ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದಲ್ಲಿ ಮಾತ್ರ ದೇವರಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 9 ಜನವರಿ 2024, 15:47 IST
Last Updated 9 ಜನವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವಸ್ಥಾನದಲ್ಲಿ ಮಾತ್ರ ದೇವರು ಇದ್ದಾನೆ ಎನ್ನುವುದು ಸರಿಯಲ್ಲ. ಎಲ್ಲಾ ಕಡೆಯೂ ದೇವರಿದ್ದಾನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಕರ್ನಾಟಕ ರಾಜ್ಯ ಸವಿತಾ ಸಮಾಜ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಂ.ಎಸ್. ಮುತ್ತುರಾಜ್ ಅವರ ‘ಮಂಗಳವಾದ್ಯ’ ಪುಸ್ತಕ ಬಿಡುಗಡೆಮಾಡಿ, ಮಾತನಾಡಿದರು. 

‘ದೇವರು ಇದ್ದಾನೆ. ದುಡ್ಡು ಇರುವವರು ಆತನಿಗೆ ದೇವಸ್ಥಾನ ಮಾಡುತ್ತಾರೆ. ಆದ್ದರಿಂದಲೇ ಬಸವಾದಿ ಶರಣರು ‘ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ...’ ಎಂದು ಹೇಳಿದ್ದಾರೆ. ನಾರಾಯಣ ಗುರುಗಳು ‘ಒಂದೇ ಜಾತಿ-ಒಂದೇ ಮತ-ಒಂದೇ ದೇವರು’ ಎಂದಿದ್ದರು. ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮುಸ್ಲಿಂರು, ದಲಿತರು, ಶೂದ್ರರು ಹಾಗೂ ಶ್ರಮಿಕ‌ ವರ್ಗದವರನ್ನು ದ್ವೇಷಿಸುವುದು ಅತ್ಯಂತ ಅಮಾನವೀಯವಾದ ಕೆಟ್ಟ ನಡವಳಿಕೆ’ ಎಂದರು.

‘ಮುತ್ತುರಾಜ್ ಅವರು ನನಗೂ ಒಮ್ಮೆ ಕ್ಷೌರ ಮಾಡಿದ್ದಾರೆ. ಅವರು ತಾನು ಕ್ಷೌರಿಕ ಎಂದು ಹೆಮ್ಮೆಯಿಂದ ಹೇಳುತ್ತಾರೆ. ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಿದ್ದಾರೆ. ಸಮಾಜದಲ್ಲಿ ನಾವು ಯಾವುದೇ ವೃತ್ತಿ ಮಾಡಿದರೂ ಅದು ಕಾಯಕ. ಯಾವುದೇ ಕಾಯಕಕ್ಕೆ ಮೇಲು–ಕೀಳೆಂಬ ಭೇದ ಭಾವವಿಲ್ಲ. ಪ್ರತಿಯೊಬ್ಬರೂ ಕಾಯಕ ಮಾಡಬೇಕು’ ಎಂದು ಹೇಳಿದರು. 

ರಾಷ್ಟ್ರಪತಿಗೆ ಅವಕಾಶ ನಿರಾಕರಣೆ: ಕವಿ ಎಲ್‌.ಎನ್‌. ಮುಕುಂದರಾಜ್, ‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದಿವಾಸಿ ಜನಾಂಗಕ್ಕೆ ಸೇರಿದ್ದಾರೆ, ವಿಧವೆ ಎಂಬ ಕಾರಣಕ್ಕೆ ನೂತನ ಸಂಸತ್ ಭವನವನ್ನು ಅವರಿಂದ ಉದ್ಘಾಟಿಸಲಿಲ್ಲ. ಈಗ ರಾಮ ಮಂದಿರವನ್ನು ಅವರಿಂದ ಉದ್ಘಾಟಿಸುವುದಿಲ್ಲ. ನಮ್ಮ ಮನಸ್ಸಿನ ಒಳಗೆ ಜಾತಿಯತೆ ಇದೆ. ನಾವು ಅಕ್ಷತೆಯನ್ನು ತಲೆಯ ಮೇಲೆ ಹಾಕಿಕೊಂಡು ‘ಜೈ ಶ್ರೀರಾಮ್’ ಎಂದು ಕುಳಿತುಕೊಂಡಿದ್ದೇವೆ. ನಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಧಿಕ್ಕರಿಸುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ದೇಶವನ್ನು ಸರಿಯಾಗಿ ಕಟ್ಟಿದವರು ಕೆಳಜಾತಿಯವರು. ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾಗಿದ್ದಾರೆ. ಆದರೆ, ಆ ಜಾತಿಯವರಿಗೆ ರಾಮಾಯಣ ಓದಲು ಅವಕಾಶ ಇರಲಿಲ್ಲ. ವ್ಯಸ್ತ ಜನಾಂಗಕ್ಕೆ ಸೇರಿದ ವ್ಯಾಸ ಅವರು ಮಹಾಭಾರತ ಬರೆದರು. ಕುರುಬ ಜನಾಂಗಕ್ಕೆ ಸೇರಿದ ಕಾಳಿದಾಸ ಶ್ರೇಷ್ಠ ಕವಿಯಾದರು. ದಲಿತ ಜನಾಂಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಸಂವಿಧಾನ ಬರೆದರು. ಮೇಲ್ಜಾತಿಗೆ ಸೇರಿದವರು ಸಂವಿಧಾನ ರಚಿಸಿದ್ದರೆ ಅದು ಮನುಧರ್ಮ ಶಾಸ್ತ್ರದಂತೆ ಇರುತ್ತಿತ್ತು’ ಎಂದು ಹೇಳಿದರು.

‘ಜಾತಿ ಗಣತಿ ವರದಿಗೆ ಕಾಲಾವಕಾಶ’

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ವೇಳೆ ಸಭಿಕರೊಬ್ಬರು ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿ ಬಿಡುಗಡೆಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ‘ಜಾತಿ ಗಣತಿ ವರದಿ ಸಲ್ಲಿಕೆಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಅವರು ವರದಿ ಸಲ್ಲಿಸಿದ ಬಳಿಕ ಸ್ವೀಕಾರ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು. 

ಪುಸ್ತಕ ಪರಿಚಯ

ಪುಸ್ತಕ: ‘ಮಂಗಳವಾದ್ಯ’

ಪುಟಗಳು: 232

ಬೆಲೆ: ₹ 250

ಲೇಖಕ ಹಾಗೂ ಪ್ರಕಾಶಕರು: ಎಂ.ಎಸ್. ಮುತ್ತುರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT