ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಪಲ್ಸರ್ ಬೈಕ್ ಪತ್ತೆ

7

ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಪಲ್ಸರ್ ಬೈಕ್ ಪತ್ತೆ

Published:
Updated:

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಆರೋಪಿಗಳು ಬಳಸಿದ್ದರು ಎನ್ನಲಾದ ಪಲ್ಸರ್‌ ಬೈಕ್‌ ಮಹಾರಾಷ್ಟ್ರದಲ್ಲಿ ಸೋಮವಾರ ಪತ್ತೆ ಆಗಿದೆ.

ವಿಚಾರವಾದಿ ನರೇಂದ್ರ ದಾಂಭೋಲ್ಕರ್‌ ಹತ್ಯೆ ಪ್ರಕರಣ ಸಂಬಂಧ ಎಟಿಎಸ್ ಅಧಿಕಾರಿಗಳು ಬಂಧಿಸಿರುವ ಶರದ್ ಕಳಾಸ್ಕರ್, ವಿಚಾರಣೆ ವೇಳೆ ಬೈಕ್‌ ಬಗ್ಗೆ ಮಾಹಿತಿ ನೀಡಿದ್ದಾನೆ. ಅದರ ಆಧಾರದಲ್ಲೇ ಅಧಿಕಾರಿಗಳು, ಬೈಕ್‌ ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಜತೆಗೆ, ಬೈಕ್ ಸಿಕ್ಕಿರುವ ಬಗ್ಗೆ ಅಲ್ಲಿಯ ಅಧಿಕಾರಿಗಳು, ಕರ್ನಾಟಕದ ಎಸ್‌ಐಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್‌ಐಟಿ ಒಂದು ತಂಡವು ಮಂಗಳವಾರ ಮಹಾರಾಷ್ಟ್ರಕ್ಕೆ ಹೋಗಿ ಬೈಕ್‌ ಪರಿಶೀಲನೆ ನಡೆಸಲಿದೆ.

‘ನರೇಂದ್ರ ದಾಂಭೋಲ್ಕರ್‌ ಹತ್ಯೆಗೆ ಬಳಸಿದ್ದ ಬೈಕ್‌ನ್ನೇ ಆರೋಪಿಗಳು, ಗೌರಿ ಹತ್ಯೆಗೂ ಬಳಸಿದ್ದಾರೆ ಎಂಬ ಮಾಹಿತಿ ಸೋಮವಾರ ಬೆಳಿಗ್ಗೆ ಗೊತ್ತಾಗಿದೆ. ನಮ್ಮ ತಂಡವು ಮಹಾರಾಷ್ಟ್ರಕ್ಕೆ ಹೋದ ಬಳಿಕವೇ ಬೈಕ್ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 

‘ಗೌರಿಯವರ ಮನೆ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಅನುಮಾನಾಸ್ಪದವಾಗಿ ಸಂಚರಿಸಿದ್ದ ಬೈಕೊಂದು ಸೆರೆಯಾಗಿತ್ತು. ಅದರ ಮಾಹಿತಿಯನ್ನು ಮಹಾರಾಷ್ಟ್ರದ ಪೊಲೀಸರ ಜೊತೆ ಹಂಚಿಕೊಂಡಿದ್ದೆವು. ಅದರಿಂದಲೇ ಅವರು ಬೈಕ್ ಗುರುತಿಸಿದ್ದಾರರೆ’ ಎಂದಿವೆ.

ಕಲಬುರ್ಗಿ ಹತ್ಯೆ: ಜೈಲಿನಲ್ಲೇ ವಿಚಾರಣೆ 
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸಿಐಡಿ ಪೊಲೀಸರು ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಸೋಮವಾರ ವಿಚಾರಣೆಗೆ ಒಳಪಡಿಸಿದರು.

ಬೆಳಿಗ್ಗೆ 12 ಗಂಟೆಗೆ ಜೈಲಿಗೆ ಹೋಗಿದ್ದ ಸಿಐಡಿ ಡಿವೈಎಸ್ಪಿ ನೇತೃತ್ವದ ತಂಡ, ಆರೋಪಿಗಳನ್ನು ಒಬ್ಬೊಬ್ಬರನ್ನಾಗಿ ಪ್ರತ್ಯೇಕ ಕೊಠಡಿಗೆ ಕರೆಸಿ ವಿಚಾರಣೆ ನಡೆಸಿತು. ಸಂಜೆ 4 ಗಂಟೆಗೆ ವಿಚಾರಣೆ ಮುಗಿಸಿ ತಂಡವು ಹೊರಗೆ ಬಂತು.

‘ವಿಜಯಪುರದ ಪರಶುರಾಮ ವಾಘ್ಮೋರೆಯನ್ನೇ ಮೊದಲಿಗೆ ವಿಚಾರಣೆ ನಡೆಸಲಾಗಿದೆ. ಆದರೆ, ಆತನಿಂದ ಯಾವ ಮಾಹಿತಿ ಪಡೆಯಲಾಯಿತು ಎಂಬುದು ಗೊತ್ತಾಗಿಲ್ಲ’ ಎಂದು ಜೈಲಿನ ಮೂಲಗಳು ತಿಳಿಸಿವೆ.

ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಐಡಿ ಅಧಿಕಾರಿಯೊಬ್ಬರು, ‘ವಿಚಾರಣೆ ಆರಂಭಿಸಿದ್ದೇವೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಎಲ್ಲ ವಿಷಯವನ್ನು ಬಹಿರಂಗಪಡಿಸಲಾಗದು’ ಎಂದರು.

ಎಸ್‌ಐಟಿ ಪೊಲೀಸರು ಬಂಧಿಸಿರುವ ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್ ದೇಗ್ವೇಕರ್‌, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್‌ ಬದ್ದಿ, ವಿಜಯಪುರದ ಪರಶುರಾಮ್ ವಾಘ್ಮೋರೆ, ಮನೋಹರ್ ಯಡವೆ, ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌, ಸಂಪಾಜೆಯ ಮೋಹನ್ ನಾಯಕ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಂಶೋಧಕ ಧಾರವಾಡದ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಲ್ಲೂ ಆ ಆರೋಪಿಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು, ಸಿಐಡಿಯ ಉನ್ನತ ಅಧಿಕಾರಿಗಳಿಗೆ ವರದಿ ನೀಡಿದ್ದರು. ಹೀಗಾಗಿಯೇ ನ್ಯಾಯಾಲಯದ ಅನುಮತಿ ಪಡೆದಿರುವ ಸಿಐಡಿ ಪೊಲೀಸರು, ಆಗಸ್ಟ್ 31ರವರೆಗೆ ಜೈಲಿನಲ್ಲೇ ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !