ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥವಾದ ಹಲಸೂರು ಕೆರೆ

ಕೆರೆಯ ಒಡಲು ಸೇರುತ್ತಿದೆ ಕೊಳಚೆ ನೀರು l ಹೂಳು ತುಂಬಿದ ಪ್ರದೇಶದಲ್ಲಿ ಸೊಳ್ಳೆಗಳ ಉತ್ಪತ್ತಿ
Last Updated 30 ನವೆಂಬರ್ 2019, 4:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳ ಎನಿಸಿದ್ದ ಹಲಸೂರು ಕೆರೆ ಈಗ ಹೂಳು ತುಂಬಿಕೊಂಡು ಹಾಳಾಗಿದೆ. ವಾಯುವಿಹಾರಕ್ಕೆ ಬರುವವರು ದುರ್ವಾಸನೆ ಸಹಿಸಲಾಗದೆ ಹಿಂದಿರುಗುತ್ತಿದ್ದಾರೆ. ಬಿಬಿಎಂಪಿ, ಮೀನುಗಾರಿಕೆ ಮತ್ತು ಸಣ್ಣ ನೀರಾವರಿ ಇಲಾಖೆಯೇ ನಿರ್ವಹಣೆ ಹೊಣೆ ಹೊತ್ತಿದ್ದರೂ ಈ ಕೆರೆ ಅನಾಥವಾಗಿದೆ.

113 ಎಕರೆ ವಿಸ್ತೀರ್ಣದ ಈ ಜಲಕಾಯದ ಮುಖ್ಯದ್ವಾರದ ಬಳಿ ಎರಡು ರಾಜಕಾಲುವೆಗಳು ಇವೆ. ಮಳೆ ಬಂದಾಗ ಈ ಕಾಲುವೆಯಲ್ಲಿನ ಕೊಳಚೆ ನೀರು ತುಂಬಿ ಹರಿದು ಕೆರೆ ಸೇರುತ್ತಿದೆ. ಚಿನ್ನಪ್ಪ ಗಾರ್ಡನ್‌ ಮತ್ತು ಜೀವನಹಳ್ಳಿ ಕಡೆಯಿಂದ ಇಲ್ಲಿ ಕಲುಷಿತ ನೀರು ಬರುತ್ತಿದೆ. ಇದರಿಂದ ಜಲಕಾಯದಲ್ಲಿ ಹೂಳು ತುಂಬಿದ್ದು, ಸೊಳ್ಳೆಗಳ ಆವಾಸಸ್ಥಾನವಾಗಿದೆ.

‘ಕೆರೆಯ ಮತ್ತೊಂದು ಬದಿಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ನಿರ್ಮಾಣ ಮಾಡಲಾಗಿದೆ. ಆದರೆ,ಎಸ್‌ಟಿಪಿಗೂ ಮತ್ತು ರಾಜಕಾಲುವೆಗೂ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ, ಕಲುಷಿತ ನೀರು ನೇರವಾಗಿ ಕೆರೆ ಸೇರುತ್ತಿದೆ’ ಎಂದುನಿವಾಸಿ ಅವಿನಾಶ್‌ ಹೆಗ್ಡೆ ಹೇಳಿದರು.

‘ಕೆರೆ ಸ್ವ‌ಚ್ಛಗೊಳಿಸಬೇಕು ಎಂದು ನಾವು ಬಿಬಿಎಂಪಿಯನ್ನು ಒತ್ತಾಯಿಸುತ್ತಲೇ ಇದ್ದೇವೆ. ಕಳೆದ ಏಪ್ರಿಲ್‌–ಮೇನಲ್ಲಿ ಸ್ವಚ್ಛಗೊಳಿಸಲು ಆರಂಭಿಸಿದ್ದರು. ಆದರೆ, ಮಳೆ ಬರುತ್ತಿದೆ ಎಂಬ ಕಾರಣಕ್ಕೆ ನಿಲ್ಲಿಸಿದರು. ಮಳೆ ನಿಂತ ನಂತರ ಮನವಿ ಮಾಡಿದರೆ, ಗಣೇಶಮೂರ್ತಿ ವಿಸರ್ಜನೆ, ನಂತರ ದುರ್ಗಾ ಮೂರ್ತಿಗಳ ವಿಸರ್ಜನೆ ಇದೆ ಎಂದರು. ಈಗ, ಚುನಾವಣಾ ನೀತಿ ಸಂಹಿತೆಯ ನೆಪ ಹೇಳುತ್ತಿದ್ದಾರೆ’ ಎಂದು ಸ್ಥಳೀಯರಾದ ಮೋಹನ್‌ ರಾಜ್‌ ದೂರಿದರು.

‘ಕಳೆದ ಜೂನ್‌ 1ರಂದು ಸ್ಥಳೀಯರೆಲ್ಲ ಒಂದುಗೂಡಿ ಕೆರೆಯನ್ನು ಸ್ವಚ್ಛಗೊಳಿಸಿದ್ದೆವು. ಸಾವಿರ ಜನ ಸೇರಿ ಈ ಕೆಲಸ ಮಾಡಿದ್ದೆವು. ಕೆರೆ ಮಲಿನವಾಗಿರುವುದರಿಂದ ನೀರೇ ಕಾಣುತ್ತಿಲ್ಲ’ ಎಂದು ಹೇಮಾ ಹತ್ತಂಗಡಿ ಹೇಳಿದರು.

ಪ್ರೆಸ್ಟೀಜ್, ಎಂಇಜಿ ನಿರ್ವಹಣೆ: ಕೆರೆಯ ಸ್ವಲ್ಪ ಭಾಗದ ನಿರ್ವಹಣೆ ಹೊಣೆಯನ್ನು ಪ್ರೆಸ್ಟೀಜ್‌ ಕಂಪನಿ ಮತ್ತು ಕೆರೆಯ ಬಳಿಯ ಉದ್ಯಾನದ ನಿರ್ವಹಣೆಯನ್ನು ಎಂಇಜಿ ಸಂಸ್ಥೆ ಮಾಡುತ್ತಿವೆ. ಕೆರೆಯ ಸಂಪೂರ್ಣ ಜವಾಬ್ದಾರಿಯನ್ನು‍ಪ್ರೆಸ್ಟೀಜ್‌ ಕಂಪನಿಗೆ ನೀಡಲು ಬಿಬಿಎಂಪಿ ಮಾತುಕತೆ ನಡೆಸುತ್ತಿದೆ. ಆದರೆ, ಜಲ
ಕಾಯಕ್ಕೆ ಕೊಳಚೆ ನೀರು ಹರಿಯುವುದನ್ನು ತಡೆದರೆ ಮಾತ್ರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಹೊತ್ತು
ಕೊಳ್ಳುತ್ತೇವೆ ಎಂದು ಪ್ರೆಸ್ಟೀಜ್‌ ಹೇಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಚರ್ಚೆ ಇಂದು: ಕೆರೆಯ ಅಳಿವು–ಉಳಿವಿನ ಬಗ್ಗೆ ಚರ್ಚೆ ನಡೆಸಲು ಮುಂದಾಗಿರುವ ಸ್ಥಳೀಯರು, ಇದೇ 30ರಂದು ಬೆಳಿಗ್ಗೆ 7.30ಕ್ಕೆ ಕೆರೆಯ ಮುಖ್ಯದ್ವಾರದ ಎದುರು ಸೇರಲಿದ್ದಾರೆ. ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಸರವಣ ಅವರನ್ನು ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT