ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಹೃದಯಾಘಾತ ಪ್ರಕರಣ ಶೇ30ರಷ್ಟು ಹೆಚ್ಚಳ

ಇಂದು ವಿಶ್ವ ಹೃದಯ ದಿನ
Last Updated 28 ಸೆಪ್ಟೆಂಬರ್ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ 30ರಷ್ಟು ಹೆಚ್ಚಳವಾಗಿದೆ. ಬಹುಷಃ ಕೋವಿಡ್‌ ಅಥವಾ ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟ ಹಾಗೂ ಜಡ ಜೀವನಶೈಲಿಯ ಪರಿಣಾಮಗಳೂ ಇದಕ್ಕೆ ಕಾರಣ ಇರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ತಗಲುವ ಭಯದಿಂದಾಗಿ ಕೆಲವರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನೂ ಮುಂದೂಡುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಲಭಿಸದ ಕಾರಣ ಅವರ ಚೇತರಿಕೆಗೂ ಸಮಸ್ಯೆ ಎದುರಾಗುತ್ತಿದೆ.

‘ಲಾಕ್‌ಡೌನ್‌ ಪರಿಣಾಮವಾಗಿ ಉಂಟಾದ ಉದ್ಯೋಗ ನಷ್ಟ, ವೇತನ ಕಡಿತ, ಅನಿಯಂತ್ರಿತ ಕೆಲಸದ ಅವಧಿ ಮುಂತಾದ ಕಾರಣಗಳಿಂದ ಜನರಲ್ಲಿ ಉದ್ವೇಗ, ಅಭದ್ರತೆ, ಮಾನಸಿಕ ಒತ್ತಡ ಹೆಚ್ಚುತ್ತಿದೆ. ಇದರಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ’ ಎಂದು ಸಕ್ರಾ ವರ್ಲ್ಡ್‌ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಶ್ರೀಕಂಠ ಶೆಟ್ಟಿ ಹೇಳುತ್ತಾರೆ.

‘ಕಳೆದ ವರ್ಷದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಏಕಾಏಕಿ ಶೇ 30ರಷ್ಟು ಹೆಚ್ಚಾಗಿದೆ’ ಎಂದೂ ಅವರು ತಿಳಿಸಿದರು.

ಜಯನಗರದ ಮಣಿಪಾಲ್ ಆಸ್ಪತ್ರೆ ಹಿರಿಯ ವೈದ್ಯ, ಡಾ.ಕೆ.ಪಿ. ಶ್ರೀಹರಿ ದಾಸ್, ‘ವಿಶೇಷವಾಗಿ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ತೀವ್ರ ಉದ್ವೇಗ ಕಾಣಿಸಿಕೊಳ್ಳುವುದಕ್ಕೆ ಕೆಲಸದ ಅವಧಿ ಹೆಚ್ಚಳವೂ ಪ್ರಮುಖ ಕಾರಣ.ಕೆಲಸದ ಕುರಿತ ಅಭದ್ರತೆ, ಜೊತೆಗೆ ಆರೋಗ್ಯದ ಕಡೆಗಣನೆ ಕೋವಿಡ್‌ ಭಯದಿಂದಾಗಿ ಕಟ್ಟುಪಾಡುಗಳನ್ನು ಪಾಲಿಸಲು ಆಗದಿರುವುದು ಈ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಜಿಮ್‌ನಲ್ಲಿ ಕಸರತ್ತು ನಡೆಸುವ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳು ಕಡಿಮೆಯಾಗಿದ್ದು ಇದಕ್ಕೆ ಒನ್ನೊಂದು ಕಾರಣ. ನಮ್ಮ ಆಸ್ಪತ್ರೆಗೆ ದಾಖಲಾಗಿರುವ ಯುವಜನರು ನಿತ್ಯ ವ್ಯಾಯಾಮ ಮಾಡುತ್ತಾ ದೃಢ ಆರೋಗ್ಯ ಹೊಂದಿದ್ದವರು. ಅವರಲ್ಲಿ ಈ ಹಿಂದೆ ಹೃದಯ ಸಮಸ್ಯೆಗಳು ಇರಲಿಲ್ಲ’ ಎಂದರು.

‘ಕೋವಿಡ್‌ ವ್ಯಾಪಿಸುವ ಮುನ್ನ ಹೃದಯಾಘಾತಕ್ಕೆ ಒಳಗಾದ ಮೂರರಿಂದ ನಾಲ್ವರು ರೋಗಿಗಳಿಗೆ ನಿತ್ಯ ಚಿಕಿತ್ಸೆ ನೀಡುತ್ತಿದ್ದೆವು. ಸೋಂಕು ಹರಡುವಿಕೆ ಹೆಚ್ಚಿದಂತೆ ಈ ಪ್ರಮಾಣ ಕಡಿಮೆಯಾಗಿತ್ತು. ಈಗ ಮತ್ತೆ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದು ನಾರಾಯಣ ಹೆಲ್ತ್‌ ಸಿಟಿಯ ಹಿರಿಯ ಹೃದ್ರೋಗ ತಜ್ಞ ಡಾ.ಶ್ರೀಕಾಂತ್‌ ಕೆ.ವಿ ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ‘ಕೋವಿಡ್‌ ಕಾಣಿಸಿಕೊಳ್ಳುವುದಕ್ಕಿಂತ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ 35ರಷ್ಟು ಕಡಿಮೆಯಾಗಿದೆ. ಆದರೆ, ಮರಣ ಹೊಂದುವರ ರೋಗಿಗಳ ಪ್ರಮಾಣ ಶೇ 4ರಷ್ಟು ಹೆಚ್ಚಳವಾಗಿದೆ. ನಮ್ಮ ಆಸ್ಪತ್ರೆಗೆ ಕೋವಿಡ್‌ಗೆ ಮುನ್ನ 540 ಮಂದಿ ದಾಖಲಾಗಿದ್ದರು. ಈ ವರ್ಷ ಅದೇ ಅವಧಿಯಲ್ಲಿ 350 ಮಂದಿ ದಾಖಲಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT