ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಶುರುವಾಗಿದೆ; ಮುಂದುವರಿಸಲು ಅವಕಾಶ ಕೊಡಿ

ರಾಜಕೀಯದಲ್ಲಿ ವೈಯಕ್ತಿಕ ಗೌರವ, ಪ್ರತಿಷ್ಠೆ ಬೇಡ: ಪ್ರಿಯಾಂಕ್ ಖರ್ಗೆ
Last Updated 28 ಏಪ್ರಿಲ್ 2018, 11:00 IST
ಅಕ್ಷರ ಗಾತ್ರ

ಚಿತ್ತಾಪುರ: ‘ಮೊದಲ ಬಾರಿ ಮತದಾರರ ಆಶೀರ್ವಾದದಿಂದ ಶಾಸಕನಾಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶುರು ಮಾಡಿದ್ದೇನೆ. ಅದನ್ನು ಮುಂದುವರಿಸಲು ಬೆಂಬಲಿಸಿ ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಇಲ್ಲಿನ ಪಕ್ಷದ ಚುನಾವಣೆ ಕಚೇರಿ ಯಲ್ಲಿ ಶುಕ್ರವಾರ ಬೆಣ್ಣೂರ್.ಕೆ, ಕೋರವಾರ ತಾಂಡಾ, ಮಲಘಾಣ ತಾಂಡಾ ಮತ್ತು ಅಶೋಕನಗರದ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯಿಂದ ಜನರು ಸಂತೋಷ ಗೊಂಡಿದ್ದಾರೆ. ನಮ್ಮೂರಿಗೆ ಬೇಕಾದ ಕೆಲಸ ಮಾಡಿದ್ದೀರಿ, ಇನ್ನೇನು ಬೇಕು ಎಂದು ಪ್ರಚಾರಕ್ಕೆ ತೆರಳಿದಾಗ ಸಂಭ್ರಮದ ಸ್ವಾಗತ ನೀಡುತ್ತಿದ್ದಾರೆ’ ಎಂದರು.

‘ಕ್ಷೇತ್ರದ ನಾಲ್ಕು ಗ್ರಾಮ ಹೊರತು ಪಡಿಸಿ ಉಳಿದೆಲ್ಲಾ ಗ್ರಾಮಗಳಿಗೆ ತೆರಳಿ ಚುನಾವಣೆ ಪ್ರಚಾರ ಮಾಡಿದ್ದೇನೆ. ಜನರ ಸಮಸ್ಯೆ, ಗ್ರಾಮಗಳ ಅಭಿವೃದ್ಧಿ ಕುರಿತು ಸಮಾಲೋಚಿಸಿದ್ದೇನೆ. ಜನರು ಗ್ರಾಮಗಳ ಕೆಲಸ ಬಿಟ್ಟರೆ ಬೇರೇನೂ  ಬಯಸುತ್ತಿಲ್ಲ. ಅವರಿಗೆ ವೈಯಕ್ತಿಕ ಗೌರವ, ಪ್ರತಿಷ್ಠೆಗಿಂತ ಅಭಿವೃದ್ಧಿ ಮುಖ್ಯ ಎಂಬುದು ಪ್ರಚಾರ ಸಮಯದಲ್ಲಿ ತಿಳಿದುಬಂದಿದೆ’ ಎಂದರು.

ಮುಖಂಡರು, ಕಾರ್ಯಕರ್ತರು ವೈಯಕ್ತಿಕ ಪ್ರತಿಷ್ಠೆ ಇಟ್ಟುಕೊಳ್ಳಬೇಡಿ. ನಿಮ್ಮೂರಿಗೆ ಬೇಕಾದ ಕೆಲಸಗಳಿಗೆ ಆದ್ಯತೆ ನೀಡಿ. ಕೇವಲ ವೈಯಕ್ತಿಕ ಕೆಲಸಗಳಿಗೆ ಸೀಮಿತರಾಗಬೇಡಿ. ಅದು ಆಗಲಿಲ್ಲ ಎಂದು ಪಕ್ಷದ ತತ್ವ, ಸಿದ್ಧಾಂತ, ನಂಬಿಕೆಗಳ ವಿರುದ್ಧ ರಾಜಕೀಯ ಮಾಡಲು ಮುಂದಾಗಬಾರದು. ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಇರಬೇಕು’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ಮಾಪಣ್ಣ ಗಂಜಗಿರಿ, ಸುನಿಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಶಿವಾಜಿ ಪೇಠಶಿರೂರ, ಶಂಭುಲಿಂಗ ಗುಂಡಗುರ್ತಿ, ಶಿವರುದ್ರ ಭೀಣಿ, ಚಂದ್ರಶೇಖರ ಕಾಶಿ, ಭೀಮರಾಯ ಹೊತಿನಮಡಿ ಇದ್ದರು.
 

**
ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಜನರ ನಾಡಿಮಿಡಿತ ಅರಿತುಕೊಂಡಿದ್ದೇನೆ. ಮತದಾರರು ಅಭಿವೃದ್ಧಿ ಪರವಾಗಿದ್ದಾರೆ. ಕಾಂಗ್ರೆಸ್ ಪರ ಒಲವು ಗಮನಿಸಿದರೆ ನನ್ನ ಗೆಲವು ನಿಶ್ಚಿತ
– ಪ್ರಿಯಾಂಕ್ ಖರ್ಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT