ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ: ಕೈ ಸೇರದ ಪರಿಹಾರ

Last Updated 30 ನವೆಂಬರ್ 2019, 4:35 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಿಂದ ಕಣ್ಣು ಕಳೆದುಕೊಂಡವರಿಗೆ ಸರ್ಕಾರ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದರೂ ಈವರೆಗೂ ಹಣ ಫಲಾನುಭವಿಗಳ ಕೈ ಸೇರಿಲ್ಲ.

ಜು.9ರಂದು ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ 24 ಮಂದಿಯಲ್ಲಿ ಬಹುತೇಕರು ಔಷಧದ ವ್ಯತಿರಿಕ್ತ ಪರಿಣಾಮದಿಂದ ದೃಷ್ಟಿ ಕಳೆದುಕೊಂಡಿದ್ದರು. ಔಷಧದಲ್ಲಿ ಸೂಡೋಮೋನಾಸ್‌ ವೈರಾಣು ಇದ್ದುದೇ ಇದಕ್ಕೆ ಕಾರಣ ಎಂಬುದು ಪ್ರಯೋಗಾಲಯಗಳ ವರದಿಯಿಂದ ಸಾಬೀತಾಗಿತ್ತು.ಕಣ್ಣು
ಕಳೆದುಕೊಂಡವರು ನ.1ರಂದು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ, ಪರಿಹಾರಕ್ಕೆ ಒತ್ತಾಯಿಸಿದ್ದರು. ನ.4ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಪರಿಹಾರ ಘೋಷಿಸಿತ್ತು.

ಆಸ್ಪತ್ರೆಯ ಅಧಿಕಾರಿಗಳು ಪರಿಹಾರಕ್ಕೆ 10 ಮಂದಿಯನ್ನು ಗುರುತಿಸಿ, 6 ಮಂದಿಗೆ ಪತ್ರವನ್ನೂ ನೀಡಿದ್ದರು. ಈ ಬಗ್ಗೆ ಕಣ್ಣು ಕಳೆದುಕೊಂಡವರನ್ನು ವಿಚಾರಿಸಿದಾಗ ‘ಬ್ಯಾಂಕಿನ ದಾಖಲಾತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಆಸ್ಪತ್ರೆಗೆ ನೀಡಲಾಗಿದೆ. ಆದರೆ, ಈವರೆಗೂ ಪರಿಹಾರದ ಹಣ ಕೈಸೇರಿಲ್ಲ. ಇನ್ನೂ ಎಷ್ಟು ದಿನ ಕಾಯಬೇಕು ಎನ್ನುವುದು ಕೂಡ ತಿಳಿಯದಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಮೊದಲು 10 ಮಂದಿಯನ್ನು ಗುರುತಿಸಿ ಪರಿಹಾರ ಪತ್ರ ನೀಡಲಾಗಿದೆ. ಬಳಿಕ ಇನ್ನೂ 4 ಜನರನ್ನು ಗುರುತಿಸಲಾಗಿದೆ’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.

ದಾಖಲಾತಿ ನೀಡಿದ್ದೇವೆ:‘ಮೂರ್ನಾಲ್ಕು ಸಲ ಆಸ್ಪತ್ರೆಗೆ ಹೋದರೂ ಹಣ ಕೈ ಸೇರಿಲ್ಲ. ಬಲಗಣ್ಣು ಪೂರ್ತಿ ಹೋಗಿದೆ. ಇನ್ನೊಂದು ಕಣ್ಣಿನಲ್ಲಿಯೂ ಪೊರೆ ಕಾಣಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ’ ಎಂದು ಕನಕಪುರದ ಚನ್ನಬಸಮ್ಮ ತಿಳಿಸಿದರು.

‘ಎಡಗಣ್ಣು ಸಂಪೂರ್ಣ ಹೋಗಿದೆ. ಪರಿಹಾರ ಸಂಬಂಧ ಅಗತ್ಯ ದಾಖಲಾತಿಗಳನ್ನು ನೀಡಲಾಗಿದೆ. ಆದರೂ
ಹಣ ಬಂದಿಲ್ಲ’ ಎಂದು ಮಂಡ್ಯದ ಶಿವಬಸವಯ್ಯ ಬೇಸರ ವ್ಯಕ್ತಪಡಿಸಿದರು.

ದೃಷ್ಟಿ ಕಳೆದುಕೊಂಡವರಲ್ಲಿ 57 ವರ್ಷದ ಸುಂದರ್ ಎಂಬುವವರು ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದಾರೆ. ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ.ಆಸ್ಪತ್ರೆ ವಿರುದ್ಧ ಜು.10ಕ್ಕೆ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT