ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಮಳೆ ಅಬ್ಬರ: ಹೊಳೆಯಾದ ರಸ್ತೆಗಳು, ಜಲಾವೃತವಾದ ಮನೆಗಳು

ಹೊಳೆಯಾದ ರಸ್ತೆಗಳು, ಜಲಾವೃತವಾದ ಮನೆಗಳು, ಮುಳುಗಿದ ವಾಹನಗಳು
Last Updated 9 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ಅಬ್ಬರಿಸಿ ವಿವಿಧ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಂದೊಡ್ಡಿರುವ ಮಳೆ ಬುಧವಾರವೂ ತನ್ನ ಆರ್ಭಟ ಮುಂದುವರಿಸಿತು.

ಬುಧವಾರ ಬೆಳಿಗ್ಗೆ ಯಾವುದೇ ಬಡಾವಣೆಗೆ ಹೋದರೂ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳು ಎದ್ದು ಕಾಣಿಸುತ್ತಿದ್ದವು. ರಾತ್ರಿ ಇಡೀ ಮಳೆ ಸುರಿದಿದ್ದರೂ ಅನೇಕರಿಗೆ ಅದರ ಅರಿವೇ ಇರಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ರಸ್ತೆಗಳು ನೀರಿನಿಂದ ಆವೃತವಾಗಿದ್ದವು.

ನಾಗರಬಾವಿ,ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್, ವಡ್ಡರಪಾಳ್ಯ, ಲಕ್ಕಸಂದ್ರ, ಗಿರಿನಗರ, ಹೊಸಕೆರೆಹಳ್ಳಿ, ಇಂದಿರಾನಗರ, ಚಾಮರಾಜಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್.ಆರ್. ನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ.

ಹೊರಮಾವು, ಎಚ್‌ಬಿಆರ್ ಲೇಔಟ್, ಸಹಕಾರ ನಗರ, ಚಿಕ್ಕಬಾಣಾವರ, ರಾಮಮೂರ್ತಿ ನಗರ, ಹೆಣ್ಣೂರು, ಮಾನ್ಯತಾ ಟೆಕ್‌ಪಾರ್ಕ್ ಸುತ್ತಮುತ್ತಲ ಬಡಾವಣೆಗಳು ಜಲಾವೃತಗೊಂಡವು. ಮನೆಯ ಬಳಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗಳು ನೀರಿನಲ್ಲಿ ಮುಳುಗಿ ತೇಲಾಡವು. ಮನೆ, ಅಂಗಡಿ– ಮುಂಗಟ್ಟುಗಳಿಗೂ ನುಗ್ಗಿದ್ದ ನೀರನ್ನು ಜನ ದಿನವಿಡೀ ಹೊರ ಹಾಕುವ ಕೆಲಸದಲ್ಲೇ ನಿರತರಾಗಿದ್ದರು.

ಹೊರಮಾವು ಕೆರೆ ಪಕ್ಕದ ಬಡಾವಣೆಗಳು, ದಾಸರಹಳ್ಳಿಯ ರುಕ್ಮಿಣಿನಗರ, ವಿದ್ಯಾನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ಜನ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು.

ಶಿವಾನಂದ ವೃತ್ತ ರೈಲ್ವೆ ಸೇತುವೆ ಕೆಳಗೆ ನಿಂತಿದ್ದ ನೀರಿನಲ್ಲಿ ಹಲವು ಕಾರುಗಳು ಸಿಲುಕಿಕೊಂಡಿದ್ದವು. ಹೆಬ್ಬಾಳ ಮೇಲ್ಸೇತುವೆ ಕೆಳಭಾಗದ ರಸ್ತೆಯೂ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಆವರಣ, ಹೆಬ್ಬಾಳದಿಂದ ಯಶವಂತಪುರ ಕಡೆಗೆ ಹೋಗುವ ರಿಂಗ್ ರಸ್ತೆಯು ಕೆರೆಯಂತಾಗಿತ್ತು. ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಪುಟ್ಟೇನಹಳ್ಳಿ ಜೈನ ಬಸದಿ ಮುಂಭಾಗದಲ್ಲಿ ಒಳಚರಂಡಿ ಒಡೆದು ಮಂದಿರದ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT