ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಜ್ಯೋತಿ: ಮೊದಲ ದಿನವೇ ಕೈಕೊಟ್ಟ ಸರ್ವರ್‌

ಮೊದಲ ದಿನ 55 ಸಾವಿರ ಗ್ರಾಹಕರ ನೋಂದಣಿ
Published 18 ಜೂನ್ 2023, 16:07 IST
Last Updated 18 ಜೂನ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಪೈಕಿ ‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಭಾನುವಾರದಿಂದ ಆರಂಭವಾಗಿದ್ದು ಮೊದಲ ದಿನವೇ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅರ್ಜಿ ಸಲ್ಲಿಕೆಗೆ ಜನ ಪರದಾಡಿದರು.

ಪ್ರತಿ ಗೃಹ ಬಳಕೆ ಗ್ರಾಹಕರಿಗೆ ತಿಂಗಳಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಆದೇಶ ಹೊರಡಿಸಿದೆ. ನಿಗದಿತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಭಾನುವಾರದಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆಗೆ ತೊಡಕಾಗಿತ್ತು.

ಭಾನುವಾರ ಬೆಳಿಗ್ಗೆ ಪೋರ್ಟಲ್‌ ಚಾಲನೆಯಾದ ಆದ ಕೆಲವೇ ನಿಮಿಷದಲ್ಲಿ ಸ್ಥಗಿತಗೊಂಡಿತು. ಅದಾದ ಮೇಲೆ ಪೋರ್ಟ್‌ಲ್‌ ಸರಿ ಪಡಿಸಲಾಯಿತು. ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ಸ್ಥಳೀಯ ಕಚೇರಿಗಳು, ಗ್ರಾಮ ಒನ್‌, ಬೆಂಗಳೂರು ಒನ್‌ ಮೂಲಕ ಭಾನುವಾರ ಸಂಜೆ 6 ಗಂಟೆ ವೇಳೆಗೆ ಒಟ್ಟು 55 ಸಾವಿರ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.  

ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ – https://sevasindhugs.karnataka.gov.in (ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌) ಅಥವಾ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರ, ಗ್ರಾಮ ಪಂಚಾಯಿತಿ, ನಾಡ ಕಚೇರಿ ಅಥವಾ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ಸ್ಥಳೀಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಧಾರ್‌ ಸಂಖ್ಯೆ ಹಾಗೂ ವಿದ್ಯುತ್‌ ಖಾತೆ ಸಂಖ್ಯೆ (ಆರ್‌ಆರ್‌ ನಂಬರ್‌) ಹಾಗೂ ಮೊಬೈಲ್‌ ಸಂಖ್ಯೆಯನ್ನು ಹೊಂದಿಸಿಕೊಂಡು ತಾವೇ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದ ಗ್ರಾಹಕರು ಸಮಸ್ಯೆಗೆ ಸಿಲುಕಿದ್ದರು. ‘ಗೃಹ ಜ್ಯೋತಿ’ ಯೋಜನೆಯ ಪ್ರಯೋಜನ ಪಡೆಯಲು ಮೊದಲ ದಿನವೇ ಅರ್ಜಿ ಸಲ್ಲಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದ ಅನೇಕರಿಗೆ ನಿರಾಶೆಯಾಯಿತು.

‘ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ಯೋಜನೆಯ ವಿಂಡೊ ಮೇಲೆ ಕ್ಲಿಕ್‌ ಮಾಡಿದ ತಕ್ಷಣ ‘ನಾಟ್‌ ರೀಚಬಲ್‌...’ ಎಂದು ಬರುತ್ತಿದೆ. ಇದರಿಂದ ಮೊದಲ ದಿನ ಅರ್ಜಿ ಸಲ್ಲಿಕೆ ಸಾಧ್ಯವಾಗಿಲ್ಲ. ನೋಂದಣಿಗೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಳಸಿಕೊಂಡು ಅರ್ಜಿ ಸಲ್ಲಿಸುವುದಕ್ಕೂ ಸಾಧ್ಯವಾಗಿಲ್ಲ’ ಎಂದು ನಾಗರಿಕರು ದೂರಿದ್ದಾರೆ.

‘ಭಾನುವಾರ ಒಮ್ಮೆಲೇ ಸಾವಿರಾರು ಸಂಖ್ಯೆಯಲ್ಲಿ ಪೋರ್ಟಲ್‌ ತೆರೆದಿದ್ದರಿಂದ ಸಮಸ್ಯೆ ಕಾಣಿಸಿಕೊಂಡಿತ್ತು. ಸೋಮವಾರದಿಂದ ಸಾರ್ವಜನಿಕರೇ ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್‌ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅರ್ಜಿ ಸಲ್ಲಿಕೆ ಎಲ್ಲಿ?

ಸೇವಾ ಸಿಂಧು ಪೋರ್ಟಲ್‌ – https://sevasindhugs.karnataka.gov.in (ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌) ಅಥವಾ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರ, ಗ್ರಾಮ ಪಂಚಾಯಿತಿ, ನಾಡಕಚೇರಿ ಅಥವಾ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ಸ್ಥಳೀಯ ಕಚೇರಿಗಳಲ್ಲಿ
ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT