲಿ ಯಶಸ್ವಿಯಾದರು. ಆದರೆ, ಅದು ಗುಟುರು ಹಾಕುತ್ತಾ ಬೇಕಾಬಿಟ್ಟಿ ನುಗ್ಗಿತು. ಮೂಗುದಾರವನ್ನು ನಾಲ್ಕೈದು ಮಂದಿ ಹಿಡಿದೆಳೆದರೂ ನಿಯಂತ್ರಿಸಲು ಕಷ್ಟ ಪಡಬೇಕಾಯಿತು. ಬಳಿಕ ಅದರ ಮುಖಕ್ಕೆ ಬಕೆಟ್‌ ಅನ್ನು ಬೋರಲಾಗಿ ಮುಚ್ಚಿ ದೂಡಿಕೊಂಡು ಹೋದರು. ಇನ್ನೊಂದು ಹಂದಿಯನ್ನು ಕರೆದೊಯ್ಯಲು ಅದರ ಮರಿಯನ್ನು ತೊರಿಸಬೇಕಾಯಿತು. ಈ ಕಸರತ್ತು ನೋಡಲು ಜನ ಮುಗಿಬಿದ್ದರು.

ಡ್ಯೂರೆಕ್ ತಳಿಯ ಹಂದಿ ಟೆಂಪೊದಿಂದ ಬಳಿಕ ನೆಲದಲ್ಲಿ ಬಿದ್ದುಕೊಂಡಿತು. ಜಪ್ಪಯ್ಯ ಎಂದರೂ ಮೇಲೇಳಲು ಕೇಳಲಿಲ್ಲ.

‘ಇಲ್ಲಿರುವ ಡ್ಯೂರೆಕ್‌ ತಳಿಯ ಹಂದಿ 485 ಕೆ.ಜಿ ಹಾಗೂ ಯಾರ್ಕ್‌ಶೈರ್‌ ತಳಿಯ ಹಂದಿ 465 ಕೆ.ಜಿ. ತೂಗುತ್ತದೆ. ಯಾರ್ಕ್‌ಶೈರ್‌ ಹಾಗೂ ಲ್ಯಾಂಡ್ರೇಸ್‌ ತಳಿಯ ಹಂದಿಗಳು ತಲಾ 140 ಕೆ.ಜಿ ತೂಗುತ್ತವೆ. ಪ್ರತಿ ಕೆ.ಜಿ. ಮಾಂಸಕ್ಕೆ ₹ 85ರಿಂದ ₹ 90 ಬೆಲೆ ಇದೆ’ ಎಂದು ಸರ್ಜಾಪುರದ ಗೋಪಸಂದ್ರದ ಹಂದಿ ಫಾರ್ಮ್‌ನ ಪುಷ್ಪಾ ನಾಗೇಶ್‌ ತಿಳಿಸಿದರು.

‘ನಾವು ನಾಲ್ಕು ತಿಂಗಳ ಮರಿಗಳನ್ನು (20 ಕೆ.ಜಿ. ತೂಗುತ್ತವೆ) ₹ 5ಸಾವಿರಕ್ಕೆ ಮಾರಾಟ ಮಾಡುತ್ತೇವೆ. ಅವುಗಳಿಗೆ ಎಲ್ಲ ರೀತಿಯ ಲಸಿಕೆಗಳನ್ನು ನಾವೇ ಹಾಕಿಸುತ್ತೇವೆ’ ಎಂದರು.

‘ಹಂದಿಗಳಿಗೆ ಸಿದ್ಧ ಆಹಾರಗಳು ಮಾರುಕಟ್ಟೆಯಲ್ಲಿ ಲಭ್ಯ. ಆದರೆ, ಅದನ್ನು ಹಾಕಿ ಬೆಳೆಸಿದರ ನಮಗೆ ಗೀಟುವುದಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ಹಂದಿಗಳಿಗೆ ಆಹಾರ ಸಿಗುತ್ತಿತ್ತು. ಇತ್ತೀಚೆಗೆ ಅವರು ಅದನ್ನು ಬಯೊಗ್ಯಾಸ್‌ ಮಾಡಲು ಬಳಸುತ್ತಿದ್ದಾರೆ. ಹಂದಿಗಳ ಆಹಾರಕ್ಕೆ ಹೋಟೆಲ್‌ಗಳಲ್ಲಿ ಮಿಕ್ಕುಳಿದ ಆಹಾರವನ್ನು ನೆಚ್ಚಿಕೊಳ್ಳಬೇಕಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT