ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಮಾಹಿತಿ ‘ಮೀರಿದ’ ಭೂಮಿ ಒತ್ತುವರಿ

ಸಮಿತಿ, ಕಾರ್ಯಪಡೆ ವರದಿ ಕಡೆಗಣನೆ; ಸರ್ಕಾರಿ ಭೂಮಿಗಳಲ್ಲಿ ಬೃಹತ್‌ ಕಟ್ಟಡ
Published 6 ಆಗಸ್ಟ್ 2023, 0:14 IST
Last Updated 6 ಆಗಸ್ಟ್ 2023, 0:14 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಪ್ರಮುಖ ಸಮಿತಿಗಳು ಹಾಗೂ ಈಗ ಸರ್ಕಾರದ ಮುಂದಿರುವ ಒತ್ತುವರಿ ಅಂಕಿ ಅಂಶದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕಂದಾಯ ಇಲಾಖೆ ಮಾಹಿತಿ ಪ್ರಕಾರ, ನಗರ ಜಿಲ್ಲೆಯಲ್ಲಿ 269 ಎಕರೆ ಒತ್ತುವರಿ ಭೂಮಿಯನ್ನು ಮಾತ್ರ ತೆರವು ಮಾಡಬೇಕಿದೆ.

ಬೆಂಗಳೂರು ನಗರ ಜಿಲ್ಲೆ ಸರ್ಕಾರಿ ಜಮೀನು ಒತ್ತುವರಿ ಕುರಿತು ಎ.ಟಿ. ರಾಮಸ್ವಾಮಿ ನೇತೃತ್ವದ ವಿಧಾನಮಂಡಲ ಜಂಟಿ ಸಮಿತಿ 2007ರ ಜುಲೈನಲ್ಲಿ ವರದಿ ನೀಡಿತ್ತು. ಸರ್ಕಾರಿ ಜಮೀನುಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್‌ 2011ರ ಜುಲೈನಲ್ಲಿ ‘ದುರಾಸೆ ಮತ್ತು ಶಾಮೀಲು’ ಶೀರ್ಷಿಕೆಯಡಿ ವರದಿ ನೀಡಿದ್ದರು. ಕೆ.ಬಿ. ಕೋಳಿವಾಡ ಅಧ್ಯಕ್ಷತೆಯಲ್ಲಿ  2017ರಲ್ಲಿ ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆರೆಗಳ ಒತ್ತುವರಿ ಮತ್ತು ಸಂರಕ್ಷಣೆ ಸದನ ಸಮಿತಿ ವರದಿ ನೀಡಿದೆ.

ಈ ಮೂರು ವರದಿಗಳ ಅಂಕಿ–ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಕೊನೆಗೆ 269 ಎಕರೆ ಮಾತ್ರ ಒತ್ತುವರಿ ಬಾಕಿ ಉಳಿದಿದೆ ಎಂದಿರುವುದರಲ್ಲಿ ನಿಜಾಂಶವಿಲ್ಲ ಎಂದು ಸಮಿತಿ, ಕಾರ್ಯಪಡೆ ಅಧ್ಯಕ್ಷರು ಹೇಳಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ. 

‘ಸಾರ್ವಜನಿಕ ಜಮೀನುಗಳ ನಿಗಮ, ಕಂದಾಯ ಇಲಾಖೆಯ ಅಂಕಿ ಅಂಶದಂತೆ ವರದಿ ನೀಡಿದೆ. ಇದರಲ್ಲಿ ಅರಣ್ಯ ಭೂಮಿ ಒತ್ತುವರಿ ಸೇರಿಲ್ಲ. ಅಲ್ಲದೆ ಕಂದಾಯ ಇಲಾಖೆಗೆ ಸೇರಿದ ಕೆರೆಗಳ ಒತ್ತುವರಿ ವಿವರವನ್ನೂ ಒಳಗೊಂಡಿಲ್ಲ. ಹೀಗಾಗಿ, ಸಾಕಷ್ಟು ಒತ್ತುವರಿಯನ್ನು ಈ ಮಾಹಿತಿ ಒಳಗೊಂಡಿಲ್ಲ. ವಾಸ್ತವ ವರದಿಯನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದು ಅದನ್ನು ಹೊರಗೆ ತೆಗೆದು ತನಿಖೆ ಮಾಡಿದರೆ ಒತ್ತುವರಿ ಸಾವಿರಾರು ಎಕರೆಯಲ್ಲಿರುವುದು ಹೊರ ಬರುತ್ತದೆ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ವಿ. ಬಾಲಸುಬ್ರಮಣಿಯನ್‌ ಹೇಳಿದರು.

‘ಬೆಂಗಳೂರು ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಸಾಗುವಳಿ ಆಧಾರದ ಮೇಲೆ ಸಕ್ರಮ ಮಾಡಲು ಮುಂದಾಗಿದೆ. ಆದರೆ ನಮೂನೆ 50/53ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸ್ಥಳೀಯ ಶಾಸಕರ ಸಮಿತಿ ಮಂಜೂರು ಮಾಡಬೇಕು. ಆದರೆ, ಕಾಯ್ದೆ ಪ್ರಕಾರ ಅವುಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಅರ್ಜಿಗಳನ್ನು ತಿರಸ್ಕರಿಸದೆ ಹಾಗೇ ಇಟ್ಟುಕೊಂಡಿದ್ದಾರೆ’ ಎಂದರು.

‘ಕಾಯ್ದೆ ಪ್ರಕಾರ, ಬಿಬಿಎಂಪಿ ಗಡಿ ಸುತ್ತಮುತ್ತಲಿನ 18 ಕಿ.ಮೀ ಅಂತರದಲ್ಲಿ ಸಾಗುವಳಿಗಾಗಿ ಭೂಮಿಯನ್ನು ಮಂಜೂರು ಮಾಡಲು ಬರುವುದಿಲ್ಲ. ಇಲ್ಲೆಲ್ಲೂ ಒಕ್ಕಲುತನ ಮಾಡುವಂತಿಲ್ಲ. ಇಂತಹ ಭೂಮಿಗಳ ಅರ್ಜಿ ಸಮಿತಿ ಮುಂದೆ ಬಾಕಿ ಇದ್ದು,  ಆ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ತಲೆ ಎತ್ತಿದೆ. ಬೃಹತ್‌ ಕಟ್ಟಡಗಳು ನಿರ್ಮಾಣವಾಗಿವೆ. ಅವುಗಳನ್ನೆಲ್ಲ ಇವರು ತೆರವು ಮಾಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಕೋಳಿವಾಡ ಅವರ ವರದಿ ಪ್ರಕಾರ ನಗರದ ಕೆರೆಗಳ ಒತ್ತುವರಿಯೇ ನಾಲ್ಕು ಸಾವಿರ ಎಕರೆ ಮೀರುತ್ತದೆ. ಬಹುತೇಕ ಕೆರೆಗಳು ಕಂದಾಯ ಇಲಾಖೆ ವ್ಯಾಪ್ತಿಗೇ ಬರುತ್ತವೆ. ಆದರೆ, 269 ಎಕರೆ ಒತ್ತುವರಿ ಮಾತ್ರ ಇದೆ ಎಂಬುದನ್ನು ನಂಬಲು ಸಾಧ್ಯವೇ? ವಾಸ್ತವದ ಅರಿವು ಕಂದಾಯದ ಸಚಿವರು ಅರಿತರೆ ಅವರೂ ಸುಮ್ಮನಾಗುತ್ತಾರೆ ಅಷ್ಟೇ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುತ್ತೇವೆ ಎಂದು 2013ರಲ್ಲೂ ಹೇಳಿದ್ದರು. ವರದಿಯಲ್ಲಿ ರಾಜಕಾರಣಿಗಳ ಹೆಸರಿತ್ತು. ಈ ಬಗ್ಗೆ ವರದಿಯಾದಾಗ ನನ್ನ ಮೇಲೆ ಹಕ್ಕುಚ್ಯುತಿಯ ಪ್ರಸ್ತಾಪವನ್ನೂ ಮಾಡಿದ್ದರು. ಒತ್ತುವರಿ ಮಾತ್ರ ಹಾಗೆಯೇ ಉಳಿದಿದೆ. 10 ವರ್ಷದಿಂದ ಏನೂ ಆಗಿಲ್ಲ’ ಎಂದರು.

ರಿಯಲ್‌ ಎಸ್ಟೇಟ್‌ ಮಾಫಿಯಾ ಬಿಡುವುದಿಲ್ಲ: ಬಾಲಸುಬ್ರಮಣಿಯನ್‌

‘ಸಚಿವ ಕೃಷ್ಣಬೈರೇಗೌಡ ಅವರು ಕಾಲಮಿತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಎಲ್ಲ ಪಕ್ಷಗಳಲ್ಲೂ ಇರುವ ರಿಯಲ್‌ ಎಸ್ಟೇಟ್‌ ಮಾಫಿಯಾ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬೆಂಗಳೂರು ನಗರದಲ್ಲಿ ಪ್ರತಿ ಎಕರೆಗೆ ಇದೀಗ ಕನಿಷ್ಠ ₹15 ಕೋಟಿಯಿಂದ ₹20 ಕೋಟಿ ಮೌಲ್ಯವಿದೆ. ಅದನ್ನೆಲ್ಲ ತೆರವು ಮಾಡಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ವರ್ಷಗಳಿಂದ ಹೇಳುತ್ತಿರುವ ಹಾಗೆ ಇದೂ ಆಗುತ್ತದೆ’ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ವಿ. ಬಾಲಸುಬ್ರಮಣಿಯನ್ ಹೇಳಿದರು.

ನಕಲಿ ದಾಖಲೆಯೇ ಹೆಚ್ಚು: ಎ.ಟಿ. ರಾಮಸ್ವಾಮಿ

‘ಸರ್ಕಾರಿ ಭೂಮಿ ಒತ್ತುವರಿ ತೆರವು ಎನ್ನುವುದು ಒಂದು ನಾಟಕ. ಈವರೆಗೆ ಸಾವಿರಾರು ಎಕರೆ ತೆರವು ಮಾಡಿದ್ದೇವೆ ಎನ್ನುತ್ತಾರೆ. ಎಲ್ಲಿ ತೆರವಾಗಿದೆ ಎಂಬುದರ ಬಗ್ಗೆ ಫಲಕ ಹಾಕಲಿ. ಅದನ್ನೂ ಕಿತ್ತು ಬಿಸಾಡಿರುತ್ತಾರೆ. ಸಮಿತಿ ವರದಿ ನೀಡುತ್ತದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಆಗಾಗ್ಗೆ ಕಣ್ಣೀರು ಒರೆಸುವ ತಂತ್ರ ಮಾಡುತ್ತಾರೆ ಅಷ್ಟೇ. ಸಮಿತಿ ಕಾರ್ಯಪಡೆಗಳು ನೀಡಿದ ವರದಿ ಮೇಲೆ ಕ್ರಮವಾಗಿರುವ ಬಗ್ಗೆ ಬಹಿರಂಗವಾಗಿ ತಿಳಿಸಲಿ. ಸಾವಿರಾರು ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿಕೊಂಡಿದ್ದಾರೆ. ಅವರ ಮೇಲೆ ಇವರಿಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವೆ?. ಬಲಾಢ್ಯರಿಗೆ ಮಣೆ ಹಾಕುತ್ತಾರೆ. ಬೇರೆಯವರಿಗೆ ಕಿರುಕುಳ ನೀಡುತ್ತಾರೆ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT