ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌನ್ಸಿಲ್‌ಗೆ ಅಧಿಕಾರವಿಲ್ಲದ ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ ಅನಗತ್ಯ: ತಜ್ಞರು

Published : 28 ಆಗಸ್ಟ್ 2024, 16:20 IST
Last Updated : 28 ಆಗಸ್ಟ್ 2024, 16:20 IST
ಫಾಲೋ ಮಾಡಿ
Comments

ಬೆಂಗಳೂರು: ‘ನಾಗರಿಕರು, ಕೌನ್ಸಿಲ್‌ಗೆ ಆರ್ಥಿಕ ನಿರ್ಧಾರ ಸೇರಿದಂತೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲದ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ (ಜಿಬಿಜಿ) ನಗರಕ್ಕೆ ಅನಗತ್ಯ’ ಎಂದು ‘ಸಿವಿಕ್‌– ಬೆಂಗಳೂರು’ ಆಯೋಜಿಸಿದ್ದ ಸಂವಾದದಲ್ಲಿ ತಜ್ಞರು ಅಭಿಪ್ರಾಯಪಟ್ಟರು.

‘ಗ್ರೇಟರ್‌ ಬೆಂಗಳೂರು’ ಎಂಬ ಪರಿಕಲ್ಪನೆಗಿಂತ ಜನರು ‘ಉತ್ತಮ ಬೆಂಗಳೂರು’ ಬಯಸಿದ್ದಾರೆ. ಜಂಟಿ ಸದನ ಸಮಿತಿ ಮೂಲಕ ‘ಜಿಬಿಜಿ’ ಮಸೂದೆಯನ್ನು ಪುನರ್‌ವಿಮರ್ಶಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ನಾಗರಿಕರು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳ ಅಭಿಪ್ರಾಯವನ್ನೂ ಆಲಿಸಬೇಕು ಎಂದು ಸೋಮವಾರ ನಡೆದ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ ಸಂವಾದದಲ್ಲಿ ಮನವಿ ಮಾಡಲಾಯಿತು.

ಮಾಜಿ ಐಎಎಸ್‌ ಅಧಿಕಾರಿ  ಟಿ.ಆರ್‌. ರಘುನಂದನ್‌ ಮಾತನಾಡಿ, ‘ಜಿಬಿಜಿಯಲ್ಲಿ ರಚನೆಯಾಗುವ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಅವರ ಜೊತೆ ಶಾಸಕರಿರುತ್ತಾರೆ. ಪಾಲಿಕೆಯ ಎಲ್ಲ ಅಧಿಕಾರವನ್ನೂ ಅವರೇ ನಡೆಸುತ್ತಾರೆ. ಆದ್ದರಿಂದ ಪಾಲಿಕೆಗೆ ಸ್ವಾತಂತ್ರ್ಯವೇ ಇಲ್ಲದಂತಾಗುತ್ತದೆ’ ಎಂದರು.

‘ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಬೇಕು. ಇದನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿತ್ತು.  ಆದರೆ, ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ಚುನಾವಣೆಯನ್ನೂ ನಡೆಸುತ್ತಿಲ್ಲ. ಭ್ರಷ್ಟಾಚಾರದಿಂದ ತುಂಬಿರುವ ರಾಜಕೀಯ ಆಕಾಂಕ್ಷೆಗಳು ಅಧಿಕಾರ ವಿಕೇಂದ್ರಕರಣಕ್ಕೆ ಅಡ್ಡಿಯಾಗುತ್ತಿವೆ’ ಎಂದು ಹೇಳಿದರು.

ನಗರ ಮತ್ತು ಪ್ರಾಂತೀಯ ಯೋಜಕರಾದ ಡಾ. ಅಂಜಲಿ ಮೋಹನ್‌ ಮಾತನಾಡಿ, ‘ಪ್ರಾಧಿಕಾರದ ವ್ಯಾಪ್ತಿ ಎಷ್ಟಿರುತ್ತದೆ ಎಂಬುದನ್ನು ಜಿಬಿಜಿ ಮಸೂದೆಯಲ್ಲಿ ತಿಳಿಸಿಲ್ಲ. ಹಲವು ಪಾಲಿಕೆಗಳನ್ನು ಸೃಷ್ಟಿಸುವುದರಿಂದ ಸಂಪನ್ಮೂಲ ಹಂಚಿಕೆಯಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದರು.

‘ಯಾವುದೇ ಕಾನೂನು ಅಥವಾ ನಿಯಮಗಳನ್ನು ಜಾರಿಗೆ ತಂದಾಗ ಅವು ನಾಗರಿಕರ ಜೀವನವನ್ನು ಉತ್ತಮಗೊಳಿಸಬೇಕು. ನಗರದಲ್ಲಿ ನೀರು, ವಸತಿ, ಸುಗಮ ಸಂಚಾರಗಳಂತಹ ಮೂಲ ಸೌಕರ್ಯಗಳು ಅಗತ್ಯ. ಆದರೆ, ಜಿಬಿಜಿ ಮಸೂದೆಯಲ್ಲಿ ಇಂತಹ ಯಾವುದೇ ಸೌಕರ್ಯಗಳನ್ನು ನೀಡುವ ಸ್ಪಷ್ಟ ಆಲೋಚನೆ ಇಲ್ಲ. ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಅಥವಾ ಪಾರದರ್ಶಕತೆಯಲ್ಲಿ ಮಸೂದೆ ಯಾವುದೇ ರೀತಿಯ ಅಂಕ ಗಳಿಸುವುದಿಲ್ಲ’ ಎಂದು ಜನಾಗ್ರಹದ ಆಡಳಿತ ವಿಭಾಗದ ಮುಖ್ಯಸ್ಥ ಸಂತೋಷ್‌ ನರಗುಂದ ಅಭಿಪ್ರಾಯಪಟ್ಟರು.

ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರಿನ ಕಾರ್ಯಕರ್ತ ಸಂದೀಪ್‌ ಅನಿರುದ್ಧನ್‌ ಮಾತನಾಡಿ, ‘ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಾದ ನಂತರದ 32 ವರ್ಷಗಳಲ್ಲೂ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಿಲ್ಲ. ಚುನಾವಣೆ ನಡೆಸುವಲ್ಲಿ ವಿಳಂಬ, ಆಗಾಗ್ಗೆ ಹೊಸ ಮಸೂದೆ ತರುವುದರಿಂದ ಜನರಿಗೆ ಸಮಸ್ಯೆಗಳೇ ಉಂಟಾಗುತ್ತಿವೆ. ತಮಗೆ ಏನು ಬೇಕು ಎಂಬುದನ್ನು ನಾಗರಿಕರೇ ನಿರ್ಧರಿಸುವಂತಹ ವ್ಯವಸ್ಥೆ ಜಾರಿಯಾಗಬೇಕು’ ಎಂದರು.

‘ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಕೆಲಸವಾಗಬೇಕು. ಯಾವುದೇ ಕಾರಣಕ್ಕೂ ಚುನಾವಣೆಗಳು ವಿಳಂಬವಾಗಬಾರದು. ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ’ ಎಂದು ಸಿವಿಕ್‌–ಬೆಂಗಳೂರಿನ ಅಧ್ಯಕ್ಷ ಪ್ರೊ. ಡಿ. ಜೀವನ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT