ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳ ಐಸಿಯು ಬಲಪಡಿಸಿ: ಆರೋಗ್ಯ ಇಲಾಖೆಗೆ ವೈದ್ಯಕೀಯ ತಜ್ಞರ ಸಲಹೆ

ಸಕಾರಾತ್ಮಕವಾಗಿ ಸ್ಪಂದಿಸಿದ ದಿನೇಶ್ ಗುಂಡೂರಾವ್
Published 19 ಜನವರಿ 2024, 20:54 IST
Last Updated 19 ಜನವರಿ 2024, 20:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು) ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇ‌ದೆ’ ಎಂದು ವೈದ್ಯಕೀಯ ತಜ್ಞರು ಆರೋಗ್ಯ ಇಲಾಖೆಗೆ ಸಲಹೆ ನೀಡಿದರು. 

ರಾಜ್ಯದ ಮುಂದಿನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಗಬೇಕಾದ ಆದ್ಯತೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವೈದ್ಯಕೀಯ ತಜ್ಞರೊಂದಿಗೆ ನಗರದಲ್ಲಿ ಶುಕ್ರವಾರ ಸಭೆ ನಡೆಸಿದರು. ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರಾಧ್ಯಾಪಕ ಡಾ.ರವಿ ಕೆ. ಸೇರಿ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರ ಜತೆಗೆ ಆರೋಗ್ಯ ಕ್ಷೇತ್ರದ ಸುಧಾರಣೆ ಬಗ್ಗೆ ಚರ್ಚಿಸಿದರು. 

ಐಸಿಯು ಚಿಕಿತ್ಸೆ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ತಜ್ಞರ ಸಲಹೆಗೆ ಪ್ರತಿಕ್ರಿಯಸಿದ ದಿನೇಶ್ ಗುಂಡೂರಾವ್, ‘ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು ಸಾಕಷ್ಟಿವೆ. ಆದರೆ, ಕೆಲವೆಡೆ ಸಿಬ್ಬಂದಿ ಕೊರತೆಯಿಂದ ಐಸಿಯು ಬೆಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುತ್ತಿಲ್ಲ. ಐಸಿಯು ಬೆಡ್‌ಗಳನ್ನು ಜನರಲ್ ಬೆಡ್‌ಗಳಾಗಿ ಬಳಸಲಾಗುತ್ತಿದೆ. ಈ ಬಗ್ಗೆ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

‘ನರ್ಸಿಂಗ್ ಕೋರ್ಸ್‌ಗಳನ್ನು ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ‌ಪ್ರಾರಂಭಿಸಬೇಕು. ವಿದೇಶಗಳಲ್ಲೂ ಆರೋಗ್ಯ ಸಿಬ್ಬಂದಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಬೇಕು’ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ಸಲಹೆ ನೀಡಿದರು. 

ಸಭೆಯಲ್ಲಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ‘ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆಗಳಿಗೆ ಸರ್ಕಾರ ನೀಡುತ್ತಿರುವ ಚಿಕಿತ್ಸಾ ದರ ಹೆಚ್ಚಾಗಬೇಕು‌‌ ಎಂದು ಮನವಿ ಮಾಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ‘ಈ ಪ್ರಸ್ತಾವನೆ ಸರ್ಕಾರದ ಮುಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ದರ ಪರಿಷ್ಕರಣೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT