ಸೋಮವಾರ, ನವೆಂಬರ್ 18, 2019
25 °C
ಆ್ಯಪ್‌ನಲ್ಲಿ ಪರಿಚಯವಾಗಿದ್ದ ಯುವತಿ: ಕಾಡುಗೋಡಿ ಠಾಣೆಗೆ ದೂರು ನೀಡಿದ ಟೆಕಿ

ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್

Published:
Updated:

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿಯರೊಬ್ಬರನ್ನು ಮೊಬೈಲ್ ಆ್ಯಪ್‌ನಲ್ಲಿ ಪರಿಚಯಿಸಿಕೊಂಡಿದ್ದ ಯುವತಿಯೊಬ್ಬಳು ಖಾಸಗಿ ವಿಡಿಯೊಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೊಸ ಸ್ನೇಹಿತರನ್ನು ಹುಡುಕಿ ಮಾತನಾಡಲು ಮೊಬೈಲ್‌ಗೆ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದೇನೆ. ಈ ಆ್ಯಪ್‌ನಲ್ಲಿ ಪರಿಚಯ ಆಗಿದ್ದ ಪ್ರಿಯಾ ಸಿಂಗ್ ಎಂಬಾಕೆ ನನ್ನ ಖಾಸಗಿ ವಿಡಿಯೊಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದಾಳೆ’ ಎಂದು ಟೆಕಿ ಸುಜಿತ್‌ಕುಮಾರ್ ದೂರು ನೀಡಿದ್ದಾರೆ.

’ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಹೇಳುತ್ತಿರುವ ಯುವತಿ, ₹ 30 ಸಾವಿರ ನೀಡುವಂತೆ ಬೇಡಿಕೆ ಇಡುತ್ತಿದ್ದಾಳೆ’ ಎಂದು ಅವರು ಹೇಳಿದ್ದಾರೆ.

‘ಆ್ಯಪ್‌ನಲ್ಲಿ ಅಕ್ಟೋಬರ್ 28ರಂದು ನನಗೆ ಸಂದೇಶ ಕಳುಹಿಸಿದ್ದ ಯುವತಿ, ವಾಪಸು ವಿಡಿಯೊ ಕರೆ ಮಾಡಿಸಿಕೊಂಡಿದ್ದಳು. ನನ್ನನ್ನು ಪ್ರಚೋದಿಸಿ ಮಾತನಾಡಿಸಿದ್ದಳು. ಆ ಖಾಸಗಿ ವಿಡಿಯೊವನ್ನೇ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾಳೆ’ ಎಂದು ಸುಜಿತ್‌ಕುಮಾರ್‌ ತಿಳಿಸಿದ್ದಾರೆ. 

ಕಾಡುಗೋಡಿ ಪೊಲೀಸರು, ‘ದೂರುದಾರರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಯುವತಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಯಾರೋ ಅಪರಿಚಿತರು ಯುವತಿಯ ಹೆಸರಿನಲ್ಲಿ ಖಾತೆ ತೆರೆದು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಅನುಮಾನವೂ ಇದೆ’ ಎಂದರು.

ಪ್ರತಿಕ್ರಿಯಿಸಿ (+)