ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ‘ಮೌನ’ದ ವಿರುದ್ಧ ವಾಗ್ದಾಳಿ

ಕೊಡಗಿನಲ್ಲಿ ಎಐಸಿಸಿ ಅಧ್ಯಕ್ಷರ ಮಿಂಚಿನ ಚುನಾವಣೆ ಪ್ರಚಾರ, ಮತಬೇಟೆಗೆ ಒತ್ತು
Last Updated 28 ಏಪ್ರಿಲ್ 2018, 11:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ವಿರಾಜಪೇಟೆ ತಾಲ್ಲೂಕು): ಕಾಫಿನಾಡು ಕೊಡಗಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಸಂಜೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದರು.

ಧರ್ಮಸ್ಥಳದಿಂದ ನೇರವಾಗಿ ಹೆಲಿಪ್ಯಾಡ್‌ಗೆ ಬಂದ ಅವರು, ವೀರ ಸೇನಾನಿಗಳಾದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡರು.

ಇಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಅದರೊಂದಿಗೆ ಕಾಂಗ್ರೆಸ್‌ ಆಡಳಿತಾವಧಿಯ ಯೋಜನೆಗಳನ್ನು ನೆನಪಿಸಿ, ಮತ್ತೊಮ್ಮೆ ಕಾಂಗ್ರೆಸ್‌ ಬೆಂಬಲಿಸುವಂತೆ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ತಮ್ಮ ಮಾತಿನುದ್ದಕ್ಕೂ ಮತ ಬೇಟೆಗೆ ಹೆಚ್ಚಿನ ಒತ್ತು ನೀಡಿದರು.

‘ವ್ಯಕ್ತಿಯ ಹೇಳಿಗೆ ತೂಕವಿರಬೇಕು. ಬಸವಣ್ಣನ ಹೇಳಿಕೆಯಲ್ಲಿ ತೂಕವಿತ್ತು. ಮೋದಿ ಅವರು ಬಸವಣ್ಣನ ಮೂರ್ತಿಗೆ ಕೈಮುಗಿಯುತ್ತಾರೆಯೇ ಹೊರತು ಅವರು ನುಡಿದಂತೆ ನಡೆಯುವುದಿಲ್ಲ’ ಎಂದು ಮಾತಿನಲ್ಲಿ ತಿವಿದರು.

‘ನೀರವ್‌ ಮೋದಿ ₹ 3 ಸಾವಿರ ಕೋಟಿ ಲೂಟಿ ಹೊಡೆದು ವಿದೇಶಕ್ಕೆ ಓಡಿಹೋಗಿದ್ದರೂ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಜೈಲಿಗೆ ಹೋಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಸಿಬಿಐ ಅನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ದೂರಿದರು.

‘ನರೇಂದ್ರ ಮೋದಿ ಬೇಟಿ ಬಚಾವೊ, ಬೇಟಿ ಪಡಾವೊ ಎಂದು ಘೋಷಿಸಿದ್ದರು. ಗುಜರಾತ್‌, ಉತ್ತರ ಪ್ರದೇಶಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಗಮನಿಸಿದರೆ ಬೇಟಿ ಬಚಾವೊ ಮಾತ್ರ ಉಳಿದಿದೆ. ಅವರ ಪಕ್ಷದ ಶಾಸಕರೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವಧಿಯಲ್ಲಿ ದೇಶದಲ್ಲಿ ಇಂತಹ ವಾತಾವರಣ ಇರಲಿಲ್ಲ. ದಲಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲ’ ಎಂದು ಹೇಳಿದರು.

ಕೊಡಗು ನಿಸರ್ಗ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ಚುನಾವಣೆಯ ಬಳಿಕ ಪ್ರವಾಸ ಬರುವುದಾಗಿ ಹೇಳಿದರು.

‘ದೇಶದ ಪ್ರತಿ ಪ್ರಜೆಗೂ ₹ 15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಅದು ಇದುವರೆಗೂ ಬಂದಿದೆಯೇ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ನ. 8ರಂದು ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದರು. ರೈತರು, ಬಡವರು, ಕಾರ್ಮಿಕರು, ಮಹಿಳೆಯರು ಹಾಗೂ ಮಕ್ಕಳು ಬ್ಯಾಂಕ್‌ ಎದುರು ನಿಂತರು. ಆದರೆ, ಸೂಟು– ಬೂಟ್‌ ಹಾಕಿದವರು ಯಾರು ಬ್ಯಾಂಕ್‌ ಎದುರು ನಿಲ್ಲಲಿಲ್ಲ. ಕೆಲವರು ಕಪ್ಪುಹಣವನ್ನು ಬಿಳಿ ಮಾಡಿಕೊಂಡರು. ಜನರ ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ನೀರವ್‌ ಮೋದಿ ಜೇಬಿಗೆ ಹೋಯಿತು’ ಎಂದು ಲೇವಡಿ ಮಾಡಿದರು.

‘ಜೈಲಿಗೆ ಹೋದವರನ್ನು ಅಕ್ಕಪಕ್ಕ ಕೂರಿಸಿಕೊಂಡು ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾರೆ. ರಾಜ್ಯದಲ್ಲಿ ರೆಡ್ಡಿ ಸಹೋದರರು ₹ 35 ಸಾವಿರ ಕೋಟಿ ದರೋಡೆ ಮಾಡಿದ್ದಾರೆ. ಕೇಂದ್ರವು ಸಿಬಿಐ ಅನ್ನು ಬಳಸಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ. ಸಿಬಿಐಗೆ ಅರ್ಥವೇ ಇಲ್ಲ ಎನ್ನುವಂತೆ ಮಾಡಿದೆ’ ಎಂದು ಕುಟುಕಿದರು.

ಜೈಲಿನಲ್ಲಿದ್ದವರಿಗೆ ಟಿಕೆಟ್‌: ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದವರಿಗೂ ಟಿಕೆಟ್‌ ನೀಡಲಾಗಿದೆ. ಈ ವಿಚಾರದಲ್ಲಿ ನುಡಿದಂತೆ ಏಕೆ ನಡೆಯಲಿಲ್ಲ ಎಂದು ರಾಹುಲ್‌ ಪ್ರಶ್ನಿಸಿದರು.

‘ದೇಶದ ಸಾಲ ಮನ್ನಾದ ಬಗ್ಗೆ ಪ್ರಧಾನಿ ಕಚೇರಿಯಲ್ಲೂ ಚರ್ಚೆಸಿದ್ದೇನೆ. ಅದನ್ನೂ ಮಾಡಲಿಲ್ಲ. ಆದರೆ, ದೇಶದ ಶ್ರೀಮಂತರ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಅದೇ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಿರುವುದು ಕಾಂಗ್ರೆಸ್‌ ಹೆಗ್ಗಳಿಕೆ. ದಿನದಿಂದ ದಿನಕ್ಕೆ ರಾಷ್ಟ್ರದಲ್ಲಿ ಇಂಧನದ ಬೆಲೆ ಎರಿಕೆ ಆಗುತ್ತಲೇ ಇದೆ. ತೈಲೋತ್ಪನ್ನಗಳ ಬೆಲೆ ಇಳಿದರೂ ಗ್ರಾಹಕರಿಗೆ ಲಾಭ ಸಿಗುತ್ತಿಲ್ಲ. ಜನರ ತೆರಿಗೆಯ ದುಡ್ಡು ನಾಲ್ಕು ಜನರಿಗೆ ಮಾತ್ರ ಹೋಗುತ್ತಿದೆ’ ಎಂದರು.

‘ಲೋಕಸಭೆಯಲ್ಲಿ ಭ್ರಷ್ಟಾಚಾರ, ನೀರವ್‌ ಮೋದಿ ಪ್ರಕರಣ, ಗುಜರಾತ್‌ ಪೆಟ್ರೋಲ್‌ ಹಗರಣದ ಬಗ್ಗೆ ಪ್ರಶ್ನೆ ಕೇಳಿದರೆ, ಉತ್ತರಿಸುವುದಿಲ್ಲ. ಅದನ್ನು ಕಾಂಗ್ರೆಸ್‌ ಸಂಸದರು ಪ್ರಶ್ನಿಸಿದರೆ, ಭಯ ಬೀಳುತ್ತಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸಹ ಆರ್‌ಎಸ್‌ಎಸ್‌ ಹಾಗೂ ಅಮಿತ್‌ ಶಾ ಅವರಿಂದ ಕಾಪಾಡಿ ಎನ್ನುವ ಸ್ಥಿತಿಯಿದೆ’ ಎಂದು ಕಾರ್ಯಕರ್ತರ ಎದುರು ಹೇಳಿದರು.

ಸಿದ್ದು ನೋಡಿ ಕಲಿಯಲಿ: ‘ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಿಗುತ್ತಿದೆ. ನಾನು ಸೂಚಿಸಿದ 10 ದಿನಗಳಲ್ಲಿ ರೈತ ಸಾಲಮನ್ನಾ ಮಾಡಲಾಯಿತು. ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೋಡಿ ಕಲಿಯಲಿ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಭಾರತಕ್ಕೆ ಕಳಪೆ ಗುಣಮಟ್ಟದ ಕಾಳು ಮೆಣಸು ಆಮದಾಗಲು ಅಮಿತ್‌ ಶಾ ಪುತ್ರ ಜೈ ಶಾ ಕಾರಣ. ಈ ದಂದೆಯಿಂದ ಆತನ ಆದಾಯ ₹ 50 ಲಕ್ಷದಿಂದ ₹ 80 ಕೋಟಿಗೆ ಏರಿಕೆಯಾಗಿದೆ’ ಎಂದು ಆಪಾದಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು.

ಬಿಜೆಪಿ– ಜೆಡಿಎಸ್‌ ಒಳಒಪ್ಪಂದ

ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ. ಚಾಮುಂಡೇಶ್ವರಿ, ಕೆ.ಆರ್‌.ನಗರ ಹಾಗೂ ವರುಣಾದಲ್ಲಿ ಮಾತುಕತೆ ನಡೆಸಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ‘ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಏನು ಕೆಲಸ ಮಾಡಲಿಲ್ಲ. ಯಡಿಯೂರಪ್ಪ ಅವರನ್ನು ರಕ್ಷಣೆ ಮಾಡಿದ್ದೇ ಸಾಧನ ಎಂದು ಟೀಕಿಸಿದರು.

ಗೋಣಿಕೊಪ್ಪಲು: ಅಧಿಕಾರ ಸಿಕ್ಕಾಗ ಕಬ್ಬಿಣದ ಅದಿರು ಸಾಗಿಸುವ ಮೂಲಕ ಒಂದು ಲಕ್ಷ ಕೋಟಿಗೂ ಹೆಚ್ಚು ಲೂಟಿ ಹೊಡೆದವರಿಗೆ ಮತ್ತೆ ಅಧಿಕಾರ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಇಲ್ಲಿನ ದಸರಾ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಜೈಲಿಗೆ ಹೋಗಿದ್ದ ಜರ್ನಾದನ ರೆಡ್ಡಿ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ. ಬಳ್ಳಾರಿಗೆ ತೆರಳದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಷರತ್ತುಬದ್ಧ ಜಾಮೀನಿನ ಮೇಲಿದ್ದರೂ, ಶ್ರೀರಾಮುಲು ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮೊಳಕಾಲ್ಮುರಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಮತ್ತೆ ಲೂಟಿ ಹೊಡೆಯಲು ಅವಕಾಶ ಸಿಗಬಾರದು ಎನ್ನುವ ಕಾರಣಕ್ಕೆ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದೇವೆ. ರಾಜ್ಯದ ಸಂಪತ್ತು ರಕ್ಷಣೆ ಆಗಬೇಕೆಂದರೆ ಮತ್ತೆ ಅವರಿಗೆ ಅಧಿಕಾರ ಸಿಗಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸಾಧನೆ ಶೂನ್ಯ. ಅವರ ಬಾಡಿ ಬಡಾಯಿ ಆಯಿತೇ ವಿನಾ ಅಭಿವೃದ್ಧಿ ಕೆಲಸಗಳು ಮಾತ್ರ ನಡೆಯಲಿಲ್ಲ. ಸಾಧನೆ ಶೂನ್ಯ. ಚುನಾವಣೆ ಘೋಷಣೆಯಾದ ಬಳಿಕ ರಾಜ್ಯ ಪ್ರಧಾನಿ ನರೇಂದ್ರ ಮೋದಿ ನಾಲ್ಕೈದ ಬಾರಿ ಬಂದು ಹೋಗಿದ್ದಾರೆ. ದೇಶ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ನಾಲ್ಕು ವರ್ಷದಿಂದ ಏನ್‌ ಮಾಡಿದ್ದೇವೆಂದು ಹೇಳಲು ಅವರ ಬಳಿ ಯಾವುದೇ ವಿಷಯ ಇಲ್ಲ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವೆಂದು ಮೋದಿ ಹಾಗೂ ಯಡಿಯೂರಪ್ಪ ಅವರು ಅಪಪ್ರಚಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಸೋಣವೆಂದು ಆಹ್ವಾನ ಕೊಟ್ಟರೂ ಬರಲಿಲ್ಲ ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವು ಮಾದಪ್ಪ, ವೀಣಾ ಅಚ್ಚಯ್ಯ, ತನ್ನೀರಾ ಮೈನಾ, ಶಿವಪ್ಪ, ಮಿಟ್ಟು ಚೆಂಗಪ್ಪ, ವೆಂಕಪ್ಪಗೌಡ, ಸರಿತಾ ಪೂಣಚ್ಚ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT