ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೋಹಳ್ಳಿ: ಬೋಳಾರೆ ಬಂಡೆ ಒಡಲಿಗೆ ಗ್ರಾನೈಟ್‌ ಕಸ

ನಗರದ ಕಸ ತಂದು ಸುರಿಯುತ್ತಿರುವುದರಿಂದ ದುರ್ವಾಸನೆ: ಸ್ಥಳೀಯರ ಅಳಲು
Last Updated 20 ಮೇ 2022, 19:08 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲು ಗಣಿಗಾರಿಕೆ ನಿಲ್ಲಿಸಿದ ಬಳಿಕ ದನಕರುಗಳಿಗೆ ಕುಡಿಯುವ ನೀರಿನ ಸಂಗ್ರಹ ತಾಣವಾಗಿದ್ದ ನಗರದ ಹೊರ ವಲಯದ ಬೋಳಾರೆ ಬಂಡೆ ಈಗ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಸುತ್ತಮುತ್ತಲ ನಿವಾಸಿಗಳು ದುರ್ವಾಸನೆ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಕೆಂಗೇರಿ ಹೋಬಳಿಯ ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೋಳಾರೆ ಬಂಡೆಯಲ್ಲಿ ಕೆಲ ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಲ್ಲಿನ ದೊಡ್ಡ ಗುಂಡಿಗಳಲ್ಲಿ ಗಣಿಗಾರಿಕೆ ನಿಲ್ಲಿಸಿದ ಬಳಿಕ ಮಳೆ ನೀರು ಸಂಗ್ರಹವಾಗುತ್ತಿತ್ತು. ಬಂಡೆಯ ಮೇಲೆ ಮುನೇಶ್ವರ ದೇವಾಲಯವೂ ಇದ್ದು, ವಾರಾಂತ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಲಾಕ್‌ಡೌನ್ ಅವಧಿಯಲ್ಲಿ ನಗರ ಪ್ರದೇಶದ ಕಸವನ್ನು ತಂದು ಇಲ್ಲಿ ಸುರಿಯಲಾಗಿತ್ತು. ಬಂಡೆಗಳ ನಡುವೆ ಸಂಗ್ರಹವಾಗಿದ್ದ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ಇದಕ್ಕೆ ಜನರ ವಿರೋಧ ವ್ಯಕ್ತವಾಗಿದ್ದರಿಂದ ಕೆಲ ದಿನಗಳ ಮಟ್ಟಿಗೆ ಕಸ ಸುರಿಯುವುದನ್ನು ನಿಲ್ಲಿಸಲಾಗಿತ್ತು. ಈಗ ಈ ಸಮಸ್ಯೆ ಮತ್ತೆ ಮರುಕಳಿಸಿದೆ.

‘ಕಟ್ಟಡ ಅವಶೇಷ, ಕೋಳಿ ಅಂಗಡಿ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿಯಲಾಗುತ್ತದೆ. ಅದರ ಜತೆಗೆ ಗ್ರಾನೈಟ್ ಕಾರ್ಖಾನೆಗಳಲ್ಲಿ ಕಲ್ಲು ಕತ್ತರಿಸಲು ಬಳಸುವ ರಾಸಾಯನಿಕ ಮಿಶ್ರಿತ ನೀರನ್ನು ಸಂಗ್ರಹಿಸಿ ಟ್ಯಾಂಕರ್‌ಗಳಲ್ಲಿ ತುಂಬಿಕೊಂಡು ತಂದು ಈ ಗುಂಡಿಗಳಿಗೆ ಸುರಿಯಲಾಗುತ್ತಿದೆ. ಇದು ಸೇರಿಕೊಂಡು ಇಲ್ಲಿನ ನೀರು ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿದು ಮೇಕೆಗಳು ಮೃತಪಟ್ಟಿವೆ’ ಎಂದು ಸ್ಥಳೀಯರಾದ ದಿನೇಶ್ ಹೇಳಿದರು.

‘ಗ್ರಾನೈಟ್‌ ಕತ್ತರಿಸುವ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು ತಂದು ಇಲ್ಲಿ
ಸುರಿಯಲಾಗುತ್ತಿದೆ. ದಿನಕ್ಕೆ ಆರೇಳು ಟ್ಯಾಂಕರ್‌ಗಳಷ್ಟು ಕೊಳಚೆ ನೀರು ಸುರಿಯುತ್ತಾರೆ. ಅವುಗಳನ್ನು ಎಲ್ಲಿಂದ ತರಲಾಗುತ್ತಿದೆ ಎಂಬುದು ಗೊತ್ತಿಲ್ಲ. ಯಾರಿಗೆ ದೂರು ನೀಡಬೇಕೋ ಗೊತ್ತಾಗುತ್ತಿಲ್ಲ’ ಎಂದರು.

ಈ ಪ್ರದೇಶ ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಅಲ್ಲಿನ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ಕಂಡುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಂ.ಸುನೀತಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT