ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿಕೆ: ಉರುಳಿದ ಮರ, ವಿದ್ಯುತ್ ಕಂಬ

ಸಹಕಾರ ನಗರದಲ್ಲಿ ಅಂಗಡಿ, ಮನೆಗಳಿಗೆ ನುಗ್ಗಿದ ನೀರು
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ ಸಹ ಮಳೆ ಅಬ್ಬರ ಮುಂದುವರಿದಿತ್ತು. ಹಲವು ಪ್ರದೇಶಗಳಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಹೊಳೆಯಂತೆ ಮಳೆ ನೀರು ಹರಿಯಿತು.

ಸಹಕಾರ ನಗರ ವ್ಯಾಪ್ತಿಯಲ್ಲಿ ‌ಸುರಿದ ಭಾರಿ ಮಳೆಯಿಂದ ಹಲವು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು. ಮನೆಗಳಲ್ಲಿದ್ದ ಸಾಮಗ್ರಿ ನೀರಿನಲ್ಲಿ ತೊಯ್ದವು.

ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.
ಭಾರಿ ಮಳೆ ಸುರಿದ ವೇಳೆ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿಯಾಗಿದೆ. ಬಿಬಿಎಂಪಿ ಶಾಶ್ವತವಾಗಿ ಸಮಸ್ಯೆ ಪರಿಹರಿಸುತ್ತಿಲ್ಲ. ಸಮಸ್ಯೆಯಾದಾಗ‌ ಮಾತ್ರ ‌ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ‌ನೀಡುತ್ತಾರೆ. ಬಳಿಕ ಈ ಪ್ರದೇಶಕ್ಕೆ ಬರುವುದಿಲ್ಲ ಎಂದು ಆಪಾದಿಸಿದರು.

ಪೀಣ್ಯ, ಯಶವಂತಪುರ, ಶೇಷಾದ್ರಿಪುರ, ಮೆಜಿಸ್ಟಿಕ್, ಆಡುಗೋಡಿ, ಇಂದಿರಾನಗರ, ಹೆಬ್ಬಾಳ, ಯಲಹಂಕ, ರಾಜಾಜಿನಗರ ಭಾಗದಲ್ಲಿ ‌ಮಳೆಯಾಗಿದೆ. ಬುಧವಾರ ಸಹ ಕೆಲವು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.

ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜರತ್ನಂ ವೃತ್ತದಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದು‌‌ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೆಬ್ಬಾಳ ಪೊಲೀಸ್ ಠಾಣೆಯ‌ ವ್ಯಾಪ್ತಿಯ ರಾಯಲ್ ಮಾರ್ಟ್ ಬಳಿ ಗಾಳಿಗೆ ವಿದ್ಯುತ್ ಕಂಬವೊಂದು ನಿಲುಗಡೆ ಮಾಡಿದ್ದ ಕಾರಿನ ಮೇಲೆ ಉರುಳಿ ಬಿದ್ದಿತ್ತು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ  ಅಪಾಯ ತಪ್ಪಿತು. ವಿಜಯನಗರ, ಕೆಂಗೇರಿ, ಅಶೋಕ ನಗರ, ಕೋರಮಂಗಲ ಭಾಗದಲ್ಲೂ ಮಳೆಯಾಗಿದೆ.

ನಗರದಲ್ಲಿ ಗುರುವಾರ ಹಾಗೂ ಶುಕ್ರವಾರವೂ ಸಂಜೆ ಅಥವಾ ರಾತ್ರಿ ವೇಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದ ಹೆಬ್ಬಾಳದ ರಾಯಲ್ ಮಾರ್ಟ್ ಬಳಿ ಧರೆಗೆ ಉರುಳಿದ್ದ ವಿದ್ಯುತ್ ಕಂಬ
ನಗರದ ಹೆಬ್ಬಾಳದ ರಾಯಲ್ ಮಾರ್ಟ್ ಬಳಿ ಧರೆಗೆ ಉರುಳಿದ್ದ ವಿದ್ಯುತ್ ಕಂಬ

20ಕ್ಕೂ ಅಧಿಕ ಮನೆಗಳಿಗೆ ನೀರು

ಎರಡು ದಿನಗಳಲ್ಲಿ ಸುರಿದ ಮಳೆಯಿಂದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿದೆ. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ(ಎಸ್‌ಡಿಆರ್‌ಎಫ್‌) ಪ್ರಕಾರ ಪರಿಹಾರದ ಪ್ರಮಾಣ ನಿರ್ಧರಿಸಿ, ಪರಿಹಾರ ವಿತರಣೆ ಅಧಿಕಾರವನ್ನು ವಲಯದ ಆಯುಕ್ತರಿಗೆ ನೀಡಲಾಗಿದೆ. ಅವರೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪಶ್ಚಿಮ ಬೆಂಗಳೂರಿನಲ್ಲಿ 8, ಪೂರ್ವ ಬೆಂಗಳೂರಿನಲ್ಲಿ 2–3, ಉತ್ತರ ಬೆಂಗಳೂರಿನಲ್ಲಿ 11 ಮನೆಗಳಿಗೆ ನೀರು ನುಗ್ಗಿದೆ ಎಂದು ಮಾಹಿತಿ ಬಂದಿದೆ. ಪೂರ್ಣ ಪ್ರಮಾಣದ ವರದಿ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT