ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

Greater Bengaluru | ಜಿಬಿಎ ರಚನೆ ನಂತರ ಮುಂದೇನಾಗಬೇಕು?: ಜನಾಭಿಪ್ರಾಯ

Published : 22 ಮೇ 2025, 23:30 IST
Last Updated : 22 ಮೇ 2025, 23:30 IST
ಫಾಲೋ ಮಾಡಿ
Comments
‘ಜಿಬಿಎ ರಚನೆಯ ನಂತರ ಮುಂದೇನಾಗಬೇಕು’– ಈ ಪ್ರಶ್ನೆಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.
ಬಿಬಿಎಂಪಿಯನ್ನು ಜಿಬಿಎ ಮಾಡುತ್ತಿರುವುದು ಸರಿ. ಆದರೆ, ಗ್ರೇಟ್‌ ಎನಿಸುವಷ್ಟು ಅಭಿವೃದ್ಧಿ ಎಲ್ಲಿದೆ? ಉದ್ಯಾನ ನಗರಿ ಈಗ ತ್ಯಾಜ್ಯ ನಗರವಾಗಿ ಬದಲಾಗಿದೆ. ಗುಂಡಿಗಳೇ ಇಲ್ಲದ ರಸ್ತೆಗಳು ಎಲ್ಲಿವೆ? ಪಾದಚಾರಿ ಮಾರ್ಗಗಳು ವ್ಯಾಪಾರ ಮಾಡುವ ಸ್ಥಳಗಳಾಗಿವೆ. ಅನ್ಯ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ನಗರದಲ್ಲಿನ ಹಸಿರೀಕರಣ ಮಾಯಾವಾಗಿದೆ. ಜಿಬಿಎ ಮಾಡುವ ಮುನ್ನ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು.
– ದೀಪುರಾವ್ ಕೆ.ಎ., ಕೆಂಚನಪುರ
ಜಿಬಿಎಗೆ ಆರಂಭಿಕವಾಗಿ ವಿರೋಧ ವ್ಯಕ್ತಪಡಿಸಲಾಗುತ್ತದೆ. ಆದರೆ, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಮುಖ್ಯವಾಗಿ ಜಿಬಿಎಗೆ ಚುನಾವಣೆ ನಡೆಸಬೇಕು. ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆಗೆ ಸೇರಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಭವಿಷ್ಯದಲ್ಲಿ ಮಳೆಯಿಂದ ಆಗುವ ಹಾನಿಯನ್ನು ತಪ್ಪಿಸಲು ಯೋಜನೆಗಳನ್ನು ರೂಪಿಸಬೇಕು. ನಗರದಲ್ಲಿ ಸ್ವಚ್ಛತೆ, ರಸ್ತೆ ಸಾರಿಗೆ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು.
– ತಾ.ಸಿ. ತಿಮ್ಮಯ್ಯ, ಮಲ್ಲತ್ತಹಳ್ಳಿ
ಗ್ರೇಟರ್‌ ಬೆಂಗಳೂರು ಹೋಗಿ ‘ಲೂಟರ್ಸ್‌ ಬೆಂಗಳೂರು’ ಆಗದಿರಲಿ. ಈಗಾಗಲೇ ಬೆಂಗಳೂರಿನ ಕೆರೆ–ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡು, ಕಾಂಕ್ರೀಟ್‌ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಎಲ್ಲ ರಸ್ತೆಗಳು ಗುಂಡಿಮಯವಾಗಿವೆ. ಗಾರ್ಡನ್‌ ಸಿಟಿ ಹೋಗಿ ‘ಗಾರ್ಬೇಜ್‌ ಸಿಟಿ’ಯಾಗಿ ಬದಲಾಗಿದೆ. ಜಿಬಿಎಯಲ್ಲಿ ಸ್ವಚ್ಛ, ಸುಂದರ ಹಾಗೂ ಸುಸಜ್ಜಿತ ಬೆಂಗಳೂರಿನ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕು.
– ಹು.ಕಾ. ಗೌಡಯ್ಯ, ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ 
ಜಿಬಿಎ ಮಾಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಜಿಬಿಎನಲ್ಲಿ ಸಂಚಾರ ದಟ್ಟಣೆ, ಕಸ ವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಬಿಬಿಎಂಪಿ ಜಿಬಿಎ ಆಗಿ ಬದಲಾದರೆ, ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
– ಭೀಮಾ ನಾಯಕ, ಗೋವಿಂದರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT