ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಎನ್‌1 ಸೋಂಕಿನಿಂದ ಬಳಲಿದ ವೈದ್ಯ

ನಗರದಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ವರದಿ l ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್
Last Updated 29 ಫೆಬ್ರುವರಿ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎಚ್‌1ಎನ್‌1 ಸೋಂಕಿನ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿದ್ದು, ಚಿಕಿತ್ಸೆ ನೀಡುವ ವೈದ್ಯರೇ ಈ ಜ್ವರದಿಂದ ಬಳಲಿದ್ದಾರೆ.

ಬನಶಂಕರಿ 1ನೇ ಹಂತದ ಬ್ಯಾಂಕ್‌ ಕಾಲೋನಿಯಲ್ಲಿರುವ ಪ್ರಶಾಂತ್ ಆಸ್ಪತ್ರೆಯ ವೈದ್ಯರಿಗೆ ಎಚ್‌1ಎನ್‌1 ಸೋಂಕು ತಗುಲಿದೆ. ಅವರು ಅದೇ ಆಸ್ಪತ್ರೆಯಲ್ಲಿ ಈಗ ರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 8 ಮಂದಿ ಈ ಸೋಂಕಿಗೆ ಅಲ್ಲಿ ಚಿಕಿತ್ಸೆ ಪಡೆದು, ಬಿಡುಗಡೆಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆಸ್ಪತ್ರೆಯ ಮುಖ್ಯಸ್ಥ ಡಾ.ಮೋಹನ್, ‘ಇತ್ತೀಚೆಗೆ ಎಚ್1ಎನ್1 ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗುತ್ತದೆ. ಸೋಂಕಿತ ವೈದ್ಯರು ಆಸ್ಪತ್ರೆಗೆ ಸಲಹೆಗಾರರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಅವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಇದರಿಂದಾಗಿ ಅವರಿಗೆ ಸೋಂಕು ತಗುಲಿದೆ. ವೈದ್ಯರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಆತಂಕಪಡಬೇಕಿಲ್ಲ. ಮುಂಜಾಗ್ರತಾ ಕ್ರಮವಾಗಿ ಈ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಪ್ರತ್ಯೇಕ ವಾರ್ಡ್: ರಾಜ್ಯದಲ್ಲಿ ಈವ ರೆಗೂ 2,020 ಶಂಕಿತರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 220 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ತುಮಕೂರು, ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಸಾವಿನ ಪ್ರಕರಣಗಳು ವರದಿ ಆಗಿದೆ. 50ರಷ್ಟು ಅಧಿಕ ಪ್ರಕರಣಗಳು (115) ನಗರದಲ್ಲಿಯೇ ವರದಿಯಾಗಿವೆ.

ಸೋಂಕಿತರಿಗೆ ಚಿಕಿತ್ಸೆ ನೀಡಲುಆರೋಗ್ಯ ಇಲಾಖೆಯು ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿದೆ.ರಾಜ್ಯದಾದ್ಯಂತ 238 ಖಾಸಗಿ ಔಷಧಾಲಯಗಳಲ್ಲಿ ‘ಟಾಮಿಫ್ಲೂ’ ಮಾತ್ರೆಗಳು ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.

**

‘ಪರೀಕ್ಷೆಗೆ ₹ 2,500 ದರ ನಿಗದಿ’
ನಗರದ ನಿಮ್ಹಾನ್ಸ್, ನಾರಾಯಣ ನೇತ್ರಾಲಯ, ಮಣಿಪಾಲ್ ಆಸ್ಪತ್ರೆ, ಕಮಾಂಡ್ ಆಸ್ಪತ್ರೆ ಮತ್ತು ಉಡುಪಿಯ ಮಣಿಪಾಲ್ ಆಸ್ಪತ್ರೆಯ ಪರೀಕ್ಷಾ ಕೇಂದ್ರಗಳಲ್ಲಿ ಗಂಟಲಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ನಿಮ್ಹಾನ್ಸ್ ಮತ್ತು ಕೆ.ಎಂ.ಸಿ. ಮಣಿಪಾಲ್‍ನಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಕಮಾಂಡ್ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯದಲ್ಲಿ ಸೈನಿಕರ ಕುಟುಂಬ ಹೊರತುಪಡಿಸಿ ಉಳಿದಂತೆ ಪ್ರತಿ ಪರೀಕ್ಷೆಗೆ ₹ 2,500 ನಿಗದಿಪಡಿಸಲಾಗಿದೆ. ಚಿತ್ರಮಂದಿರ,ಬಸ್ ನಿಲ್ದಾಣಗಳು, ಮೆಟ್ರೊ ಹಾಗೂ ರೈಲು ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಕಿ–ಅಂಶಗಳು
115:
ನಗರದಲ್ಲಿ ವರದಿಯಾದ ಎಚ್‌1ಎನ್‌1 ಪ್ರಕರಣಗಳು
201:ನಗರದಲ್ಲಿ ವರದಿಯಾದ ಡೆಂಗಿ ಪ್ರಕರಣಗಳು
54:ನಗರದಲ್ಲಿ ವರದಿಯಾದ ಚಿಕೂನ್‌ ಗುನ್ಯಾ ಪ್ರಕರಣಗಳು
215:ಕೋವಿಡ್‌ ಸೋಂಕಿಗೆ ಪರೀಕ್ಷಾ ವರದಿ ಪಡೆದ ಸೋಂಕಿತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT