ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಸರಬರಾಜಾಗುತ್ತಿರುವ ತರಕಾರಿಗಳಲ್ಲಿ ವಿಷ: ಕೆಆರ್‌ಎಸ್

ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಆಗ್ರಹ
Published 7 ನವೆಂಬರ್ 2023, 14:53 IST
Last Updated 7 ನವೆಂಬರ್ 2023, 14:53 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಕ್ಕೆ ಸರಬರಾಜಾಗುತ್ತಿರುವ ತರಕಾರಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಭಾರ ಲೋಹ ಇರುವುದು ಎಂಪ್ರಿ ಅಧ್ಯಯನದಿಂದ ದೃಢಪಟ್ಟಿದೆ. ಈ ಪರಿಸ್ಥಿತಿಗೆ ಕಾರಣವಾಗಿರುವ ಬೆಂಗಳೂರು ಜಲ ಮಂಡಳಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಆಗ್ರಹಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ‘ಕೊಳಚೆ ನೀರು ಬಳಸಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಭಾರ ಲೋಹದ ಸಾಂದ್ರತೆ ಹೆಚ್ಚಾಗಿದ್ದು, ಇಂಥ ತರಕಾರಿ ತಿನ್ನುವುದರಿಂದ ಮಾನವನ ದೇಹಕ್ಕೆ ವಿಷಕಾರಿ ಅಂಶ ಸೇರ್ಪಡೆಯಾಗುವ ಅಪಾಯವಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ಎಂಪ‍್ರಿ) ಅಧ್ಯಯನ ತಿಳಿಸಿದೆ. ಜನರ ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುವ ಈ ವಿಚಾರದ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿಷ್ಕಾಳಜಿ ತೋರುತ್ತಿರುವುದು ದುರದೃಷ್ಟಕರ. ಈ ಪರಿಸ್ಥಿತಿಗೆ ಕಳೆದ ಎರಡು ದಶಕಗಳ ಕಾಲ ಆಡಳಿತ ನಡೆಸಿರುವ ಸರ್ಕಾರಗಳೇ ನೇರ ಕಾರಣ. ಇನ್ನಾದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ತಿಳಿಸಿದರು. 

‘ಬೆಂಗಳೂರಿಗೆ ಬಹುಪಾಲು ತರಕಾರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಿಂದ ಸರಬರಾಜಾಗುತ್ತಿದೆ. ಈ ಜಿಲ್ಲೆಗಳು ನೀರಾವರಿಯಿಂದ ವಂಚಿತವಾಗಿವೆ. ರಾಮನಗರ ಜಿಲ್ಲೆ ಹೊರತುಪಡಿಸಿ ಉಳಿದ ಮೂರು ಜಿಲ್ಲೆಗಳಿಗೆ ಕೊಳಚೆ ನೀರು ಸಂಸ್ಕರಿಸಿ, ಕೆರೆಗಳನ್ನು ತುಂಬಿಸಲಾಗುತ್ತಿದೆ. ನೀರಾವರಿಯಿಂದ ವಂಚಿತವಾಗಿರುವ ಈ ಜಿಲ್ಲೆಗಳಲ್ಲಿನ ಬಹುಪಾಲು ರೈತರು ಅರೆ ಬರೆ ಸಂಸ್ಕರಿಸಿದ ಬೆಂಗಳೂರಿನ ಕೊಳಚೆ ನೀರು ಬಳಸಿ, ತರಕಾರಿಗಳನ್ನು ಬೆಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಪ್ರಿಯ ಅಧ್ಯಯನವು 2022ರ ನವೆಂಬರ್‌ನಲ್ಲಿ ಪ್ರಕಟವಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಮಳೆಯಾಶ್ರಿತ ಬಯಲು ಪ್ರದೇಶದ ಜಿಲ್ಲೆಗಳ ರೈತರು ನೀರಾವರಿ ಸಮಸ್ಯೆ ಮತ್ತು ಮಳೆ ಕೊರತೆಯಿಂದ ವಿಧಿಯಿಲ್ಲದೆ ಕೊಳಚೆ ನೀರನ್ನು ಬಳಸಿ ಕೃಷಿಯಲ್ಲಿ ತೊಡಗಿದ್ದಾರೆ. ಸರ್ಕಾರದ ನಿಷ್ಕಾಳಜಿ, ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಪ್ರಸ್ತುತ ಬೆಂಗಳೂರು ಮತ್ತು ಈ ಮೂರು ಜಿಲ್ಲೆಗಳ ಜನರು ವಿಷಯುಕ್ತ ಆಹಾರ ಸೇವಿಸುವಂತಾಗಿದೆ. ಸರ್ಕಾರವೇ ಮುಂದೆ ನಿಂತು ಜನರಿಗೆ ವಿಷವುಣಿಸುತ್ತಿದೆ. ಮಾಲಿನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೆಕಾದ ಮಾಲಿನ್ಯ ನಿಯಂತ್ರಣ ಮಂಡಳಿಯು ಕಣ್ಮುಚ್ಚಿ ಕುಳಿತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT