ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಾಮುಚ್ಚಾಲೆ ನೆಪ: ಬಾಲಕನ ಚಿನ್ನದ ಸರ ಕಳವು

Last Updated 23 ಮೇ 2022, 18:23 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣಾ ಮುಚ್ಚಾಲೆ ಆಟದ ನೆಪದಲ್ಲಿ ಬಾಲಕನೊಬ್ಬನ ಗಮನ ಬೇರೆಡೆ ಸೆಳೆದು ಚಿನ್ನದ ಸರವನ್ನು ಕದ್ದೊಯ್ಯಲಾಗಿದ್ದು, ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದಾಸನಪುರ‌ದ ಚಿಕ್ಕವೀರಯ್ಯಪಾಳ್ಯ ನಿವಾಸಿಯೊಬ್ಬರು ಚಿನ್ನದ ಸರ ಕಳ್ಳತನ ಬಗ್ಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ, ಕುಟುಂಬ ಸಮೇತ ಸಂಬಂಧಿಕರ ಮದುವೆಗೆಂದು ಮೇ 20ರಂದು ಮಾಗಡಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದಕ್ಕೆ ಬಂದಿದ್ದರು. ಅವರ ಮಗ, ಕಲ್ಯಾಣ ಮಂಟಪದ ಮುಂಭಾಗದಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದ.’

‘ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಇಬ್ಬರು ಅಪರಿಚಿತರು, ಬಾಲಕನನ್ನು ಮಾತನಾಡಿಸಿದ್ದರು. ಕಣ್ಣಾ ಮುಚ್ಚಾಲೆ ಆಡೋಣವೆಂದು ಹೇಳಿ ಬಾಲಕನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದಿದ್ದರು. ಬಾಲಕನಿಗೆ ಗೊತ್ತಾಗದಂತೆ, ಚಿನ್ನದ ಸರ ಕಿತ್ತುಕೊಂಡಿದ್ದರು. ನಂತರ, ಬಾಲಕನನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಕೆಲ ಹೊತ್ತಿನ ನಂತರ ದೂರುದಾರ, ಬಾಲಕನ ಕೊರಳು ನೋಡಿದ್ದರು. ಆದರೆ, ಚಿನ್ನದ ಸರ ಇರಲಿಲ್ಲ. ಬಾಲಕನನ್ನು ವಿಚಾರಿಸಿದಾಗ, ಯಾರೋ ಇಬ್ಬರು ಬಂದಿದ್ದರೆಂದು ಹೇಳಿದ್ದ. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ. ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT