ಭಾನುವಾರ, ಜೂನ್ 7, 2020
22 °C
ಹೇರ್‌ ಕಟಿಂಗ್‌ಗೆ ಮಾತ್ರ ಒಲವು

ಸಲೂನ್‌ಗಳಲ್ಲಿ ಈಗಲೂ ಗ್ರಾಹಕರ ಬರ; ಶೇ 50ರಷ್ಟು ಆದಾಯ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಸಡಿಲಗೊಂಡು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ, ಹೇರ್‌ಕಟಿಂಗ್‌ ಶಾಪ್‌, ಸಲೂನ್‌ ಹಾಗೂ ಸ್ಪಾಗಳ ಸ್ಥಿತಿ ಸುಧಾರಿಸಿಲ್ಲ. ಗ್ರಾಹಕರು ಕ್ಷೌರದ ಅಂಗಡಿಗಳಿಗೆ ಹೋಗಲು ಈಗಲೂ ಹಿಂಜರಿಯುತ್ತಿದ್ದಾರೆ. ಕೆಲಸ ಪ್ರಾರಂಭಿಸಿ ನಾಲ್ಕು ದಿನಗಳಾದರೂ ಶೇ 50ರಷ್ಟೂ ದುಡಿಮೆ ಆಗುತ್ತಿಲ್ಲ ಎಂದು ಕ್ಷೌರಿಕರು ಹೇಳುತ್ತಾರೆ. 

‘ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಳಿಗೆ ತೆಗೆದಿದ್ದರೂ ಗ್ರಾಹಕರು ಬರುತ್ತಿಲ್ಲ. ಲಾಕ್‌ಡೌನ್‌ಗಿಂತಲೂ ಮೊದಲು ದಿನಕ್ಕೆ 30ರಿಂದ 35 ಗ್ರಾಹಕರು ಬರುತ್ತಿದ್ದರು. ಈಗ ಹತ್ತು ಜನರೂ ಬರುತ್ತಿಲ್ಲ’ ಎಂದು ಆರ್.ಟಿ. ನಗರದ ಸಲೂನ್‌ ಒಂದರ ಮಾಲೀಕ ಸಲೀಂ ಹೇಳಿದರು. 

‘ಮೊದಲು ಹೇರ್ ಕಟ್‌ ಜೊತೆಗೆ ಶೇವಿಂಗ್, ಫೇಷಿಯಲ್‌, ಹೇರ್‌ ಕಲರ್, ಮಸಾಜ್‌‌ ಮಾಡಿಸಿಕೊಳ್ಳುತ್ತಿದ್ದರು. ಈಗ, ಹೇರ್‌ ಕಟಿಂಗ್‌ ಮಾತ್ರ ಮಾಡಿಸಿಕೊಳ್ಳುತ್ತಾರೆ. ಕಟಿಂಗ್‌ಗೆ ₹70 ಇದ್ದರೆ, ಕೂದಲಿಗೆ ಬಣ್ಣ ಹಚ್ಚಲು, ಫೇಷಿಯಲ್‌, ಮಸಾಜ್‌ ಎಲ್ಲ ಸೇರಿ ₹300ರಿಂದ ₹400 ಆಗುತ್ತಿತ್ತು. ಗ್ರಾಹಕರು ಕಡಿಮೆ ಇದ್ದರೂ ಈ ಎಲ್ಲ ಸೇವೆ ‍ಪಡೆದುಕೊಂಡಿದ್ದರೆ ಅನುಕೂಲವಾಗುತ್ತಿತ್ತು’ ಎಂದರು. 

‘ರಾಜ್ಯದಲ್ಲಿ ಸುಮಾರು 3.5 ಲಕ್ಷ ಜನ ಕ್ಷೌರಿಕರಿದ್ದಾರೆ. ಈ ಪೈಕಿ, ಒಂದು ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ಇದ್ದಾರೆ. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕರು ಬಡವರು. ಗ್ರಾಹಕರಿಲ್ಲದೆ ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದು ರಾಜ್ಯ ಸವಿತಾ ಸಮಾಜ ಸಂಘದ ಸಂಚಾಲಕ ಎಂ.ಎಸ್. ಮುತ್ತುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಬಾಡಿಗೆ ಸಮಸ್ಯೆ: 

‘₹50ಲಕ್ಷದಿಂದ ₹60 ಲಕ್ಷದವರೆಗೆ ಬಂಡವಾಳ ಹೂಡಿ ಸ್ಪಾಗಳನ್ನು ಪ್ರಾರಂಭಿಸಿದ್ದೇವೆ. ತಿಂಗಳ ಬಾಡಿಗೆಯೇ ₹70 ಸಾವಿರದಿಂದ ₹80ಸಾವಿರದವರೆಗೆ ಆಗುತ್ತದೆ. ಬೇರೆ ರಾಜ್ಯಗಳ ಕೆಲಸಗಾರರು ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ಈಗ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ಸ್ಪಾದ ಮಾಲೀಕರೊಬ್ಬರು ಹೇಳಿದರು. 

‘ಸೋಂಕು ಹರಡುವ ಭೀತಿಯಿಂದ ಕೆಲವರು ಮಸಾಜ್‌ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕಟಿಂಗ್‌ ಮಾಡುವಾಗ ಬಳಸಿ ಬಿಸಾಡುವಂತಹ ಬಟ್ಟೆಗಳನ್ನು ಹಾಕುತ್ತೇವೆ. ಇದಕ್ಕೆ ₹100 ಹೆಚ್ಚು ಕೊಡಬೇಕಾಗುತ್ತದೆ. ಕೆಲವು ಗ್ರಾಹಕರು ಇದಕ್ಕೆ ಒಪ್ಪಿದರೆ, ಕೆಲವರು ಹೆಚ್ಚು ಹಣ ಕೊಡಲು ಒಪ್ಪುವುದಿಲ್ಲ’ ಎಂದು ಅವರು ಹೇಳಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು