ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ‘ಕಳವು’ ತಡೆಗೆ ನಿವೃತ್ತ ಸೈನಿಕರ ನೇಮಕ

ರೈತರಿಂದ ಕೆ.ಸಿ.ವ್ಯಾಲಿ ನೀರು ಅಕ್ರಮ ಬಳಕೆ * ವಿಧಾನಸಭೆಯಲ್ಲಿ ಶಾಸಕರ ಆಕ್ರೋಶ
Last Updated 17 ಮಾರ್ಚ್ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಸಿ.ವ್ಯಾಲಿ ನೀರಿಗೆ ‘ಕನ್ನ’ ಹಾಕುವ ರೈತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮವಾಗಿ ನೀರು ಬಳಸುವುದನ್ನು ತಡೆಯಲು ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಕೆ.ಆರ್‌.ರಮೇಶ್ ಕುಮಾರ್‌, ಕೃಷ್ಣಬೈರೇಗೌಡ ಮುಂತಾದವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ‘ಕೆಲವು ರೈತರು ಪಂಪ್‌ ಮತ್ತು ಪೈಪ್‌ಗಳನ್ನು ಹಾಕಿ ಅಕ್ರಮವಾಗಿ ನೀರು ಕದಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ರೈತರು ಎಂಬ ಕಾರಣಕ್ಕೆ ಸುಮ್ಮನಿದ್ದೆವು’ ಎಂದರು.

ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ, ಕೆ.ಸಿ.ವ್ಯಾಲಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ನೀರು ಒಯ್ಯಲಾಗುತ್ತಿದೆ. ಆ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣದ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದನ್ನು ಕುಡಿಯುವ ಅಥವಾ ಕೃಷಿಗಾಗಿ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಅದಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಹಾಯಿಸಿ ಈ ಜಿಲ್ಲೆಗಳ ಒಟ್ಟು 126 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 640 ದಿನಗಳಲ್ಲಿ 180 ದಿನಗಳು ಕೋರ್ಟ್‌ ಕಲಾಪಗಳಿಂದ ಮತ್ತು ಇತರ ಕಾರಣಗಳಿಂದ ಪಂಪ್‌ ಮಾಡಲು ಸಾಧ್ಯವಾಗಿಲ್ಲ. ಉಳಿದ 460 ದಿನಗಳಲ್ಲಿ 3.80 ಟಿ.ಎಂ.ಸಿ ಅಡಿ ನೀರನ್ನು 49 ಕೆರೆಗಳಿಗೆ ಮತ್ತು 93 ಚೆಕ್‌ ಡ್ಯಾಂಗಳಿಗೆ ತುಂಬಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT