ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾರೋಗ್ಯ | ಬೆಂಗಳೂರು: ಆಸ್ಪತ್ರೆ ಸುಸಜ್ಜಿತ; ಕೋವಿಡ್‌ ಚಿಕಿತ್ಸೆ ಗೋತಾ

ರಾಜಧಾನಿ ಸೆರಗಿನ ಹಳ್ಳಿಗರ ಆರೋಗ್ಯಕ್ಕೆ ಮಹಾನಗರವೇ ಆಸರೆ
Last Updated 8 ಜೂನ್ 2021, 1:51 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪ್ಪ, ಅಮ್ಮ ಕಣ್ಣ ಮುಂದೆ ಆರಾಮವಾಗಿ ಓಡಾಡಿಕೊಂಡಿದ್ದರು. ಕೋವಿಡ್‌ ಲಸಿಕೆ ಪಡೆದ ನಾಲ್ಕನೇ ದಿನಕ್ಕೆ ತೀವ್ರ ಜ್ವರ ಕಾಣಿಸಿಕೊಂಡಿತು. ವೈದ್ಯರನ್ನು ವಿಚಾರಿಸಿದಾಗ ಮಾತ್ರೆ ಕೊಟ್ಟರೆ ಹುಷಾರಾಗುತ್ತಾರೆ ಎಂದರು. ನಾವೂ ಸುಮ್ಮನಾದೆವು. ಆದರೆ, ಜ್ವರ ಏರುತ್ತಲೇ ಹೋಯಿತು. ಭಯಗೊಂಡು ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಿದೆವು. ಅಲ್ಲಿಗೆ ಹೋಗಿ ಐದೇ ದಿನಗಳಲ್ಲಿ ಅಪ್ಪ ತೀರಿಕೊಂಡರು. ಅದಕ್ಕೂ ಮುನ್ನ ಅಮ್ಮ ಮೃತಪಟ್ಟಿದ್ದರು. ಅವರಿಬ್ಬರೂ ಈಗ ನಮ್ಮ ಜೊತೆಯಲ್ಲಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ...’

ಹೀಗೆ ಹೇಳುವಾಗ ಸಂತೋಷ್‌ ಅವರ ಕಣ್ಣುಗಳು ಹನಿಗೂಡಿದವು.ಸಂತೋಷ್‌, ಬೆಂಗಳೂರು ಉತ್ತರ ತಾಲ್ಲೂಕಿನ ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗ್ಗಟ್ಟ ನಿವಾಸಿ. ಅಪ್ಪ ರಮೇಶ್ ಹಾಗೂ ಅಮ್ಮ ಜಾನಕಮ್ಮ ಅಗಲಿಕೆಯಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿರುವುದನ್ನು ಅವರ ಮಾತುಗಳೇ ಧ್ವನಿಸುತ್ತಿದ್ದವು.

‘ಅಪ್ಪ, ಅಮ್ಮ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಗ್ರಾಮದ ಯಾರೊಬ್ಬರೂ ಮನೆಗೆ ಬರುತ್ತಿಲ್ಲ. ಎದುರಿಗೆ ಸಿಕ್ಕರೂ ಮಾತನಾಡಿಸುತ್ತಿಲ್ಲ. ಇಂತಹ ಪರಿಸ್ಥಿತಿ ಶತ್ರುಗಳಿಗೂ ಬಾರದಿರಲಿ’ ಎಂದು ಹೇಳುತ್ತಾ ಕಣ್ಣೀರು ಒರೆಸಿಕೊಂಡರು.

ಬೆಂಗಳೂರು ನಗರ ಜಿಲ್ಲೆಯ ಹಳ್ಳಿಗಳಲ್ಲಿ ಸಂಚರಿಸಿದರೆ ಇಂತಹ ಹಲವು ಕರುಣಾಜನಕ ಕಥೆಗಳು ಕಿವಿಗಪ್ಪಳಿಸುತ್ತವೆ. ಕಣ್ಣುಗಳನ್ನೂ ತೇವಗೊಳಿಸುತ್ತವೆ.

17 ಹೋಬಳಿ ಹಾಗೂ ಸುಮಾರು 668 ಹಳ್ಳಿಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೇ ಸುಮಾರು10 ಲಕ್ಷ ಜನ ವಾಸಿಸುತ್ತಿದ್ದಾರೆ. ಮೂರು ಅಥವಾ ಐದು ಗ್ರಾಮ ಪಂಚಾಯಿತಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಇವೆ. ಎಲ್ಲವೂ ಸುಸಜ್ಜಿತ ಕಟ್ಟಡಗಳೇ. ಹೀಗಿದ್ದರೂ ತುರ್ತು ಚಿಕಿತ್ಸೆಗಾಗಿ ಹಳ್ಳಿಗರೆಲ್ಲಾ ನಗರ ಭಾಗದ ಆಸ್ಪತ್ರೆಗಳಿಗೆ ಎಡತಾಕುವುದು ತಪ್ಪಿಲ್ಲ. ಕೋವಿಡ್‌ ಕಾಣಿಸಿಕೊಂಡ ಬಳಿಕ ಜನರ ಪರದಾಟ ಹೆಚ್ಚಾಗಿದೆ.

‘ಪರೀಕ್ಷೆಗೆ ಹೋದರೆ ಜನ ಬೈತಾರೆ’

’ಕೋವಿಡ್‌ ಪರೀಕ್ಷೆ ಮಾಡಲು ನಾವು ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತೇವೆ. ಮನೆಗಳಿಗೆ ಹೋಗಿ ಕರೆದರೆ ಬೈದು ಕಳಿಸುತ್ತಾರೆ. ಕೋವಿಡ್‌ ಭೀಕರತೆ ಬಗ್ಗೆ ತಿಳಿಸಿ ಹೇಳಿದರೂ ಪ್ರಯೋಜನವಿಲ್ಲ. ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರ ವರದಿ ‘ನೆಗೆಟಿವ್‌’ ಬಂದರೆ ನಾವು ಬಚಾವ್‌. ಒಂದೊಮ್ಮೆ ‘ಪಾಸಿಟಿವ್‌’ ಬಂದರೆ ಜನ ನಮ್ಮ ಮೇಲೆ ಜಗಳಕ್ಕೆ ಬಂದು ಬಿಡುತ್ತಾರೆ. ಹೀಗಾದರೆ ನಾವು ಹೇಗೆ ಕೆಲಸ ಮಾಡಬೇಕು’ ಎಂದು ಚಿಕ್ಕಬಾಣಾವರ ಆರೋಗ್ಯ ಕೇಂದ್ರದಲ್ಲಿದ್ದ ಇಬ್ಬರು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡರು.

‘ಮನೆಯ ಆಧಾರಸ್ತಂಭವೇ ಕುಸಿದಿದೆ’

‘ನನ್ನ ಪತಿ ಶ್ರೀನಿವಾಸ ಮೂರ್ತಿ ಶಾಲೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿದಾಗ ‘ನೆಗೆಟಿವ್‌’ ಬಂತು. ಕೆಲ ದಿನಗಳ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಸಿ.ಟಿ.ಸ್ಕ್ಯಾನ್‌ ಮಾಡಿಸಿದಾಗ ಸೋಂಕು ತಗುಲಿರುವುದು ಖಾತರಿಯಾಯಿತು. ನಮ್ಮ ಸಂಬಂಧಿಕರೊಬ್ಬರು ಕಷ್ಟಪಟ್ಟು ಐಸಿಯು ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವಾರ ಇದ್ದರೂ ಗುಣಮುಖರಾಗಲಿಲ್ಲ. ಬಿಲ್‌ ಜಾಸ್ತಿಯಾಗುತ್ತಿದೆ, ಮನೆಗೆ ಕರೆದುಕೊಂಡು ಹೋಗಿ ಎಂದು ಹಟ ಹಿಡಿದರು. ಮನೆಗೆ ಬಂದ ದಿನವೇ ಮತ್ತೆ ಉಸಿರಾಟದ ಸಮಸ್ಯೆ ಹೆಚ್ಚಾಯಿತು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ’ ಎಂದು ಸುಗ್ಗಟ್ಟದ ಸುಮತಿ ಕಣ್ಣೀರಿಟ್ಟರು.

‘ಮನೆಗೆ ಅವರೇ ಆಧಾರವಾಗಿದ್ದರು. ಈಗ ದಿಕ್ಕೇ ತೋಚದಾಗಿದ್ದೇವೆ. ಅವರ ಚಿಕಿತ್ಸೆಗಾಗಿ ಸುಮಾರು₹10 ಲಕ್ಷ ಖರ್ಚು ಮಾಡಿದ್ದೇವೆ. ಅದನ್ನು ಹೇಗೆ ತೀರಿಸುವುದು. ಮಗಳ ವಿದ್ಯಾಭ್ಯಾಸಕ್ಕೆ ಎಲ್ಲಿಂದ ಹಣ ತರುವುದು ಎಂಬುದೇ ತಿಳಿಯುತ್ತಿಲ್ಲ. ಸರ್ಕಾರದಿಂದ ಏನಾದರೂ ಪರಿಹಾರ ಸಿಕ್ಕರೆ ಹೇಗೋ ಬದುಕಬಹುದು’ ಎಂದರು.

ಬೆಂಗಳೂರು ನಗರ

ಒಟ್ಟು ಪ್ರಕರಣಗಳು; 11,85,118

ಗುಣಮುಖರಾದವರು; 10,62,398

ಸಕ್ರಿಯ ಪ್ರಕರಣಗಳು; 1,07,645

ಮೃತಪಟ್ಟವರು; 15,074

ಸೋಮವಾರದ ಏರಿಕೆ; 1,992

ಗುಣಮುಖರು; 11,488

ಮೃತಪಟ್ಟವರು; 199


* ಆರೋಗ್ಯ ಕೇಂದ್ರಕ್ಕೆ ಅಗತ್ಯ ಔಷಧ ಪೂರೈಕೆಯಾಗುತ್ತಿಲ್ಲ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೈಗವಸು ಹಾಗೂ ಪಿಪಿಇ ಕಿಟ್‌ ಕೂಡ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಹೇಗೆ ಕೆಲಸ ಮಾಡಬೇಕು.

-ಕಿರಣ್‌, ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ

* ಕೋವಿಡ್‌ನಿಂದಾಗಿ ಪತ್ನಿಯನ್ನು ಕಳೆದುಕೊಂಡಿದ್ದೇನೆ. ಆ ದುಃಖದ ನಡುವೆಯೂ ಜನರ ಸೇವೆ ಮಾಡುತ್ತಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳದೆ ಅವರು ನಮ್ಮ ಮೇಲೆ ರೇಗುತ್ತಾರೆ. ಅವರಿಗೆ ತಿಳಿಸಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ.

–ಆರೋಗ್ಯ ಕೇಂದ್ರವೊಂದರ ವೈದ್ಯಾಧಿಕಾರಿ

* ತಮಗೆ ಸೋಂಕು ತಗುಲಿರುವ ವಿಚಾರವನ್ನು ಬಹಳಷ್ಟು ಮಂದಿ ಮುಚ್ಚಿಡುತ್ತಾರೆ. ಊರಿನಿಂದ ಬಹಿಷ್ಕಾರ ಹಾಕಬಹುದು. ಹಾಗಾದರೆ ತಮ್ಮ ದುಡಿಮೆಗೂ ಪೆಟ್ಟು ಬೀಳುತ್ತದೆ ಎಂಬ ಭಯದಿಂದ ಅವರು ಹಾಗೆ ಮಾಡುತ್ತಾರೆ. ಈ ಮನಸ್ಥಿತಿ ಬದಲಾಗಬೇಕು.

-ನರೇಂದ್ರ ಬಾಬು, ಮಹಾಂತಲಿಂಗಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT