ಮಂಗಳವಾರ, ಜೂನ್ 22, 2021
28 °C

ಜಾರಕಿಹೊಳಿ ಸೋದರರಿಗೆ ಬಿಜೆಪಿ ನಂಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆ ವಿಷಯದಲ್ಲಿ ಸ್ವಪಕ್ಷದ ಹಿರಿಯ ನಾಯಕರ ನಡೆಯಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಮತ್ತು ಅವರ ಸಹೋದರ ಹಾಗೂ ಸಚಿವ ರಮೇಶ್‌ ಜಾರಕಿಹೊಳಿ ಜೊತೆ ಬಿಜೆಪಿ ಹಿರಿಯ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಜಾರಕಿಹೊಳಿ ಸಹೋದರರ ಜತೆಗೆ 10ರಿಂದ 13 ಕಾಂಗ್ರೆಸ್‌ ಶಾಸಕರು ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದು, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಪತನಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ವದಂತಿ ಭಾನುವಾರವೂ ದಟ್ಟವಾಗಿ ಹರಡಿತ್ತು.

ಒಂದು ವೇಳೆ ಇಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿದರೆ, ಜೆಡಿಎಸ್‌– ಕಾಂಗ್ರೆಸ್‌ ದೋಸ್ತಿ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ. ಇದರಿಂದ ಬಿಜೆಪಿಗೆ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂಬುದು ಬಿಜೆಪಿಯ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರ ಉರುಳಿಸಿದರೆ ಪ್ರತಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು ಕನಿಷ್ಠ ಒಂದು ವರ್ಷದ ಅವಧಿಗೆ ಮುಖ್ಯಮಂತ್ರಿ ಮಾಡಬೇಕು ಎಂದು ಬಿಜೆಪಿ ನಾಯಕರ ಮುಂದೆ ರಮೇಶ್‌ ಜಾರಕಿಹೊಳಿ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದೂ ಹೇಳಲಾಗಿದೆ. ಈ ನಿಟ್ಟಿನಲ್ಲಿ ಅವರು ಕಮಲ ಪಕ್ಷದ ಹಿರಿಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾತೂ ಇದೆ. ಆದರೆ, ಇದನ್ನು ಬಿಜೆಪಿ ಮೂಲಗಳು ನಿರಾಕರಿಸಿವೆ.

‘ಕಾಂಗ್ರೆಸ್‌ನ ಕೆಲವು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಈ ವಿಷಯವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ನಿಭಾಯಿಸುತ್ತಿದ್ದಾರೆ. ಈಗಲ್ಲದಿದ್ದರೂ ಲೋಕಸಭೆ ಚುನಾವಣೆ ವೇಳೆಗೆ ಸಮ್ಮಿಶ್ರ ಸರ್ಕಾರ ಉರುಳುವುದು ಖಚಿತ’ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಪಕ್ಷದಲ್ಲಿ ಕೆಲವರಿಗೆ ಬಿಟ್ಟರೆ ಅನೇಕರಿಗೆ ಈ ಸರ್ಕಾರದ ಭಾಗವಾಗಿರಲು ಬಯಕೆ ಇಲ್ಲ. ಇಷ್ಟ ಇಲ್ಲದ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದೆ. ಆದರೆ, ವ್ಯವಹಾರ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಆದರೆ, ಲೋಕಸಭೆ ಚುನಾವಣೆಗೆ ಮೊದಲೇ ಮೈತ್ರಿ ಸರ್ಕಾರ ಪತನವಾದರೂ ಅಚ್ಚರಿ ಪಡಬೇಕಾಗಿಲ್ಲ’ ಇಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು.

‘ಜೆಡಿಎಸ್‌ ಜತೆ ಮೈತ್ರಿ ಮುಂದುವರಿದರೆ ಪಕ್ಷಕ್ಕೆ ಹಾನಿಯಾಗುತ್ತದೆಯೇ ಹೊರತು ಲಾಭವಾಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ನಷ್ಟ ಅನುಭವಿಸಲಿದೆ. ರಾಷ್ಟ್ರೀಯ ಮಟ್ಟದ ನಾಯಕರಿಗೆ ಇದು ಅರ್ಥವಾಗುತ್ತಿಲ್ಲ’ ಎಂದೂ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು